Advertisement

Udupi;ಡಯಾಲಿಸಿಸ್‌ಗೆ ಆಯುಷ್ಮಾನ್‌ ಪರಿಹಾರ: ಜಿಲ್ಲೆಯಲ್ಲಿ ಮೂರೇ ಕಡೆ ಸರಕಾರಿ ಡಯಾಲಿಸಿಸ್‌

12:31 AM Jun 25, 2023 | Team Udayavani |

ಕುಂದಾಪುರ: ಉಡುಪಿ ಜಿಲ್ಲೆ ಯಲ್ಲಿ ಡಯಾಲಿಸಿಸ್‌ ಸೌಲಭ್ಯ ಪಡೆಯಲು ಸಾಕಷ್ಟು ಮಂದಿ ಇದ್ದರೂ ಸೌಲಭ್ಯ ಸೀಮಿತ ಆಗಿದೆ. ಜತೆಗೆ ಸರಕಾರಿ ಆಸ್ಪತ್ರೆಗಳಲ್ಲಿನ ಡಯಾಲಿಸಿಸ್‌ ನಿರ್ವಹಣೆ ಮಾಡುತ್ತಿರುವ ಏಜೆನ್ಸಿ ಬಗ್ಗೆ ಎಲ್ಲೆಡೆಯಿಂದ ದೂರುಗಳಿದ್ದರೂ ಯಾವುದೇ ಪ್ರಯೋಜನವಾಗದಿರುವುದು ಗಮನಕ್ಕೆ ಬಂದಿದೆ.

Advertisement

ಹಾಗಾಗಿ ಆಯುಷ್ಮಾನ್‌ ಭಾರತ ಯೋಜನೆಗೆ ಡಯಾಲಿಸಿಸ್‌ ಚಿಕಿತ್ಸೆಯನ್ನು ಸೇರಿಸಬೇಕೆಂಬ ಆಗ್ರಹ ಜನರಿಂದ ವ್ಯಕ್ತವಾಗಿದೆ.

ರಾಜ್ಯಾದ್ಯಂತ 122 ಸರಕಾರಿ ಆಸ್ಪತ್ರೆಗಳಲ್ಲಿ 4 ಸಾವಿರಮಂದಿ ಮೂತ್ರಪಿಂಡ ಚಿಕಿತ್ಸೆಗೆ ಒಳ ಗಾಗುತ್ತಿ ದ್ದಾರೆ. ವಾರದಲ್ಲಿ ಎರಡು ದಿನ ತಲಾ ಮೂರು ಗಂಟೆಗಳಂತೆ ಈ ಚಿಕಿತ್ಸೆ ಪಡೆದುಕೊಳ್ಳಬೇಕಾಗುತ್ತದೆ. ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಈ ಚಿಕಿತ್ಸೆ ಲಭ್ಯವಿದ್ದು ಈ ಹಿಂದೆ ಬಿಆರ್‌ಎಸ್‌ ಸಂಸ್ಥೆ ನಿರ್ವಹಿಸುತ್ತಿತ್ತು. ಈಗ ಸಂಜೀವಿನಿ ಎಂಬ ಸರಕಾರೇತರ ಸಂಸ್ಥೆ ನಿರ್ವಹಿ ಸುತ್ತಿದೆ. ಒಬ್ಬ ರೋಗಿಗೆ ಇಂತಿಷ್ಟು ಎಂದು ನಿಗದಿತ ಮೊತ್ತವನ್ನು ಸರಕಾರ ಸಂಸ್ಥೆಗೆ ಪಾವತಿಸುತ್ತದೆ.

ನಿಯಮಗಳಿಲ್ಲ
ಸಂಜೀವಿನಿ ಸಂಸ್ಥೆಗೆ ಸರಕಾರ ವಿಧಿಸಿದ ಷರತ್ತು, ನಿಯಮಗಳನ್ನು ಆ ಸಂಸ್ಥೆ ಪಾಲಿಸುತ್ತಿಲ್ಲ ಎಂಬ ದೂರುಗಳೂ ಇವೆ. ಈ ಬಗ್ಗೆ ಆಸ್ಪತ್ರೆಗಳಿಂದಲೇ ಮೇಲಧಿಕಾರಿಗಳಿಗೆ, ಸರಕಾರಕ್ಕೆ ಬರೆಯಲಾಗಿದೆ. ಆದರೆ ಈವರೆಗೂ ಯಾವುದೇ ಕ್ರಮ ಜರುಗಿಲ್ಲ. ರೋಗಿಗೆ ಅಗತ್ಯ ವಿರುವ ಚುಚ್ಚುಮದ್ದನ್ನು ನೀಡುವುದಿಲ್ಲ. ಕೇಂದ್ರ ದಲ್ಲಿ ವೈದ್ಯರೊಬ್ಬರು ಇರಬೇಕೆಂದಿದ್ದರೂ ನೇಮಿಸಿಲ್ಲ. ಸರಿಯಾದ ಕ್ರಮದಲ್ಲಿ ಚಿಕಿತ್ಸೆ ದೊರೆಯದೆಂಬ ದೂರು ಇದೆ. ಕುಂದಾಪುರದಲ್ಲಿ ಡಯಾಲಿಸಿಸ್‌ ಯಂತ್ರಗಳನ್ನೇ ಸಂಸ್ಥೆ ಬಳಸುತ್ತಿದ್ದು ಸ್ವಂತ ಯಂತ್ರಗಳನ್ನೂ ಹಾಕಿಲ್ಲ! ಹಿಮೊಗ್ಲೋಬಿನ್‌ ಕೊರತೆಗೆ ಚುಚ್ಚುಮದ್ದು ಕೂಡ ಆಸ್ಪತ್ರೆಯಿಂದಲೇ ನೀಡಲಾಗುತ್ತಿದೆ.

ಎಲ್ಲಿ ಇವೆ?
ಕುಂದಾಪುರ-6, ಕಾರ್ಕಳ-4, ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ 10 ಡಯಾಲಿಸಿಸ್‌ ಯಂತ್ರ ಗಳಿವೆ. ಕುಂದಾಪುರದಲ್ಲಿ 45 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು 2 ಮಂದಿ ಕಾಯುವಂತಾಗಿದೆ. ಇದಲ್ಲದೇ ಉಡುಪಿ, ಕುಂದಾಪುರದ ಒಟ್ಟು 8 ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆಯಿದೆ. ಒಮ್ಮೆ ಡಯಾಲಿಸಿಸ್‌ ಚಿಕಿತ್ಸೆ ಆರಂಭಿಸಿದ ಬಳಿಕ ನಿಲ್ಲಿಸುವಂತಿಲ್ಲ. ಖಾಸಗಿಯಲ್ಲಿ ದುಬಾರಿ. ಬಡವರ ಪಾಲಿಗೆ ಆರ್ಥಿಕ ಸವಾಲೇ ಸರಿ. ಡಯಾಲಿಸಿಸ್‌ ಚಿಕಿತ್ಸೆ ಒದಗಿಸಲು ತಾಲೂಕು ಆಸ್ಪತ್ರೆಗಳೇ ಆಗಬೇಕು ಎಂಬ ನಿಯಮವಿದೆ. ಬ್ರಹ್ಮಾವರ, ಬೈಂದೂರು, ಕಾಪು, ಹೆಬ್ರಿಯಲ್ಲಿ ಸಮುದಾಯ ಕೇಂದ್ರಗಳಿದ್ದರೂ ಡಯಾಲಿಸಿಸ್‌ ಚಿಕಿತ್ಸೆ ದೊರೆಯುತ್ತಿಲ್ಲ.

Advertisement

ಆಯುಷ್ಮಾನ್‌ ಜೋಡಣೆ
ಡಯಾಲಿಸಿಸ್‌ ಚಿಕಿತ್ಸೆಯನ್ನು ಆಯು ಷ್ಮಾನ್‌ ಭಾರತ ಆರೋಗ್ಯ ವಿಮೆ ಜತೆಗೆ ಜೋಡಿಸಿದರೆ ಸಾವಿರಾರು ಮಂದಿಗೆ ಲಾಭ ಆಗಲಿದೆ. ಸದ್ಯ ಆಯುಷ್ಮಾನ್‌ ಚಿಕಿತ್ಸಾ ಪಟ್ಟಿಯಿಂದ ಡಯಾಲಿಸಿಸ್‌ ವ್ಯವಸ್ಥೆ ಹೊರಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಚಿಕಿತ್ಸೆ ನೀಡ ಬಹುದು. ಆಗ, ದಾನಿಗಳ ಮೂಲಕ ಯಂತ್ರದ ಸಂಖ್ಯೆ ಹೆಚ್ಚಿಸಿ ಹೆಚ್ಚು ಜನರಿಗೆ ಚಿಕಿತ್ಸೆ ಒದಗಿಸಬಹುದು. ಖಾಸಗಿಯಲ್ಲಿ ಚಿಕಿತ್ಸೆ ಪಡೆದರೂ ಆಯುಷ್ಮಾನ್‌ ದೊರೆತರೆ ರೋಗಿಗಳಿಗೆ ತುಸು ನಿರಾಳವಾಗಲಿದೆ. ಈಗ 24 ತಾಸು ಕೂಡ 3 ಪಾಳಿಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಅವರಿಗೆ ಪ್ರಯಾಣ ಭತ್ತೆ ಇತ್ಯಾದಿಯನ್ನು ಸರಕಾರಿ ಆಸ್ಪತ್ರೆ ಮೂಲಕ ನೀಡಲಾಗುತ್ತಿದೆ. ಇದಕ್ಕೂ ಪರಿಹಾರ ದೊರೆತಂತಾಗಲಿದೆ.

ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಶಾಸಕರು ಡಯಾಲಿಸಿಸ್‌ ಸಮಸ್ಯೆ ಕುರಿತು ಧ್ವನಿ ಎತ್ತಿ ಸರಕಾರದ ಗಮನ ಸೆಳೆಯಬೇಕೆಂಬುದು ಸಾರ್ವಜನಿಕರ ಆಗ್ರಹ. ಖಾಸಗಿ ಸಂಸ್ಥೆಯೊಂದಿನ ಒಪ್ಪಂದದ ಪರೀಶೀಲನೆ, ಸರಿಯಾಗಿ ನಿರ್ವಹಣೆ ಮಾಡದ ಕಾರಣ ಒಪ್ಪಂದ ರದ್ದು ಮಾಡಬೇಕು ಎಂಬ ಕೂಗಿಗೂ ಮನ್ನಣೆ ಸಿಗುತ್ತದೆಯೋ ಕಾದು ನೋಬೇಕಿದೆ. ಈ ಸಂಸ್ಥೆಯ ಬದಲು ಸರಕಾರಿ ಆಸ್ಪತ್ರೆಗಳ ನಿರ್ವಹಣೆ ಚೆನ್ನಾಗಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

ಉಡುಪಿ, ಕುಂದಾಪುರ, ಕಾರ್ಕಳ ಸರಕಾರಿ ಆಸ್ಪತ್ರೆಗಳಲ್ಲಿ ಸಂಜೀವಿನಿ ಸಂಸ್ಥೆ ಮೂಲಕ ಡಯಾಲಿಸಿಸ್‌ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು 20 ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ.
– ಡಾ| ನಾಗಭೂಷಣ ಉಡುಪ
ಜಿಲ್ಲಾ ಆರೋಗ್ಯಾಧಿಕಾರಿ, ಉಡುಪಿ

ಹಳೆಯ ತಾಲೂಕುಗಳ ಆಸ್ಪತ್ರೆಗಳಲ್ಲಷ್ಟೆ ಸೌಲಭ್ಯ ಇದೆ. ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆರಂಭಿಸಲು ಅನುಮತಿ ಕೇಳಲಾಗಿದೆ.
– ಡಾ| ಕಿಶೋರ್‌ಕುಮಾರ್‌
ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next