ಹೊಸದಿಲ್ಲಿ : ದೇಶದ ಶಿಕ್ಷಣ ರಂಗಕ್ಕೆ ಹೊಸ ಆಯಾಮ ನೀಡುವ ದಿಶೆಯಲ್ಲಿ ಅಜೀಮ್ ಪ್ರೇಮ್‌ಜಿ ಫೌಂಡೇಶನ್ ಆರಂಭಿಸಿರುವ ಸ್ನಾತಕೋತ್ತರ ಶಿಕ್ಷಣ ಪದವಿ ಕೋರ್ಸ್ ದೇಶಾದ್ಯಂತದ ಉನ್ನತ ಶಿಕ್ಷಣಾಸಕ್ತರ ಗಮನವನ್ನು ಬಹುವಾಗಿ ಸೆಳೆದುಕೊಂಡಿದೆ.
ಈ ಸ್ನಾತಕೋತ್ತರ ಶಿಕ್ಷ ಕೋರ್ಸಿಗೆ ಸೇರುವವರು ಮುಂದೆ ಇದೇ ವಿಷಯದಲ್ಲಿ ಎಂ.ಫಿಲ್ ಮತ್ತು ಪಿಎಚ್‌ಡಿಯನ್ನು ಕೂಡ ಕೈಗೊಳ್ಳಬಹುದಾಗಿದೆ ಮತ್ತು ದೇಶದ ಉನ್ನತ ಶಿಕ್ಷಣ ರಂಗದಲ್ಲಿ ಬೋಧನೆ, ಕಲಿಕೆ, ಸಂಶೋಧನೆ ಕ್ಷೇತ್ರದಲ್ಲಿ ಬಹಳಷ್ಟನ್ನು ಸಾಧಿಸಬಹುದಾಗಿದೆ.
ಈಗಾಗಲೇ ಸಮಾಜ ಶಾಸ್ತ್ರ, ತತ್ವಶಾಸ್ತ್ರ ಮತ್ತಿತರ ಮಾನವಿಕ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಕೂಡ ಶಿಕ್ಷಣ ವಿಷಯದಲ್ಲಿನ ಎಂ.ಎ. ಕೋರ್ಸಿಗೆ (ಎಂಎ ಎಜುಕೇಶನ್) ಸೇರಬಹುದಾಗಿದೆ. ಎಂಎ ಎಜುಕೇಶನ್ ಪದವಿ ಪಡೆಯುವವರು ಮುಂದೆ ಸರಕಾರಿ ಅಥವಾ ಖಾಸಗಿ ಶಿಕ್ಷಣ ಮಹಾ ವಿದ್ಯಾಲಯಗಳಲ್ಲಿ ಬುನಾದಿ ಕೋರ್ಸುಗಳ ಬೋಧಕರಾಗಿ ದುಡಿಯಬಹುದಾಗಿದೆ.
ಎಂಎ ಶಿಕ್ಷಣ ಸ್ನಾತಕೋತ್ತರ ಪದವಿ ಶಿಕ್ಷಣದಲ್ಲಿ ಆಸಕ್ತರು ಪಠ್ಯ ಪುಸ್ತಕ ರಚನೆ, ಶೈಕ್ಷಣೀ ಕಲಿಕಾ ವಸ್ತು, ವಿಷಯ ಮತ್ತು ಪರಿಕರಣಗಳ ರಚನೆ, ಶಿಕ್ಷಕರ ಕಲ್ಯಾಣ, ಶಿಕ್ಷಣ ಗುಣಮಟ್ಟ ವಿಶ್ಲೇಷಣೆ, ಶಾಲಾ ವ್ಯವಸ್ಥಾಪನೆ, ಆರಂಭಿಕ ಬಾಲ್ಯದ ಶಿಕ್ಷಣ ಕ್ರಮದಲ್ಲಿ ನಾವೀನ್ಯತೆ ಸಾಧಿಸುವುದು ಮುಂತಾಗಿ ಹಲವಾರು ಆಯಾಮಗಳನ್ನು ಅಧ್ಯಯನ ಮಾಡಬಹುದಾಗಿದೆ.
ಆ ಮೂಲಕ ಅವರು ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಗಳು, ರಾಜ್ಯ ಶೈಕ್ಷಣಿಕ ಸಂಶೋಧನ ಮತ್ತು ತರಬೇತಿ ಮಂಡಳಿ, ಸರಕಾರ ನಡೆಸುವ ಶಿಕ್ಷಣ ಬೋಧನಾಲಯ, ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕರಾಗಿ, ವ್ಯವಸ್ಥಾಪಕರಾಗಿ, ಮಾರ್ಗದರ್ಶಕರಾಗಿ, ಆಡಳಿತಗಾರರಾಗಿ ದುಡಿಯುವ ಅವಕಾಶಗಳನ್ನು ಪಡೆಯುತ್ತಾರೆ.
ಎಂಎ ಎಜುಕೇಶನ್ ಪದವಿ ಶಿಕ್ಷಣದ ಮೂಲಕ ಅಭ್ಯರ್ಥಿಗಳು ವಿಶ್ವ ದರ್ಜೆಯ ಗುಣಮಟ್ಟದ ಬೋಧನೆ, ಕಲಿಕೆ, ಸಂಶೋಧನೆಯಲ್ಲಿ ತೊಡಗಿಕೊಳ್ಳುವ ಮೂಲಕ ಶಿಕ್ಷಣದ ಸಾರ್ವತ್ರೀಕರಣ ಪರಿಕಲ್ಪನೆಯನ್ನು ಸಾಕಾರಗೊಳಿಸಬಹುದಾಗಿದೆ ಮತ್ತು ಸರ್ವಾಂಗೀಣ ವಿಕಸಿತ ಸಮಾಜ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಬಹುದಾಗಿದೆ ಎಂದು ಅಜೀಂ ಪ್ರೇಮ್‌ಜೀ ಫೌಂಡೇಶನ್ ಪ್ರಕಟನೆ ತಿಳಿಸಿದೆ.