ಅಜಂಗಢ: ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಫೈನಲ್ ಎಂದು ಬಣ್ಣಿಸಲಾದ ಕೊನೆಯ ಏಳನೇ ಮತ್ತು ಅಂತಿಮ ಹಂತದ ಮತದಾನ ಸೋಮವಾರ ಬಿರುಸಿನಿಂದ ಬಿಗಿ ಭದ್ರತೆಯಲ್ಲಿ ನಡೆಯುತ್ತಿದ್ದು, ವಯೋ ವೃದ್ಧರು ಮತಗಟ್ಟೆಗೆ ಆಗಮಿಸಿ ಮಾಧ್ಯಮಗಳ ಗಮನ ಸೆಳೆದಿದ್ದಾರೆ.
ಕೈ ಮುರಿತಕ್ಕೊಳಗಾದ ಅಂಗವಿಕಲ ಪತ್ನಿಯೊಂದಿಗೆ ವೃದ್ಧರೊಬ್ಬರು ತಳ್ಳುವ ಗಾಡಿಯಲ್ಲಿ ಕರೆತರುವ ಮೂಲಕ ಮತಗಟ್ಟೆಗೆ ಬಂದು ಮತದಾನ ಮಾಡಿ ಯುವ ಜನಾಂಗಕ್ಕೆ ಹಕ್ಕು ಚಲಾವಣೆ ಮಾಡುವಂತೆ ಪ್ರೇರಣೆಯಾಗಿದ್ದಾರೆ.
“ನನಗೆ ಬೆನ್ನುನೋವಿನ ಸಮಸ್ಯೆ ಇದೆ ಮತ್ತು ನನ್ನ ಹೆಂಡತಿಯ ಆರೋಗ್ಯವೂ ಚೆನ್ನಾಗಿಲ್ಲ, ಆದ್ದರಿಂದ, ಈ ಗಾಡಿಯನ್ನು ಬಳಸಿದ್ದೇನೆ. ನಮಗೆ ಯಾವುದೇ ನಿರೀಕ್ಷೆಗಳಿಲ್ಲ. ರೂ 500, 1000 ರಾಜ್ಯದಿಂದ ನೀಡಲಾಗಿದೆ, ಅದು ನಮ್ಮನ್ನು ಗುಣಪಡಿಸಬಹುದೇ? ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಸಂಸದೀಯ ಕ್ಷೇತ್ರ ವಾರಣಾಸಿ ಸೇರಿದಂತೆ 54 ಸ್ಥಾನಗಳನ್ನು ಒಳಗೊಂಡಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಇಂದು (ಮಾರ್ಚ್ 7) ಬೆಳಗ್ಗೆ 7 ಗಂಟೆಗೆ ಆರಂಭವಾಗಿದೆ.
ರಾಜಕೀಯವಾಗಿ ನಿರ್ಣಾಯಕ ರಾಜ್ಯದಲ್ಲಿ ಸುಮಾರು ತಿಂಗಳ ಅವಧಿಯ ಮತದಾನ ಪ್ರಕ್ರಿಯೆಯ ಅಂತ್ಯವನ್ನು ಸೂಚಿಸುವ ಮತದಾನವು ಅಜಂಗಢ್, ಮೌ, ಜೌನ್‌ಪುರ್, ಗಾಜಿಪುರ, ಚಂದೌಲಿ, ವಾರಣಾಸಿ, ಮಿರ್ಜಾಪುರ, ಭದೋಹಿ ಮತ್ತು ಸೋನ್‌ಭದ್ರ ಜಿಲ್ಲೆಗಳಲ್ಲಿ ನಡೆಯುತ್ತಿದೆ.
ಮಾರ್ಚ್ 10 ರಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ.