ತ್ಯಾಗರಾಜ ಪರಮಶಿವ ಅಯ್ಯರ್ ಕೈಲಾಸಂ – ಇಷ್ಟುದ್ದದ ಹೆಸರು ಕೇಳಿದವರಿಗೆ ಸ್ವಲ್ಪ ಗೊಂದಲ ಆಗುವುದು ಸಹಜ. ಆದರೆ, ಟಿ.ಪಿ.ಕೈಲಾಸಂ ಅಂದರೆ ಸಾಕು; ಓಹ್, ಅವರಲ್ವಾ? ಎಂಬ ಉದ್ಗಾರ ಹೊರಬೀಳುತ್ತದೆ. ಕನ್ನಡಕ್ಕೆ ಒಬ್ಬರೇ ಕೈಲಾಸಂ ಎಂಬುದು ಅವರನ್ನು ಕುರಿತು ಅವರ ಸಮಕಾಲೀನರು ಹೆಮ್ಮೆಯಿಂದ ಹೇಳುತ್ತಿದ್ದ ಮಾತು. ಕನ್ನಡ ಸಾಹಿತ್ಯಕ್ಕೆ ಹೊಸಬಗೆಯ ನಾಟಕಗಳನ್ನು ಕೊಟ್ಟವರು ಅವರು. ಅಸಾಮಾನ್ಯ ಮೇಧಾವಿ ಎಂದು ಹೆಸರಾಗಿದ್ದ ಕೈಲಾಸಂ ಕುರಿತು ಇರುವ ಕತೆಗಳಿಗೆ ಲೆಕ್ಕವಿಲ್ಲ. ಆ ಪೈಕಿ ಸ್ವಾರಸ್ಯಕರ ಎಂಬಂಥ ಒಂದೆರಡು ಸ್ಯಾಂಪಲ್ ಗಳು ಹೀಗಿವೆ.
ಸ್ಯಾಂಪಲ್ ಒಂದು: ಕೈಲಾಸಂ, ಗಣಿತದಲ್ಲಿ ವಿಪರೀತ ಬುದ್ಧಿವಂತ ಆಗಿದ್ದರಂತೆ. ಅವರು ಹಾಸನದಲ್ಲಿ ಹೈಸ್ಕೂಲ್ ಕಲಿಯುತ್ತಿದ್ದ ಸಂದರ್ಭದಲ್ಲಿ, ಪರೀಕ್ಷೆಯಲ್ಲಿ ಹದಿನೈದು ಪ್ರಶ್ನೆಗಳನ್ನು ನೀಡಿ, ಯಾವುದಾದರೂ ಹತ್ತಕ್ಕೆ ಮಾತ್ರ ಉತ್ತರಿಸಿ, ಎಂದು ಸೂಚನೆ ನೀಡಲಾಗಿತ್ತಂತೆ.
ಈ ಕೈಲಾಸಂ ಸಾಹೇಬರು, ಎಲ್ಲ ಹದಿನೈದು ಲೆಕ್ಕಗಳನ್ನೂ ಸರಿಯಾಗಿ ಬಿಡಿಸಿ-ಉತ್ತರ ಪತ್ರಿಕೆಯ ಕೆಳಗೆ-ಮಾನ್ಯ ಪರೀಕ್ಷಕರೆ, ಯಾವುದಾದರೂ ಹತ್ತು ಉತ್ತರಗಳಿಗೆ ಮಾರ್ಕ್ಸ್ ಕೊಡಿ’ ಎಂದು ಬರೆದಿದ್ದರಂತೆ!
ಸ್ಯಾಂಪಲ್ ಎರಡು: ಕೈಲಾಸಂ ಅವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಆ ಕಾಲದಲ್ಲಿಯೇ ಇಂಗ್ಲೆಂಡ್‌ಗೆ ಹೋಗಿದ್ದರು. ಅಲ್ಲಿ ಪಾಠ ಕಲಿತಿದ್ದಕ್ಕಿಂತ ಹೆಚ್ಚಾಗಿ ನಾಟಕ, ಸಂಗೀತ ಕಲಿತರು. ಈ ಮಧ್ಯೆಯೇ ಗುಂಡು ಸೇವನೆಯೂ ಆಗುತ್ತಿತ್ತು. ಅದೊಂದು ದಿನ ಕ್ಲಬ್‌ನಲ್ಲಿ ಹಾಡಿದ ಗಾಯಕನೊಬ್ಬ ತನ್ನ ಸಂಗೀತ ಜ್ಞಾನ, ಕಂಠಸಿರಿಯ ಬಗ್ಗೆ ತಾನೇ ಹೆಮ್ಮೆ ಪಡುತ್ತ- ಧೈರ್ಯವಿದ್ದರೆ ಇಲ್ಲಿರುವ ಸಭಿಕರ ಪೈಕಿ ಯಾರಾದ್ರೂ ನನ್ನ ಥರಾನೇ ಹಾಡಿ ನೋಡೋಣ’ ಅಂದನಂತೆ. ಈ ಛಾಲೆಂಜ್ ಸ್ವೀಕರಿಸಲು ಬ್ರಿಟಿಷರೇ ಹಿಂದೆ ಮುಂದೆ ನೋಡುತ್ತಿದ್ದಾಗಗ-ಛಕ್ಕನೆ ಮೇಲೆದ್ದ ಕೈಲಾಸಂ-ಒಂದಿಷ್ಟೂ ತಡವರಿಸದೆ ಆತನಂತೆಯೇ ಹಾಡಿ, ಎಲ್ಲರ ಶಹಭಾಷ್ ಗಿರಿಯ ಜತೆಗೆ ಬಹುಮಾನವನ್ನೂ ಗಿಟ್ಟಿಸಿದರಂತೆ.