Advertisement

ಬಿ.ಇಡಿ ಪ್ರವೇಶಕ್ಕೂ ಕೋವಿಡ್‌ ಹೊಡೆತ!

11:37 PM Feb 04, 2022 | Team Udayavani |

ಬೆಂಗಳೂರು: ರಾಜ್ಯದ ಕೆಲವು ವಿಶ್ವವಿದ್ಯಾಲಯಗಳಿಂದ ಫ‌ಲಿತಾಂಶ ವಿಳಂಬ ಹಾಗೂ ಕೊರೊನಾ ಸಮಯದಲ್ಲಿ ಶಿಕ್ಷಕರು ಕೆಲಸ ಕಳೆದುಕೊಂಡಿರುವುದು, ಈ ಬಾರಿ ಬಿ.ಇಡಿ ಸೇರುವವರ ಸಂಖ್ಯೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

Advertisement

ರಾಜ್ಯದ ಒಟ್ಟಾರೆ 389 ಕಾಲೇಜುಗಳಲ್ಲಿ 17,223 ಸೀಟುಗಳು ಲಭ್ಯವಿದ್ದವು. ಈ ಪೈಕಿ 10,214 ಸೀಟುಗಳ ಭರ್ತಿಯಾಗಿದ್ದು, 7009 ಸೀಟುಗಳು ಹಾಗೆಯೇ ಉಳಿದಿವೆ. ಕಳೆದ ವರ್ಷ 382 ಕಾಲೇಜುಗಳ 16,789 ಸೀಟುಗಳಲ್ಲಿ 11,384 ಸೀಟುಗಳು ಭರ್ತಿಯಾಗಿ 5,405 ಮಾತ್ರ ಬಾಕಿ ಉಳಿದಿದ್ದವು. ಕಳೆದ ವರ್ಷ ಶೇ. 68ರಷ್ಟು ಸೀಟುಗಳು ಭರ್ತಿಯಾಗಿದ್ದರೆ, ಈ ಬಾರಿ ಶೇ. 59ರಷ್ಟು ಸೀಟುಗಳು ಮಾತ್ರ ಭರ್ತಿಯಾಗಿವೆ.

ಕೊರೊನಾದಿಂದ ನಿಗದಿತ ಸಮಯದಲ್ಲಿ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯ ನಡೆಯದ ಕಾರಣ ಕುವೆಂಪು ವಿಶ್ವವಿದ್ಯಾಲಯ, ಕಲಬುರಗಿ ವಿವಿ, ರಾಣಿ ಚೆನ್ನಮ್ಮ ವಿವಿ, ಮೈಸೂರು ಸೇರಿದಂತೆ ಹಲವು ವಿವಿಗಳು ಪದವಿ ಕೋರ್ಸುಗಳ ಫ‌ಲಿತಾಂಶ ನೀಡುವಲ್ಲಿ ವಿಳಂಬ ಮಾಡಿದ್ದವು. ಇದರ ಪರಿಣಾಮ ಬಿ.ಇಡಿ ಕೋರ್ಸ್‌ ಮೇಲೆ ಬಿದ್ದಿದೆ.

ಬಿ.ಇಡಿ ಪ್ರವೇಶ ಪ್ರಕ್ರಿಯೆ ಅಕ್ಟೋಬರ್‌-ನವೆಂಬರ್‌ ತಿಂಗಳಿನಲ್ಲಿ ನಡೆಯಲಿದೆ. ಇದಕ್ಕೂ ಮೊದಲು ಜುಲೈ-ಆಗಸ್ಟ್‌ನೊಳಗೆ ಎಲ್ಲ ವಿವಿಗಳು ಫ‌ಲಿತಾಂಶ ಪ್ರಕಟಿಸುತ್ತವೆ. ಆದರೆ, ವಿವಿಗಳು ನವೆಂಬರ್‌-ಡಿಸೆಂಬರ್‌ ಆದರೂ ಫ‌ಲಿ
ತಾಂಶ ಪ್ರಕಟಿಸದಿರುವುದು ಬಿ.ಇಡಿ ಮಾಡಬೇಕೆಂಬ ಆಕಾಂಕ್ಷೆ ಹೊಂದಿದ್ದವರಿಗೆ ನಿರಾಸೆ ಮೂಡಿಸಿದೆ.

ಕೊರೊನಾದಿಂದ ಸಾಕಷ್ಟು ಶಾಲೆಗಳಲ್ಲಿ ಶಿಕ್ಷಕರನ್ನು ಕೆಲಸದಿಂದ ತೆಗೆದಿದ್ದು ಕೂಡ ಕೋರ್ಸ್‌ ಪ್ರವೇಶದ ಮೇಲೆ ಪರಿಣಾಮ ಬೀರಿದೆ. ಬಿ.ಇಡಿ ಮಾಡುವ ಬದಲು ಸ್ನಾತಕೋತ್ತರ ಪದವಿ ಮಾಡುವುದು ಉತ್ತಮ. ಅನಂತರ ನೆಟ್‌/ಸ್ಲೆಟ್‌, ಪಿ.ಎಚ್‌ಡಿ ಮಾಡಿಕೊಂಡರೆ ಪಿಯು ಮತ್ತು ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇರಬಹುದು ಎನ್ನುವ ಆಲೋಚನೆ ಹಲವರದ್ದು. ಕಳೆದ ವರ್ಷಕ್ಕಿಂತ ಈ ಬಾರಿ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಕಡಿಮೆಯಾಗಿದೆ.

Advertisement

ಪ್ರತಿ ವರ್ಷ ಕನಿಷ್ಠ 10 ಸಾವಿರ ಮಂದಿ ಬಿ.ಇಡಿ ಪದವೀಧರರಾಗುತ್ತಾರೆ. ಸರಕಾರವು 2ರಿಂದ 3 ವರ್ಷಕ್ಕೆ 10ರಿಂದ 15 ಸಾವಿರ ಮಂದಿಯನ್ನು ಶಿಕ್ಷಕರಾಗಿ ನೇಮಕ ಮಾಡಿಕೊಳ್ಳುತ್ತದೆ. ಉದ್ಯೋಗಾವಕಾಶಗಳು ಕಡಿಮೆ ಇರುವುದರಿಂದ ಬಿ.ಇಡಿ ಪದವಿಗೆ ಅಭ್ಯರ್ಥಿಗಳು ಮುಂದಾಗದಿರಬಹುದು.
– ಡಾ| ಆರ್‌. ವಿಶಾಲ್‌,
ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ

ಕೆಲವು ವಿವಿಗಳು ನಿಗದಿತ ಸಮಯದಲ್ಲಿ ಫ‌ಲಿತಾಂಶ ನೀಡದಿರುವುದು ಬಿ.ಇಡಿ ಆಕಾಂಕ್ಷಿಗಳಿಗೆ ನಿರಾಸೆ ಮೂಡಿಸಿದೆ. ಬಿ.ಇಡಿ ಪ್ರವೇಶ ಪಡೆಯಲು ಇನ್ನೂ ಒಂದು ವರ್ಷ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿವಿಗಳ ತಪ್ಪಿಗೆ ಬಡ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ.
– ಡಾ| ರಮೇಶ್‌,
ಬಿ.ಇಡಿ. ಶಿಕ್ಷಕರ ಸಂಘದ ಅಧ್ಯಕ್ಷ

– ಎನ್‌.ಎಲ್‌. ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next