ಮುಳಬಾಗಿಲು: ಜನವರಿ 1ರಿಂದ ಗ್ರಾಪಂಗಳಲ್ಲೇ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಡ ಗಳನ್ನು ವಿತರಣೆ ಮಾಡಲು ಸರ್ಕಾರ ಆದೇಶಿಸಿದೆ. ಜನರು ಸದುಪಯೋಗ ಪಡಿಸಿಕೊಳ್ಳಬೇಕು. ವಿತರಣೆ ಯಲ್ಲಿ ಲೋಪ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ಜಿಲ್ಲಾ ನೋಡಲ್ ಅಧಿಕಾರಿ ಡಾ.ಎನ್.ಸಿ. ನಾರಾಯಣಸ್ವಾಮಿ, ಪಿಡಿಒ ಮತ್ತು ಡಿಇಒ ಅಧಿಕಾರಿಗಳಿಗೆ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಸಾರ್ವಜನಿಕ ಆಸ್ಪತ್ರೆ ಮುಳಬಾಗಿಲು ಆಶ್ರಯದಲ್ಲಿ ನಗರದ ತಾಪಂ ಕಚೇರಿಯಲ್ಲಿ ಪಿಡಿಒ ಮತ್ತು ಡಿಇಒಗಳಿಗೆ ಏರ್ಪಡಿಸಲಾಗಿದ್ದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸಂಯೋಜಿತ ಯೋಜನೆಯಾಗಿದ್ದು ಅ. 2018ರಿಂದ ರಾಜ್ಯಾದ್ಯಂತ ಜಾರಿಯಾಗುತ್ತಿದೆ. ಅದರಂತೆ ತಾಲೂಕು ಗ್ರಾಪಂ ಅಧಿಕಾರಿಗಳಿಗೆ ಹಾಗೂ ಬಾಪೂಜಿ ಸೇವಾ ಕೇಂದ್ರಗಳ ಗಣಕಯಂತ್ರ ನಿರ್ವಾಹಕರುಗಳಿಗೆ ತರಬೇತಿಯನ್ನು ನಿಗದಿತ ದಿನಾಂಕದಂದು ಆಯೋಜಿಸಲಾಗಿದ್ದು ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂದರು.
ಸೌಲಭ್ಯ ಪಡೆಯುವುದು ಹೇಗೆ?: ಜನರು ಹುಷಾರಿಲ್ಲದಾಗ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ನಿಮ್ಮ ಆಧಾರ್ ಕಾರ್ಡ್ ಮತ್ತು ಪಡಿತರ ಕಾರ್ಡ್ ಹಾಜರು ಪಡಿಸಿ, ಅಲ್ಲಿ ನಿಮ್ಮ ತಪಾಸಣೆ ಮಾಡಿ ಚಿಕಿತ್ಸೆ ನೀಡುತ್ತಾರೆ. ನಿಮ್ಮ ಕಾಯಿಲೆಗೆ ಅಲ್ಲಿ ಚಿಕಿತ್ಸೆ ಲಭ್ಯವಿದ್ದರೆ ನಿಮಗೆ ರೆಫರಲ್ ನೀಡುತ್ತಾರೆ. ರೆಫರಲ್ ಪತ್ರದೊಂದಿಗೆ ನೀವು ಇಚ್ಛಿಸುವ ಯಾವುದೇ ನೋಂದಾಯಿತ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳ ಬಹುದು. ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇರುವುದಿಲ್ಲ. ನೀವು ನೇರವಾಗಿ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಕೊಳ್ಳಬಹುದು ಎಂದು ಹೇಳಿದರು.
1,650 ರೀತಿಯ ಚಿಕಿತ್ಸೆಗಳು ಲಭ್ಯ: ಯೋಜನೆಯಲ್ಲಿ 1,650 ಚಿಕಿತ್ಸಾ ವಿಧಾನಗಳಿಗೆ ಚಿಕಿತ್ಸೆ ಲಭ್ಯವಿದೆ. ಸಾಮಾನ್ಯ ದ್ವಿತೀಯ ಹಂತದ 291 ಚಿಕಿತ್ಸೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ನೀಡಲಾಗುತ್ತದೆ. ಕ್ಲಿಷ್ಟಕರ ದ್ವಿತೀಯ ಹಂತದ 254 ಮತ್ತು ತೃತೀಯ ಹಂತದ 900 ಚಿಕಿತ್ಸಾ ವಿಧಾನಗಳು ಹಾಗೂ 169 ತುರ್ತು ಚಿಕಿತ್ಸೆಗಳನ್ನು ನೋಂದಾಯಿತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪಡೆದುಕೊಳ್ಳಬಹುದು. 169 ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲ. ನೇರವಾಗಿ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು. ಆರೋಗ್ಯ ಕಾರ್ಡ್ ಎಲ್ಲಿ ನೀಡಲಾಗುತ್ತದೆ: ಆರೋಗ್ಯ ಕಾರ್ಡ್‌ನ್ನು (ಎಬಿ-ಎಆರ್‌ಕೆ) ಸರ್ಕಾರಿ ಆಸ್ಪತ್ರೆ ಗಳಲ್ಲಿ 10 ರೂ. ಶುಲ್ಕ ನೀಡಿ ಪಡೆದುಕೊಳ್ಳಿ.
ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಸೇವಾ ಸಿಂಧು ಕೇಂದ್ರಗಳಲ್ಲಿ ಕಾಗದದ ಕಾರ್ಡಿಗೆ 10 ರೂ., ಪ್ಲಾಸ್ಟಿಕ್ ಕಾರ್ಡಿಗೆ 35 ರೂ.ಶುಲ್ಕ ನೀಡಿ ಪಡೆದುಕೊಳ್ಳಿ, ಆಧಾರ್ ಕಾರ್ಡ್ ಮತ್ತು ಪಡಿತರ ಕಾರ್ಡ್ ಗಳನ್ನು ಹಾಜರುಪಡಿಸಿ ಆರೋಗ್ಯ ಕಾರ್ಡ್ ಪಡೆದು ಕೊಳ್ಳಬೇಕೆಂದರು. ತಾಪಂ ಇಒ ಎಂ.ಬಾಬು, ತಾಲೂಕು ಆರೋಗ್ಯಾಧಿಕಾರಿ ಡಾ.ವರ್ಣಶ್ರೀ ಮತ್ತು ಪಿಡಿಒಗಳು ಮತ್ತು ಡಿಇಒಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.