Advertisement

ಹರಿಕಥೆಯ ಹರಿಕಾರ ಬಿ. ಸಿ. ರಾವ್‌

06:00 AM Jun 15, 2018 | |

    ಆಧುನಿಕ ಮನೋರಂಜನಾ ಜಗತ್ತಿನ ದಾಳಿಯಿಂದಾಗಿ ಯಕ್ಷಗಾನ-ತಾಳಮದ್ದಳೆ, ಹೂವಿನಕೋಲು, ಏಕಪಾತ್ರಾಭಿನಯ, ಹರಿಕಥೆಗಳಂತಹ ಸಾಂಪ್ರದಾಯಿಕ ಕಲೆಗಳ ಅಸ್ತಿತ್ವಕ್ಕೆ ಸಂಚಕಾರ ಬಂದೊದಗಿದೆ.ಸಾಹಿತ್ಯ ಹಾಗೂ ಕಲೆ ಎರಡನ್ನೂ ಪ್ರತಿನಿಧಿಸುವಂತಹ ಹರಿಕಥಾ ಕಾಲಕ್ಷೇಪ, ದಾಸರ ಭಾಷಾ ಪಾಂಡಿತ್ಯ, ಹಾಸ್ಯ ಪ್ರಜ್ಞೆ, ಸಂಗೀತಾಭಿರುಚಿಯನ್ನು ಒರೆಗೆ ಹಚ್ಚುವ ಸಮೃದ್ದವಾದ ಕಲೆ. ಪ್ರಭಾವಯುತ ಮಾತು,ಭಕ್ತಿ ಸಂಗೀತದ ಸುಧೆ ಹರಿಸಿ ಒಂದೆರಡು ಗಂಟೆಗಳ ಕಾಲ ಆನಂದಾನುಭೂತಿ ಮಾಡಿಸುತ್ತಿದ್ದ ಭದ್ರಗಿರಿ ಅಚ್ಯುತದಾಸರಂತಹವರ ಹರಿಕಥೆಗಳನ್ನು ರೇಡಿಯೋದಲ್ಲಿ ಕೇಳಲು ಜನ ಕಾತರರಾಗಿರುತ್ತಿದ್ದ ಕಾಲವೊಂದಿತ್ತು. ಭೌತಿಕವಾದ ಮೇಲುಗೈ ಪಡೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಹರಿದಾಸ ಪರಂಪರೆ ನೆಲೆಕಳೆದುಕೊಳ್ಳುತ್ತಿರುವುದು ವಿಷಾದಕರ.

Advertisement

    ಸನಾತನ ಧರ್ಮದ ಮೇರು ಗ್ರಂಥಗಳೆನಿಸಿದ ರಾಮಾಯಣ, ಮಹಾಭಾರತ, ಪುರಾಣಗಳ ಜ್ಞಾನ ಸಂಪತ್ತು ಸಶಕ್ತ ಮಾಧ್ಯಮಗಳ ಅನುಪಸ್ಥಿತಿಯಲ್ಲೂ ಸಾವಿರಾರು ವರ್ಷಗಳಿಂದ ಭಾಷೆ, ಪ್ರಾಂತಗಳ ಪರಿಭೇದವಿಲ್ಲದೆ ಜನಮಾನಸದಲ್ಲಿ ತಲೆತಲಾಂತರವಾಗಿ ಹರಿದು ಬಂದಿರುವುದು ನಮ್ಮ ಅನೌಪಚಾರಿಕ ಶಿಕ್ಷಣದ ಗಟ್ಟಿತನಕ್ಕೆ ಸಾಕ್ಷಿಯಾಗಿದೆ.ನಮ್ಮ ಮಹಾನ್‌ ಸಂಸ್ಕೃತಿಯ ಪ್ರಸಾರ ಜನ ಸಾಮಾನ್ಯರವರೆಗೆ ತಲುಪಲು ದೇಶದ ಶ್ರೀಮಂತ ಕಲಾ-ಸಾಂಸ್ಕೃತಿಕ ಚೌಕಟ್ಟೆ ಕಾರಣ. ಧಾರ್ಮಿಕ-ಸಾಂಸ್ಕೃತಿಕ ಸಾರವನ್ನು ಕಥೆ-ಕೀರ್ತನೆಗಳ ಮೂಲಕ ಸಾದರ ಪಡಿಸುವ ಹರಿಕಥಾ ಕಾಲಕ್ಷೇಪ ಅಥವಾ ಸಂಕೀರ್ತನೆ ಗ್ರಾಮೀಣ ಪ್ರದೇಶದಲ್ಲಿ ಹಿಂದೊಮ್ಮೆ ಅತ್ಯಂತ ಪರಿಣಾಮಕಾರಿಯಾದ ಮಾಧ್ಯಮವಾಗಿತ್ತು.

ಸಹಸ್ರಾರು ವರ್ಷಗಳಿಂದ ನೈತಿಕ ಮೌಲ್ಯಗಳನ್ನು ಬಿತ್ತಿ ಬೆಳೆಸಿದ ಈ ಅನೌಪಚಾರಿಕ ಶಿಕ್ಷಣ ಮಾಧ್ಯಮದ ಭವ್ಯ ಪರಂಪರೆಯನ್ನು ಇಂದಿಗೂ ನಶಿಸದಂತೆ ಪೋಷಿಸಿ ಪಸರಿಸುತ್ತಿರುವವರಲ್ಲಿ ಹೆಬ್ರಿ ಶಿವಪುರದ ಬಡ್ಕಿಲ್ಲಾಯ ಚಂದ್ರಶೇಖರ ರಾವ್‌ ಅಥವಾ ಬಿ ಸಿ ರಾವ್‌ ಸ್ಮರಣೀಯರು.ಪಟೇಲ… ಬಿ. ಸದಾಶಿವ ರಾವ್‌ ಮತ್ತು ಸರಸ್ವತಿ ರಾವ್‌ ಅವರ ಪುತ್ರರಾದ ಇವರು ಇದುವರೆಗೆ 50ಕ್ಕೂ ಮಿಕ್ಕಿ ಹರಿಕಥೆ ಕಾರ್ಯಕ್ರಮ ನೆರವೇರಿಸಿಕೊಟ್ಟಿದ್ದಾರೆ. ಪ್ರಚಲಿತ ವಿದ್ಯಮಾನದೊಂದಿಗೆ ಆಧ್ಯಾತ್ಮಿಕ ವಿಷಯ ಜೋಡಣೆಯ ಅದ್ಭುತ ಶೈಲಿ, ಶ್ರೋತೃಗಳನ್ನು ಸೂಜಿಗಲ್ಲಿನಂತೆ ಸೆಳೆಯುವ ಆಕರ್ಷಕ ನಿರೂಪಣೆ, ಅಪಾರ ಜೀವನಾನುಭವದ ಆಧಾರದ ನಿರರ್ಗಳ ಮಾತಿನಿಂದಾಗಿ ಬಿ. ಸಿ. ರಾಯರ ಹರಿಕಥೆ ಕರಾವಳಿಯುದ್ದಕ್ಕೂ ಜನಮನ್ನಣೆಗಳಿಸಿದೆ. ಧಾರ್ಮಿಕ ಕಾರ್ಯಕ್ರಮಗಳು, ಕೌಟುಂಬಿಕ ಮಹತ್ವದ ದಿನಗಳಲ್ಲಿ ಅವರ ಹರಿಕೀರ್ಥನೆಯ ಭಕ್ತಿರಸದ ಆನಂದಾನುಭೂತಿ ಪಡೆಯಲು ಆಸಕ್ತರಾದ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ.

ವೃತ್ತಿಯಿಂದ ಶಿಕ್ಷಕರಾಗಿದ್ದ ಅವರು ಜೇಸಿ ರಾಷ್ಟ್ರೀಯ ತರಬೇತುದಾರರಾಗಿ 30ಕ್ಕೂ ಮಿಕ್ಕಿ ವ್ಯಕ್ತಿತ್ವ ವಿಕಸನ ತರಬೇತಿ ನಡೆಸಿಕೊಟ್ಟಿದ್ದಾರೆ. ಬಹುಮುಖ ವ್ಯಕ್ತಿತ್ವದ ಇವರ ಉಪನ್ಯಾಸ, ಚರ್ಚೆ, ಪ್ರವಚನ, ಹರಿಕಥೆ ಅನೇಕ ದೃಶ್ಯ-ಶ್ರವ್ಯ ಮಾಧ್ಯಮದಲ್ಲಿ ಪ್ರಸಾರ ಕಂಡಿದೆ. ಸಾಹಿತ್ಯದಲ್ಲೂ ಸಮಾನ ಆಸಕ್ತಿ ಬೆಳೆಸಿಕೊಂಡಿರುವ ಬಿ ಸಿ ರಾವ್‌ ಉತ್ತಮ ಬರಹಗಾರರೂ ಹೌದು. ಕಾರ್ಕಳ ತಾಲೂಕು ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿದ್ದ ಇವರನ್ನು ಮುದ್ರಾಡಿಯಲ್ಲಿ 21ರಲ್ಲಿ ನಡೆದ 8ನೇ ಅಖೀಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಹರಿದಾಸ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಫ‌ಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ತೋಟದ ಸಿದ್ದಲಿಂಗ ಮಹಾಸ್ವಾಮಿಗಳು,ಜೇಸಿ ಮತ್ತಿತರ ಸಂಘ ಸಂಸ್ಥೆಗಳು ಅವರ ಸೇವೆಯನ್ನು ಗೌರವಿಸಿ ಸಮ್ಮಾನಿಸಿವೆ. 

ಐಹಿಕ ಸುಖವೇ ಪ್ರಧಾನವಾಗಿರುವ ಭೋಗವಾದ ಮೇಲುಗೈ ಪಡೆಯುತ್ತಿರುವ ಇಂದಿನ ದಿನದಲ್ಲಿ ಯುವ ಜನಾಂಗಕ್ಕೆ ನೈತಿಕತೆಯ ಅಮೃತ ಸಿಂಚನಗೈಯ್ಯುವ ಹರಿ ಸಂಕೀರ್ತನೆಯ ಪುನರುಜ್ಜೀವನ ಅಗತ್ಯ.ಧಾರ್ಮಿಕ ಮುಂದಾಳುಗಳು,ಆಸ್ತಿಕ ಮಹಾಶಯರು ನಶಿಸುತ್ತಿರುವ ಕಲೆಯನ್ನು ಉಳಿಸುವತ್ತ ಗಮನಹರಿಸಬೇಕಿದೆ.
 
 ಬೈಂದೂರು ಚಂದ್ರಶೇಖರ ನಾವಡ

Advertisement
Advertisement

Udayavani is now on Telegram. Click here to join our channel and stay updated with the latest news.

Next