Advertisement

26ರಿಂದ ಆಯುಷ್ಮಾನ್‌ ವಿಶೇಷ ಶಿಬಿರ: ರಾಘವೇಂದ್ರ

04:21 PM Dec 20, 2019 | Suhan S |

ಶಿವಮೊಗ್ಗ: ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಯಡಿ ಫಲಾನುಭವಿಗಳನ್ನು ನೋಂದಾಯಿಸಲು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಡಿ. 26ರಿಂದ 28ರವರೆಗೆ ವಿಶೇಷ ಶಿಬಿರ ಆಯೋಜಿಸಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ನೂತನ ಸಭಾಂಗಣದಲ್ಲಿ ಅಭಿಯಾನವನ್ನು ಯಶಸ್ವಿಯಾಗಿ ಆಯೋಜಿಸುವ ಕುರಿತು ಜಿಲ್ಲೆಯ ಎಲ್ಲಾ ಸಾಮಾನ್ಯ ಸೇವಾಕೇಂದ್ರದ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯನ್ನು ಗುರುವಾರ ನಡೆಸಿ ಅವರು ಮಾತನಾಡಿದರು. ಆಯುಷ್ಮಾನ್‌ ಯೋಜನೆಯಡಿ ಪ್ರಸ್ತುತ 4 ಲಕ್ಷ ಜನರನ್ನು ನೋಂದಾಯಿಸಿ ಕಾರ್ಡ್‌ ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 14ಲಕ್ಷ ಫಲಾನುಭವಿಗಳನ್ನು ಈ ಯೋಜನೆಯಡಿ ನೋಂದಾಯಿಸುವ ಗುರಿ ಹೊಂದಲಾಗಿದೆ.

ಪ್ರಸ್ತುತ 116 ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಈ ಯೋಜನೆಯಡಿ ಫಲಾನುಭವಿಗಳಿಗೆ ಕಾರ್ಡ್‌ ನೀಡಲಾಗುತ್ತಿದ್ದು, ಇನ್ನೂ 21 ಕೇಂದ್ರಗಳು ಎರಡು ದಿನಗಳಲ್ಲಿ ಸಿದ್ಧಗೊಳ್ಳಲಿವೆ. ಫಲಾನುಭವಿಗಳಿಂದ ನೋಂದಣಿಗೆ ನಿಗದಿಪಡಿಸಿರುವ ಶುಲ್ಕವನ್ನು ಮಾತ್ರ ಪಡೆಯಬೇಕು. ಕಾರ್ಡ್‌ ನೀಡಲು ಸತಾಯಿಸುತ್ತಿರುವ ಬಗ್ಗೆ ಯಾವುದೇ ದೂರುಗಳು ಬಾರದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಜಿಲ್ಲೆಯಲ್ಲಿರುವ ಎಲ್ಲಾ 106 ಪ್ರಾಥಮಿಕ ಆರೋಗ್ಯ ಕೇಂದ್ರ, 12 ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಡಿ. 26, 27ಮತ್ತು 28ರಂದು ವಿಶೇಷ ನೋಂದಣಿ ಅಭಿಯಾನ ಆಯೋಜಿಸಲಾಗುವುದು. ಮೂರು ದಿನಗಳಲ್ಲಿ ಪ್ರತಿ ಕೇಂದ್ರಗಳಲ್ಲಿ ತಲಾ 500 ಮಂದಿಗೆ ಆರೋಗ್ಯ ಕಾರ್ಡ್‌ ವಿತರಿಸುವ ಗುರಿ ನಿಗದಿಪಡಿಸಲಾಗಿದೆ. ಪ್ರತಿ ಕೇಂದ್ರದಲ್ಲಿ ಮೂರು ಮಂದಿ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗುವುದು. ಬೆಳಗ್ಗೆ 8ರಿಂದ ರಾತ್ರಿ 8ಗಂಟೆವರೆಗೆ ನೋಂದಣಿ ಕಾರ್ಯ ಕೈಗೊಳ್ಳಬೇಕು ಎಂದು ಅವರು ಹೇಳಿದರು.

ಜಿಲ್ಲಾ ಧಿಕಾರಿ ಕೆ.ಬಿ. ಶಿವಕುಮಾರ್‌ ಅವರು ಮಾತನಾಡಿ, ಜನರು ನೋಂದಣಿಗೆ ಆಗಮಿಸುವ ಮೊದಲೇ ಅವರು ಬರಬೇಕಾದ ಸಮಯವನ್ನು ನಿಗದಿಪಡಿಸಿ ಮಾಹಿತಿ ನೀಡಬೇಕು. ತಾಂತ್ರಿಕ ತೊಂದರೆಗಳು ಎದುರಾಗದಂತೆ ಕ್ರಮ ವಹಿಸಲಾಗುವುದು. ಸ್ಥಳೀಯ ಪಂಚಾಯತ್‌ನಿಂದ ಹೆಚ್ಚುವರಿಯಾಗಿ ಸೇವಾ ಕೇಂದ್ರಗಳಿಗೆ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನೀಡಲಾಗುವುದು. ಎಲ್ಲಾ ಸೇವಾ ಕೇಂದ್ರಗಳ ಸಿಬ್ಬಂದಿ ಆಂದೋಲನದ ರೀತಿಯಲ್ಲಿ ನೋಂದಣಿ ಕಾರ್ಯ ಮಾಡಬೇಕು. ಮೂರು ದಿನಗಳಲ್ಲಿ 75 ಸಾವಿರ ಫಲಾನುಭವಿಗಳನ್ನು ಯೋಜನೆ ವ್ಯಾಪ್ತಿಗೆ ಸೇರಿಸುವ ಗುರಿ ಹೊಂದಲಾಗಿದೆ ಎಂದರು.

Advertisement

ಜಿಲ್ಲೆಯಲ್ಲಿ ಈಗಾಗಲೇ ಯೋಜನೆಯಡಿ 24,048 ಫಲಾನುಭವಿಗಳು ಸೌಲಭ್ಯ ಪಡೆದುಕೊಂಡಿದ್ದು, 3.88 ಕೋಟಿ ರೂ. ಪಾವತಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ರಾಜೇಶ ಸುರಗಿಹಳ್ಳಿ ಮಾಹಿತಿ ನೀಡಿದರು. ಜಿಪಂ ಸಿಇಒ ಎಂ.ಎಲ್‌. ವೈಶಾಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next