Advertisement

ಫಲ ಕೊಡದ ಆಯುಷ್ಮಾನ್‌ ಭಾರತ್‌

04:01 PM Dec 14, 2018 | Team Udayavani |

ಚಿತ್ರದುರ್ಗ: ಬಿಪಿಎಲ್‌ ಕುಟುಂಬಗಳಿಗೆ ವಾರ್ಷಿಕ ಐದು ಲಕ್ಷ, ಎಪಿಎಲ್‌ ಕುಟುಂಬಗಳಿಗೆ ವಾರ್ಷಿಕ ಎರಡು ಲಕ್ಷ ರೂ. ತನಕ ಆರೋಗ್ಯ ಭಾಗ್ಯ ನೀಡಲು ವಿವಿಧ ಆರೋಗ್ಯ ಯೋಜನೆಗಳನ್ನು ಒಗ್ಗೂಡಿಸಿ ರಾಜ್ಯ ಸರ್ಕಾರ ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೊಳಿಸಿದೆ. ಆದರೆ ಜಿಲ್ಲೆಯಲ್ಲಿ ಈ ಯೋಜನೆ ನಿರೀಕ್ಷಿತ ಫಲ ನೀಡುತ್ತಿಲ್ಲ.

Advertisement

ಆರೋಗ್ಯ ಯೋಜನೆಗಳಾದ ಬಿಪಿಎಲ್‌ ಕುಟುಂಬಗಳಿಗೆ ವಾಜಪೇಯಿ ಆರೋಗ್ಯ ಶ್ರೀ ಉಚಿತ ಯೋಜನೆ, ಎಪಿಎಲ್‌ ಕುಟುಂಬಗಳಿಗೆ ರಾಜೀವ್‌ ಆರೋಗ್ಯ ಭಾಗ್ಯ ಯೋಜನೆ, ರಾಜ್ಯ ಸರ್ಕಾರಿ ನೌಕರರಿಗೆ ಜ್ಯೋತಿ ಸಂಜೀವಿನಿ, ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗಾಗಿ ಮುಖ್ಯಮಂತ್ರಿ ಸಾಂತ್ವನ ಹರೀಶ್‌ ಯೋಜನೆ ಮತ್ತು ಬಿಪಿಎಲ್‌ ಕುಟುಂಬಗಳು ಹಾಗೂ ಅಸಂಘಟಿತ ಕಾರ್ಮಿಕರಿಗೆ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ, ಶಾಲಾ ಮಕ್ಕಳಿಗೆ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ, ಯಶಸ್ವಿನಿ, ಆತ್ಮಾಹುತಿಗೆ ಒಳಗಾದ ರೈತರ ಕುಟುಂಬಗಳ ಅವಲಂಬಿತರಿಗೆ ಇಂದಿರಾ ಸುರಕ್ಷಾ ಯೋಜನೆ ಇವೆಲ್ಲವುಗಳನ್ನೂ ಒಗ್ಗೂಡಿಸಿ ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆಯನ್ನು ಅನುಷ್ಠಾನ ‌ಗೊಳಿಸಲಾಗಿದೆ.

ಯೂನಿವರ್ಸಲ್‌ ಹೆಲ್ತ್‌ ಕಾರ್ಡ್‌ಗಳನ್ನು ಜಿಲ್ಲಾಸ್ಪತ್ರೆ ಹಾಗೂ ಆಯಾ ತಾಲೂಕು ಆಸ್ಪತ್ರೆಗಳಲ್ಲಿ ನೀಡಲಾಗುತ್ತದೆ. ಬಿಪಿಎಲ್‌ ಮತ್ತು ಎಪಿಎಲ್‌ ಕುಟುಂಬಗಳು ಆಧಾರ್‌ ಕಾರ್ಡ್‌, ಬಿಪಿಲ್‌ ಕಾರ್ಡ್‌, ಚುನಾವಣಾ ಗುರುತಿನಚೀಟಿ ನೀಡಿ 10 ರೂ. ಶುಲ್ಕ ಪಾವತಿಸಿ ಕಾರ್ಡ್‌ ಪಡೆಯಬೇಕು. ಆದರೆ ಚಿತ್ರದುರ್ಗ ಜಿಲ್ಲಾಸ್ಪತ್ರೆ ಸೇರಿದಂತೆ ಆರು ತಾಲೂಕುಗಳ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಈ ವರೆಗೂ ಒಂದೇ ಒಂದು ಆರೋಗ್ಯ ಕಾರ್ಡ್‌ ವಿತರಣೆ ಆಗಿಲ್ಲ. 

ಡಿಎಚ್‌ಒಗೇ ಯೋಜನೆ ಮಾಹಿತಿ ಇಲ್ಲ!: ವಿಚಿತ್ರ ಎಂದರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರಿಗೇ ಈ ಯೋಜನೆ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಕೇಸ್‌ ವರ್ಕರ್‌, ಕಂಪ್ಯೂಟರ್‌ ಎಂಟ್ರಿ ಮಾಡುವವರ ಕಡೆ ಕೈ ತೋರಿಸಿ ಮಾಹಿತಿ ಪಡೆಯಿರಿ ಎನ್ನುವ ಉದಾಸೀನದ ಮಾತುಗಳನ್ನು ಆಡುತ್ತಿದ್ದಾರೆ. 

ಇಂದಿಗೂ ಯಾವುದೇ ನೋಂದಣಿ ಮಾಡುತ್ತಿಲ್ಲ. ಇದರಿಂದಾಗಿ ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆ ಬಡ ಕುಟುಂಬಗಳ ಪಾಲಿಗೆ ಮರೀಚಿಕೆಯಾಗಿದೆ.
 ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆ ಅಡಿ ನೋಂದಣಿ ಮಾಡಿಕೊಂಡು ಆರೋಗ್ಯ ಕಾರ್ಡ್‌ ವಿತರಣೆ ಮಾಡಿದ್ದರೆ ಆಸ್ಪತ್ರೆಗಳಲ್ಲಿ ಬಿಲ್‌ ಕಟ್ಟುವ ಅವಶ್ಯಕತೆಯೇ ಇರುತ್ತಿರಲಿಲ್ಲ. ಬಿಪಿಲ್‌ ಕಾರ್ಡ್‌ ಹೊಂದಿದವರಿಗೆ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ಸಿಗುತ್ತಿತ್ತು. ಎಪಿಲ್‌ ಕಾರ್ಡ್‌ ಹೊಂದಿದವರಿಗೆ ಚಿಕಿತ್ಸಾ ವೆಚ್ಚದಲ್ಲಿ ಶೇ. 30 ರಷ್ಟು ರಿಯಾಯತಿ ಪಡೆಯಬಹುದಾಗಿತ್ತು.

Advertisement

ಬಿಪಿಎಲ್‌ ಕುಟುಂಬಗಳು ಖಾಸಗಿ ಆಸ್ಪತ್ರೆಗಳಲ್ಲೂ ಐದು ಲಕ್ಷ ರೂ. ತನಕ ಉಚಿತ ಚಿಕಿತ್ಸೆ ಪಡೆಯಬಹುದಾಗಿತ್ತು. ರಾಜ್ಯದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರಗಳಿವೆಯೋ ಅಲ್ಲಿ ನೋಂದಣಿ ಮಾಡಲಾಗುತ್ತಿದೆ ಎಂದು ಕೇಸ್‌ ವರ್ಕರ್‌ಗಳು ಹೇಳುತ್ತಾರೆ.
 
ಬಡ ಕುಟುಂಬಗಳಿಗೆ ಯೂನಿವರ್ಸಲ್‌ ಹೆಲ್ತ್‌ ಕಾರ್ಡ್‌ ನೀಡಲು ಪ್ರತ್ಯೇಕ ಘಟಕ ಕೆಲಸ ಮಾಡಬೇಕಿತ್ತು. ಆದರೆ ಅಂತಹ ಯಾವುದೇ ಕಾರ್ಯ ಆಗಿಲ್ಲ. ಯಾವ ರೋಗಿ ಬಿಪಿಎಲ್‌ ಕಾರ್ಡ್‌ ಹಿಡಿದು ಬರುತ್ತಾನೋ ಸರ್ಕಾರಿ ವೈದ್ಯರು ಚಿಕಿತ್ಸೆ ನೀಡುತ್ತಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಆ ಚಿಕಿತ್ಸೆಗೆ ಸೌಲಭ್ಯ ಇಲ್ಲದಿದ್ದರೆ ವೈದ್ಯರು ಪತ್ರ ನೀಡಿ ಬೇರೆ ಕಡೆ ಚಿಕಿತ್ಸೆಗೆ ಶಿಫಾರಸು ಮಾಡುತ್ತಾರೆ. 

ಒಟ್ಟಿನಲ್ಲಿ ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಬಡ ಕುಟುಂಬಗಳಲ್ಲಿ ಗೊಂದಲ ಇದೆ. ಈ ಗೊಂದಲವನ್ನು ನಿವಾರಿಸಿ ಬಡವರಿಗೆ ಆರೋಗ್ಯ ಭಾಗ್ಯ ನೀಡುವ ಹೊಣೆ ಸಂಬಂಧಿಸಿದ ಅಧಿಕಾರಿಗಳ ಮೇಲಿದೆ.  

ಯಾವ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ ಇದೆಯೋ ಅಲ್ಲಿ ಮಾತ್ರ ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆಗೆ ನೋಂದಣಿ ಮಾಡಲಾಗುತ್ತಿದೆ. ಚಿತ್ರದುರ್ಗದಲ್ಲಿ ಇರುವರೆಗೆ ಯಾವುದೇ ನೋಂದಣಿ ಮಾಡಲಾಗಿಲ್ಲ. ಬಿಪಿಎಲ್‌ ಕಾರ್ಡ್‌ ತಂದಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ.
 ಡಾ| ಬಿ.ವಿ. ನೀರಜ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ.

ಹರಿಯಬ್ಬೆ ಹೆಂಜಾರಪ್ಪ

Advertisement

Udayavani is now on Telegram. Click here to join our channel and stay updated with the latest news.

Next