ರಬಕವಿ-ಬನಹಟ್ಟಿ: ತಾಲ್ಲೂಕಿನ ಆಸಂಗಿ ಗ್ರಾಮದ ಬೆಟ್ಟ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸುತ್ತ ಮುತ್ತಲಿನ ನಗರ ಮತ್ತು ಗ್ರಾಮೀಣ ಭಾಗದ ಜನರಿಗೆ ಶಬರಿಮಲೆ ದೇವಸ್ಥಾನವಾಗಿದೆ.
ಇಲ್ಲಿಯ ದೇವಸ್ಥಾನಕ್ಕೆ ಬೆಳಗಾವಿ, ಧಾರವಾಡ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಪ್ರಮುಖ ನಗರ ಮತ್ತು ಗ್ರಾಮೀಣ ಪ್ರದೇಶದ ಮಾಲಾಧಾರಿಗಳು ಆಗಮಿಸಿ ಅಯ್ಯಪ್ಪಸ್ವಾಮಿ ದರ್ಶನ ಪಡೆದುಕೊಂಡರು.
ಇಲ್ಲಿಯೂ ಕೂಡಾ ಸಮೀಪದಲ್ಲಿಯೇ ಕೃಷ್ಣಾ ನದಿ ಹರಿಯುತ್ತಿರುವುದರಿಂದ ಮಾಲಾ ಧಾರಿಗಳು ಬೆಳಗ್ಗೆ ನದಿಯಲ್ಲಿ ಮಿಂದು, ಈರುಮುಡಿ ಹೊತ್ತುಕೊಂಡು ಭಜನೆ ಮಾಡುತ್ತ, ಗ್ರಾಮದ ಗಣೇಶ ದೇವಸ್ಥಾನ, ಹನಮಂತ ದೇವಸ್ಥಾನ, ಬಸವಣ್ಣ ದೇವಸ್ಥಾನದ ದರ್ಶನ ಪಡೆದುಕೊಂಡು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದುಕೊಳ್ಳುತ್ತಿದ್ದರು.
ಇಲ್ಲಿಯೇ ಬಹಳಷ್ಟು ಭಕ್ತರಿಗೆ ಮಾಲೆ ಹಾಕುವ ಕಾರ್ಯ ನಡೆಯಿತು. ದೇವಸ್ಥಾನದಲ್ಲಿ ಮಕರ ಸಂಕ್ರಮಣದ ನಿಮಿತ್ತವಾಗಿ ವಿಷೇಶ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಂಜೆ ಹೂಮಾಲೆ ಮತ್ತು ದೀಪಾಲಂಕರಗೊಂಡಿದ್ದ ದೇವಸ್ಥಾನ ಆಕರ್ಷಕವಾಗಿ ಕಾಣುತ್ತಿತ್ತು.
ಬೇರೆ ಊರುಗಳಿಂದ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಗುರುಸ್ವಾಮಿ ಅಶೋಕ ಗಾಯಕವಾಡ, ಶಿವಪ್ಪ ತೇಲಿ, ಶ್ರೀಕುಮಾರ ಸಾಲ್ಗುಡೆ, ಹನಮಂತ ಗಾಯಕವಾಡ, ಮಹಾದೇವ ಗಾಯಕವಾಡ, ಪರಪ್ಪ ಸಿಂಧೆ ಸೇರಿದಂತೆ ಅನೇಕರು ಇದ್ದರು.