ಕಂಪ್ಲಿ: ಪಟ್ಟಣದ ಕುರುಗೋಡು ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಜ.25ರಂದು ಅಯ್ಯಪ್ಪಸ್ವಾಮಿ ಹಾಗೂ ಸಹ ದೇವತೆಗಳ ಪ್ರಾಣಪ್ರತಿಷ್ಠಾಪನೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆಯೋಜಿಸಿರುವ ಹಿನ್ನೆಲೆಯಲ್ಲಿ ಗುರುವಾರ ಪಟ್ಟಣದ ಪ್ರಮುಖ ಬೀದಿಯಲ್ಲಿ ನೂತನ ಶಿಲಾಮೂರ್ತಿಗಳ ಅದ್ಧೂರಿ ಮೆರವಣಿಗೆ ನಡೆಯಿತು.
ಇಂದು ಬೆಳಗ್ಗೆ 7ಗಂಟೆಗೆ ತುಂಗಭದ್ರಾ ನದಿಯಲ್ಲಿ ಗಂಗೆಪೂಜೆ ನೆರವೇರಿಸಿ, ಅಯ್ಯಪ್ಪ ಸ್ವಾಮಿ ಶಿಲಾಮೂರ್ತಿ ಸೇರಿ ಸಹ ದೇವತೆಗಳ ಪ್ರತಿಮೆಗಳ ಭವ್ಯ ಮೆರವಣಿಗೆ ಆರಂಭವಾಯಿತು. ಮೆರವಣಿಗೆಯಲ್ಲಿ ಮಂಗಳವಾದ್ಯಗಳು, ಡೊಳ್ಳು ಕುಣಿತ, ಪೂರ್ಣಕುಂಭ ಸೇರಿದಂತೆ ಜನಪದ ಕಲಾಮೇಳಗಳು ಪಾಲ್ಗೊಂಡಿದ್ದವು. ಮೆರವಣಿಗೆಯು ಕೋಟೆ ಹಾಗೂ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಾಗಿ ಕುರುಗೋಡು ರಸ್ತೆಯಲ್ಲಿರುವ ನೂತನ ದೇವಸ್ಥಾನದಲ್ಲಿ ಸಮಾರೋಪಗೊಂಡಿತು. ನಂತರ ಮಧ್ಯಾಹ್ನ 12ಗಂಟೆಗೆ ಅನ್ನ ಸಂತರ್ಪಣೆ ಕಾರ್ಯಕ್ರಮಗಳು ಜರುಗಿದವು.
ಸಂಜೆ ನೂತನ ಶಿಲಾಮೂರ್ತಿಗಳ ಹೋಮ, ಕಲಶ ಪ್ರತಿಷ್ಠೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಧ್ಯ ರಾತ್ರಿಯವರೆಗೂ ನಡೆದವು.
ಜ.25ರಂದು ಬೆಳಗ್ಗೆ 7ಗಂಟೆಗೆ ಪುಣ್ಯಾಹ ಪ್ರತಿಷ್ಠಾಹೋಮ, ನಂತರ ಬೆಳಗ್ಗೆ 9ರಿಂದ 10.10ರ ವರೆಗೆ ಸಲ್ಲುವ ಮೀನ ಲಗ್ನದಲ್ಲಿ ಗಣೇಶ, ಸುಬ್ರಹ್ಮಣ್ಯ,ಅಯ್ಯಪ್ಪಸ್ವಾಮಿ, ಅನ್ನಪೂರ್ಣೇಶ್ವರಿ, ಈಶ್ವರ, ನಂದೀಶ್ವರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಎಮ್ಮಿಗನೂರಿನ ವಾಮದೇವ ಶಿವಾಚಾರ್ಯರು, ಬುಕ್ಕಸಾಗರದ ಕರಿಸಿದ್ದೇಶ್ವರ ವಿಶ್ವರಾಧ್ಯ ಶಿವಾಚಾರ್ಯರು, ಕಲ್ಮಠದ ಅಭಿನವ ಪ್ರಭುಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ.