Advertisement

ಕಾಮಗಾರಿ ಶೀಘ್ರ ಪುನರಾರಂಭಿಸದಿದ್ದರೆ ಹೋರಾಟ: ರಮಾನಾಥ ರೈ

03:45 AM Nov 28, 2018 | Karthik A |

ಮಂಗಳೂರು: ಮಂಗಳೂರು- ಬೆಂಗಳೂರು ನಡುವಣ ಪ್ರಮುಖ ಸಂಪರ್ಕ ರಸ್ತೆಯಾಗಿರುವ ರಾ. ಹೆದ್ದಾರಿ 75ರಲ್ಲಿ ಬಿ.ಸಿ.ರೋಡ್‌ – ಅಡ್ಡಹೊಳೆ ರಸ್ತೆಯ ಉನ್ನತೀಕರಣ ಕಾಮಗಾರಿಯನ್ನು ಕೂಡಲೇ ಪುನರಾರಂಭಿಸಬೇಕು ಇಲ್ಲದಿದ್ದರೆ ಅಡ್ಡಹೊಳೆಯಿಂದ ಮಂಗಳೂರುವರೆಗೆ ಪಾದಯಾತ್ರೆಯೊಂದಿಗೆ ಹೋರಾಟ ಆರಂಭಿಸಲಾಗುವುದು ಎಂದು ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ.

Advertisement

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಪಿಎ ಸರಕಾರವಿದ್ದಾಗ ಬಿ.ಸಿ.ರೋಡ್‌ – ಅಡ್ಡಹೊಳೆ ರಸ್ತೆಯನ್ನು ವಿಸ್ತರಿಸಿ ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗಿತ್ತು. ಭೂಸ್ವಾಧೀನ ಸೇರಿದಂತೆ ಪೂರಕ ಪ್ರಕ್ರಿಯೆಗಳನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸಲಾಗಿತ್ತು. ಯೋಜನೆ ವ್ಯಾಪ್ತಿಯ ಸುಮಾರು 36 ಹೆಕ್ಟೇರ್‌ ಜಮೀನಿನಲ್ಲಿ ಮರಗಳನ್ನು ಕಡಿಯಲು ಕೇಂದ್ರ ಹಾಗೂ ರಾಜ್ಯ ಸರಕಾರದ ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಅನುಮತಿ ದೊರಕಿತ್ತು. ಎಲ್‌ ಆ್ಯಂಡ್‌ ಟಿ ಕಂಪೆನಿ ಗುತ್ತಿಗೆ ವಹಿಸಿಕೊಂಡು ಕಾಮಗಾರಿ ಆರಂಭಿಸಿತ್ತು. ಆದರೆ ಕಂಪೆನಿಗೆ ಹಣ ಪಾವತಿಯಾಗದ ಕಾರಣ ಕಾಮಗಾರಿ ಸ್ಥಗಿತಗೊಂಡಿದೆ. ಇನ್ನು ಮರು ಟೆಂಡರ್‌ ಕರೆಯಬೇಕಾಗಿದೆ ಎಂದರು.

ಕಾಮಗಾರಿ ಸ್ಥಗಿತದಿಂದ ಸಂಚಾರಕ್ಕೆ ಸಮಸ್ಯೆಯಾಗಿದೆ. ಜಿಲ್ಲೆಯ ಅಭಿವೃದ್ಧಿಗೂ ತೊಡಕಾಗಿದೆ. ಸಮಸ್ಯೆ ಪರಿಹರಿಸಬೇಕಾದವರು ರಾ. ಹೆದ್ದಾರಿ ಪ್ರಾಧಿಕಾರ ಹಾಗೂ ಚುನಾಯಿತ ಜನಪ್ರತಿನಿಧಿಗಳು. ಅದುದರಿಂದ ಸಂಸದರು ಕೂಡಲೇ ಕಾರ್ಯೋನ್ಮುಖರಾಗಿ ಕಾಮಗಾರಿ ಮರು ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದರು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮರು ಆರಂಭಕ್ಕೆ ಕೆಲವು ದಿನಗಳ ಕಾಲಾವಕಾಶ ನೀಡುತ್ತೇವೆ. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪಾದಯಾತ್ರೆ ಮೂಲಕ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ವಿಧಾನಪರಿಷತ್‌ ಸದಸ್ಯ ಕೆ. ಹರೀಶ್‌ ಕುಮಾರ್‌, ಮುಖಂಡರಾದ ಇಬ್ರಾಹಿಂ ಕೋಡಿಜಾಲ್‌, ಶಶಿಧರ ಹೆಗ್ಡೆ, ಮಮತಾ ಗಟ್ಟಿ, ಸದಾಶಿವ ಉಳ್ಳಾಲ, ಪೃಥ್ವಿರಾಜ್‌, ನವೀನ್‌ ಡಿ’ಸೋಜಾ, ಅಪ್ಪಿ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ, ಐಟಿ ಘಟಕದ ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು.

ಸುಳ್ಳು ಮಾಹಿತಿ
ಪಂಪ್‌ವೆಲ್‌ನಲ್ಲಿ ಫ್ಲೈಓವರ್‌ ಕಾಮಗಾರಿ, ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ವಿಳಂಬಕ್ಕೆ ರಾಜ್ಯ ಸರಕಾರ ಕಾರಣ ಎಂದು ಆರೋಪಿಸಲಾಗುತ್ತಿದೆ. ಈ ರೀತಿ ಸುಳ್ಳು ಮಾಹಿತಿ ನೀಡಿ ಜನರನ್ನು ಹಾದಿ ತಪ್ಪಿಸುವ ಕಾರ್ಯ ಜನಪ್ರತಿನಿಧಿಗಳು ಮಾಡುತ್ತಿರುವುದು ನೋವಿನ ವಿಚಾರ. 
– ಬಿ. ರಮಾನಾಥ ರೈ, ಮಾಜಿ ಜಿಲ್ಲಾ ಉಸ್ತುವಾರಿ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next