Advertisement

ಹೆದ್ದಾರಿ ಉದ್ಘಾಟನೆಯಾದರೂ ಸಿಗದ ಪರಿಹಾರ

02:15 AM Apr 30, 2022 | Team Udayavani |

ಬಂಟ್ವಾಳ: ಸಾಮಾನ್ಯವಾಗಿ ಹೆದ್ದಾರಿ ಕಾಮಗಾರಿ ವೇಳೆ ಖಾಸಗಿ ಭೂಮಿ ಸ್ವಾಧೀನ ಪಡಿಸಿಕೊಳ್ಳುವುದಾದರೆ ಅವರು ಕಳೆದುಕೊಂಡ ಭೂಮಿಯ ಮೌಲ್ಯವನ್ನು ನೀಡಿದ ಬಳಿಕವೇ ಕಾಮಗಾರಿ ಆರಂಭಿಸಲಾಗುತ್ತದೆ. ಆದರೆ ಬಿ.ಸಿ.ರೋಡು-ಪುಂಜಾಲಕಟ್ಟೆ ಹೆದ್ದಾರಿ ಅಭಿವೃದ್ಧಿ ಅದಕ್ಕೆ ಭಿನ್ನವಾಗಿದ್ದು, ಕಾಮಗಾರಿ ಮುಗಿದು ಹೆದ್ದಾರಿ ಉದ್ಘಾಟನೆಗೊಂಡರೂ ಸಾಕಷ್ಟು ಮಂದಿಗೆ ನಯಾಪೈಸೆ ಪರಿಹಾರ ಸಿಕ್ಕಿಲ್ಲ!

Advertisement

ಹೆದ್ದಾರಿಗಾಗಿ ಬಂಟ್ವಾಳ ಪುರಸಭೆ, ನಾವೂರು, ಕಾವಳಮೂಡೂರು, ಕಾವಳಪಡೂರು ಮತ್ತು ಪಿಲಾತಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಅನೇಕ ಮಂದಿ ಜಾಗ ಬಿಟ್ಟುಕೊಟ್ಟಿದ್ದರು. ಕಾಮಗಾರಿ ಆರಂಭಗೊಂಡು ಮೂರು ವರ್ಷ ಕಳೆದಿದ್ದು, ಹೆದ್ದಾರಿಗೆ ಬಿಡುಗಡೆಯಾದ ಅನುದಾನದಲ್ಲೇ ಪರಿಹಾರ ಒಳಗೊಂಡಿತ್ತು. ಈ ಹಿಂದೆ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಕೋವಿಡ್‌ ತಗಲಿದ್ದರಿಂದ ವಿಳಂಬ ವಾಗಿದೆ ಎನ್ನಲಾಗಿತ್ತು. ಆದರೆ ಇನ್ನೂ ಪರಿಹಾರ ನೀಡದಿರುವುದು ಅನುಮಾನಗಳಿಗೆ ಕಾರಣವಾಗಿದೆ. ಪ್ರತಿಭಟನೆ ನಡೆಸಿದರೂ ಪೂರ್ಣ ಮೊತ್ತ ಪಾವತಿಯಾಗಿಲ್ಲ ಎಂದು ಸಂತ್ರಸ್ತರು ನೋವು ತೋಡಿಕೊಂಡಿದ್ದಾರೆ.

ನಯಾ ಪೈಸೆಯೂ ಬಂದಿಲ್ಲ
ಭೂಮಿ ಕಳೆದುಕೊಂಡ ಪ್ರತೀ ಮಾಲಕರಿಂದ ದಾಖಲೆ ಪಡೆದು 2020ರ ಡಿಸೆಂಬರ್‌ನಲ್ಲಿ ಭೂಮಿಗೆ ನಿಗದಿ ಪಡಿಸಿದ ಮೊತ್ತ (ಅವಾರ್ಡ್‌)ವನ್ನು ನಮೂದಿಸಿ ನೋಟಿಸ್‌ ನೀಡಲಾಗಿದೆ. ಅದರಲ್ಲಿ ಬಂಟ್ವಾಳ ಪುರಸಭೆ ವ್ಯಾಪ್ತಿಯ ಸರ್ವೇ ನಂ. 25/14ರಲ್ಲಿ 0.03 ಗುಂಟೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಇದು ನಾಲ್ಕೈದು ಮಂದಿಗೆ ಸೇರಿದ ಜಮೀನು. ಅವರ ಭೂಮಿಗೆ ಎಲ್ಲ ಮೌಲ್ಯ ಸೇರಿ 1.82 ಕೋ.ರೂ. ನೀಡುವುದಾಗಿ ಪತ್ರದಲ್ಲಿ ತಿಳಿಸಿದ್ದರೂ ಈ ತನಕ ಒಂದು ಪೈಸೆಯೂ ಬಂದಿಲ್ಲ.

ಬಡ್ಡಿಯ ಕತೆ ಏನು?
ನಗರ/ಗ್ರಾಮಾಂತರ ಭಾಗದಲ್ಲಿ ಎಕರೆಗೆ ನಿಗದಿ ಪಡಿಸಿದ ಮೌಲ್ಯ, ಗುಂಟೆಯೊಂದಕ್ಕೆ ನಿಗದಿ ಪಡಿಸಿದ ಮೌಲ್ಯ, ನಗರ ವ್ಯಾಪ್ತಿಯಿಂದ ಇರುವ ದೂರ, ಕಟ್ಟಡದ ಮೌಲ್ಯ, ಮರಗಳ ಮೌಲ್ಯ (ತೋಟಗಾರಿಕೆ), ಇತರ ಮರಗಳ ಮೌಲ್ಯ ನಿಗದಿ ಪಡಿಸಿ ಒಟ್ಟು ಪರಿಹಾರವನ್ನು ಇಲಾಖೆ ನೀಡಿದ ಪತ್ರದಲ್ಲಿ ತಿಳಿಸಿದ್ದಾರೆ. ಜತೆಗೆ ಅಷ್ಟೇ ಮೊತ್ತವನ್ನು ಭೂ ಪರಿಹಾರದ ಮೊಬಲಗಿನ ಮೇಲೆ ಶೇ. 100 ಶಾಸನ ಬದ್ಧ ಭತ್ತೆ ಹಾಗೂ ಕಾಯ್ದೆಯ ಪ್ರಕಾರ ಪರಿಹಾರದ ಮೊತ್ತದ ಮೇಲೆ ಶೇ. 12 ಹೆಚ್ಚುವರಿ ಮೊತ್ತವನ್ನೂ ಸೇರಿಸಿ ವಿವರಿಸಲಾಗಿದೆ. ಇದು ಅಸಲಿನ ಕತೆಯಾದರೆ, ಆ ಮೊತ್ತ ವಿಳಂಬವಾಗಿರುವುದಕ್ಕೆ ಬಡ್ಡಿ ಏನಾಗುತ್ತದೆ ಎಂಬುದು ಕೂಡ ಯಕ್ಷಪ್ರಶ್ನೆಯಾಗಿದೆ.

ಕಾನೂನಿನ ಅನ್ವಯ ಕ್ರಮ
ರಾ.ಹೆ. ಇಲಾಖೆಯ ವಿಶೇಷ ಭೂಸ್ವಾಧೀನಾಧಿಕಾರಿಗಳ ಮತ್ತು ಸಕ್ಷಮ ಪ್ರಾಧಿಕಾರದಿಂದ ಬಂದಿರುವ ಪತ್ರದಲ್ಲಿ ದಾಖಲೆಗಳನ್ನು ಹಾಜರು ಪಡಿಸಿ ಪರಿಹಾರ ಮೊತ್ತ ಪಡೆಯಬೇಕು, ತಪ್ಪಿದಲ್ಲಿ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಆದರೆ ಈಗ ಅಧಿ ಕಾರಿಗಳೇ ತಪ್ಪಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳು ವವರು ಯಾರು ಎಂದು ಪ್ರಶ್ನಿಸುವಂತಾಗಿದೆ.

Advertisement

ಭೂಸ್ವಾಧೀನ ಪಡಿಸಿಕೊಂಡು ಪರಿಹಾರ ನೀಡದೆ ಇದ್ದರೆ ತಪ್ಪಾಗುತ್ತದೆ. ಭೂಸ್ವಾಧೀನಾಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರಿಗಳನ್ನು ನೇಮಿಸದೇ ಇರುವುದರಿಂದ ತೊಂದರೆಯಾಗಿತ್ತು. ಪ್ರಸ್ತುತ ಕೆಐಡಿಬಿ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಹೆಚ್ಚುವರಿ ಚಾರ್ಜ್‌ ನೀಡಿರುವ ಆದೇಶ ಎ. 21ರಂದು ಸಂಜೆ ಕೈಸೇರಿದ್ದು, ಅವರು ಅಧಿಕಾರ ಸ್ವೀಕರಿಸಿ ಭೂ ಮಾಲಕರಿಗೆ ಪರಿಹಾರ ಮೊತ್ತ ವಿತರಣೆಗೆ ಕ್ರಮ ಕೈಗೊಳ್ಳಲಿದ್ದಾರೆ.
– ಡಾ| ರಾಜೇಂದ್ರ ಕೆ.ವಿ., ದ.ಕ. ಜಿಲ್ಲಾಧಿಕಾರಿ

ಜಕ್ರಿಬೆಟ್ಟು ಮತ್ತು ಚಂಡ್ತಿಮಾರಿನಲ್ಲಿ ಎರಡು ಕಡೆ ನನ್ನ ಸ್ವಲ್ಪ ಜಾಗ ಹೆದ್ದಾರಿಗೆ ಹೋಗಿದ್ದು, ಈ ತನಕ ನಯಾಪೈಸೆ ಪರಿಹಾರ ಬಂದಿಲ್ಲ. ಸರ್ವೇ ನಂ. 25/14ರಲ್ಲಿ ನಾವು ನಾಲ್ಕೈದು ಮಂದಿಯ ಜಾಗವಿದ್ದು, ಇಲಾಖೆಯಿಂದ ಪತ್ರ ಬರೆದು ಮೊತ್ತವನ್ನು ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಕೇಳಿದಾಗ ಕೊಡುತ್ತೇವೆ ಎಂದಷ್ಟೇ ಹೇಳಿದ್ದಾರೆ.
– ಜಿನ್ನಪ್ಪ ಪೂಜಾರಿ ಚಂಡ್ತಿಮಾರ್‌,
ಹೆದ್ದಾರಿಗೆ ಜಾಗ ಬಿಟ್ಟಿರುವ ಸಂತ್ರಸ್ತ

 

Advertisement

Udayavani is now on Telegram. Click here to join our channel and stay updated with the latest news.

Next