ವಿಜಯಪುರ: ಸರ್ಕಾರ ಜನಸಾಮಾನ್ಯರಿಗೆ ರೂಪಿಸಿರುವ ಆರೋಗ್ಯ ಯೋಜನೆಗಳನ್ನು ಗ್ರಾಮೀಣ ಭಾಗದ ಜನರಿಗೆ ತಿಳಿವಳಿಕೆ ಮೂಡಿಸುವ ಮೂಲಕ ಆರೋಗ್ಯವಂತ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಗ್ರಾಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ನಾಟೀಕಾರ ಹೇಳಿದರು.
ಮುಳಸಾವಳಗಿಯಲ್ಲಿ ನಡೆದ ಆಯುಷ್ಮಾನ್ ಭಾರತ ವಿಶೇಷ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಅವರು, ಯೋಜನೆ ಯಶಸ್ವಿಗೆ ಜನಪ್ರತಿನಿಧಿಗಳು ಹಾಗೂ ಎಲ್ಲ ಇಲಾಖೆಗಳು ಕೈಜೊಡಿಸಲು ಮನವಿ ಮಾಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆರ್.ಎಚ್.ಹುಣಸಿಗಿಡದ ಮಾತನಾಡಿ, ಆಯುಷ್ಮಾನ್ ಭಾರತ ಯೋಜನೆ ಪ್ರಾರಂಭಿಕ ಹಂತದಲ್ಲಿ ರೋಗಿಗೆ ಮೊದಲು ಸರ್ಕಾರಿ ಆಸ್ಪತ್ರೆಯಲ್ಲಿ 169 ಉಚಿತ ಆರೋಗ್ಯ ಸೇವೆಗಳ ತುರ್ತು ಚಿಕಿತ್ಸೆ ನೀಡಲಾಗುತ್ತದೆ.
ನಂತರ ಪ್ರಮುಖ ಗಂಡಾಂತರ ತುರ್ತು ಪರಿಸ್ಥಿತಿಯಲ್ಲಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುವುದು. ಯೋಜನೆಯಡಿ ಕೇಂದ್ರ ಸರ್ಕಾರ ಶೇ. 60 ಮತ್ತು ರಾಜ್ಯದ ಪಾಲು ಶೇ. 40 ಇರಲಿದ್ದು ಇನ್ನೂ ಮುಂದಿನ ದಿನಗಳಲ್ಲಿ ಇಲಾಖೆ ಮೂಲಕ ಕಾರ್ಡ್ ನೀಡಲಾಗುತ್ತದೆ. ಪ್ರತಿ ಕುಟಂಬಕ್ಕೆ ಕನಿಷ್ಠ 5 ಲಕ್ಷ ರೂ.ವರೆಗೆ ಉಚಿತ ಆರೋಗ್ಯ ಸೇವೆ ನೀಡಲಾಗುತ್ತದೆ ಎಂದರು.
ವಿಜಯಪುರ ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಮುರಳಿಧರ ಕಾರಭಾರಿ ಪ್ರಾಸ್ತಾವಿಕ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷ ಸೋಮು ಚವ್ಹಾಣ, ಸಾಹೇಬಣ್ಣ ಸೊನ್ನಳ್ಳಿ, ವಿರೂಪಾಕ್ಷ ರೂಢಗಿ, ಸಿದ್ದಪ್ಪ ನಾಗರಳ್ಳಿ, ಹನುಮಂತರಾಯ ಬಿರಾದಾರ, ಎಸಿಡಿಎಸ್ ಮೇಲ್ವಿಚಾರಕಿ ದೀಪಾ ರಾಠೊಡ, ಗಂಗಾಬಾಯಿ ಒಂಟೆತ್ತಿನ, ಶಿಕ್ಷಕರಾದ ಎಚ್.ಎಂ. ನದಾಫ್, ಎ.ಎಸ್. ವಾಲೀಕಾರ, ಎಸ್.ಎ. ಪಾನಫರೊಶ, ಸುಭಾಷ್ ಹೊಸಮನಿ ಇದ್ದರು. ಇದಕ್ಕೂ ಮೊದಲು ಗ್ರಾಮದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.