Advertisement

ಆಯುಷ್ಮಾನ್‌ ಭವ;ಅನ್ನದಾತನ ಮೇಲೆ ಪ್ರೀತಿ, ಗ್ರಾಮೀಣಾಭಿವೃದ್ಧಿಗೆ ಒತ್ತು

06:00 AM Feb 02, 2018 | Team Udayavani |

ಹೊಸದಿಲ್ಲಿ: ಎಲ್ಲರ ಆರೋಗ್ಯವೂ ಚೆನ್ನಾಗಿರಲಿ, ಆಯುಸ್ಸೂ ಹೆಚ್ಚಲಿ…! ಇದೇ ಸದಾಶಯದೊಂದಿಗೆ ಕೇಂದ್ರದಲ್ಲಿನ ನರೇಂದ್ರ ಮೋದಿ ಸರಕಾರದ ಕಡೆಯ ಪೂರ್ಣ ಬಜೆಟ್‌ ಅನ್ನು ಮಂಡಿಸಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಮಧ್ಯಮ ವರ್ಗದ ಮೇಲಿನ ಪ್ರೀತಿಯನ್ನು ಕೊಂಚ ಕಡಿಮೆ ಮಾಡಿ, ಬಡವರು ಮತ್ತು ಕೃಷಿಕರ ಮೇಲೆ “ಅನುದಾನ, ಹೊಸ ಯೋಜನೆ’ಗಳ ಪ್ರೇಮ ತೋರಿಸಿದ್ದಾರೆ.

Advertisement

ಅಮೆರಿಕದ ಒಬಾಮಾ ಕೇರ್‌ ಮಾದರಿಯಲ್ಲೇ, ದೇಶದ ಅರ್ಧದಷ್ಟು ಜನ, ಅಂದರೆ, 50 ಕೋಟಿ ಜನರಿಗೆ ಅನುಕೂಲವಾಗುವಂಥ “ಆರೋಗ್ಯ ವಿಮೆ’ ಸೌಲಭ್ಯ “ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ’ ಘೋಷಣೆ ಮಾಡಿರುವ ಕೇಂದ್ರ ಸರಕಾರ, ಈ ಮೂಲಕ ಎಲ್ಲರ ಆರೋಗ್ಯ ಕಾಯ್ದುಕೊಳ್ಳುವ ಭರವಸೆ ನೀಡಿದೆ. ವಿಶೇಷ ವೆಂದರೆ, ಈ ಆರೋಗ್ಯ ವಿಮೆ ಸೌಲಭ್ಯ ಇಡೀ ವಿಶ್ವದಲ್ಲೇ ಅತ್ಯಂತ ದೊಡ್ಡದು ಎನಿಸಿಕೊಳ್ಳಲಿದ್ದು, 10 ಕೋಟಿ ಬಡ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರೂ. ಗಳಷ್ಟು ಆರೋಗ್ಯ ವಿಮೆ ಸೌಲಭ್ಯ ನೀಡ ಲಿದೆ. ಅಂದರೆ, ಈ 10 ಕೋಟಿ ಕುಟುಂಬಗಳಿಗೆ ಸೇರಿದ ಸುಮಾರು 50 ಕೋಟಿ ಮಂದಿಯ ಆಸ್ಪತ್ರೆ ವೆಚ್ಚ ಸಂಪೂರ್ಣ ಉಚಿತವಾಗಲಿದೆ. ಚುನಾವಣೆ ಹೊಸ್ತಿಲಲ್ಲಿ ಮಾಡಲಾಗಿರುವ ಈ ಘೋಷಣೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಒಬಾಮಾ ಕೇರ್‌ ಮಾದರಿಯಲ್ಲೇ “ಮೋದಿ ಕೇರ್‌, ನಮೋ ಕೇರ್‌’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಅರುಣ್ ಜೇಟ್ಲಿ ಅವರು ಸುಮಾರು 110 ನಿಮಿಷಗಳ ಕಾಲ ಬಜೆಟ್‌ ಮಂಡಿಸಿದ್ದು, ಈ ಸಂದರ್ಭದಲ್ಲಿ ಮೋದಿ ಸಹಿತ ಆಡಳಿತ ಪಕ್ಷದ ಕಡೆಯಿಂದ ಸರಣಿ ಪ್ರಕಾರವಾಗಿ ಚಪ್ಪಾಳೆ ಬಿದ್ದಿದೆ.

ರೈತರ ಮೇಲೆ ಪ್ರೀತಿ: ಬಿಜೆಪಿಯ ಪ್ರಮುಖ ಮತವರ್ಗವಾಗಿರುವ ಮಧ್ಯಮ ವರ್ಗದ ಮೇಲೆ ಈ ಬಾರಿಯ ಬಜೆಟ್‌ನಲ್ಲಿ ಸ್ವಲ್ಪ ಕಡಿಮೆ ಪ್ರೀತಿ ತೋರಲಾಗಿದೆ. ಆದರೆ ರೈತರು ಮತ್ತು ಗ್ರಾಮೀಣಾಭಿವೃದ್ಧಿ ಮೇಲೆ ಹೆಚ್ಚು ಗಮನ ಹರಿಸಲಾಗಿದೆ. ರೈತರ ಮುಂಗಾರು ಬೆಳೆಗಳಿಗೆ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಹೆಚ್ಚು ಬೆಂಬಲ ಬೆಲೆ ನಿಗದಿಪಡಿಸಲು ನಿರ್ಧರಿಸಲಾಗಿದೆ. ಅಲ್ಲದೆ, ರೈತರ ಉತ್ಪನ್ನಗಳ ಮಾರಾಟಕ್ಕಾಗಿ “ಗ್ರಾಮ್ಸ್‌’ ಹೆಸರಿನಲ್ಲಿ ಮಾರುಕಟ್ಟೆ ಸ್ಥಾಪಿಸಲು ನಿರ್ಧರಿಸಲಾಗಿದೆ.

ಇನ್ನು  ಶೀಘ್ರ ಕೊಳೆಯುವ ಕೃಷಿ ಉತ್ಪನ್ನಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಆಪರೇಶನ್‌ ಗ್ರೀನ್ಸ್‌ ಯೋಜನೆ ಘೋಷಿಸಲಾಗಿದೆ. ಆಲೂಗಡ್ಡೆ, ಟೊಮಾಟೋ ಮತ್ತು ಈರುಳ್ಳಿಯಂತಹ ಉತ್ಪನ್ನಗಳನ್ನು ಹೆಚ್ಚಿನ ಸಮಯದವರೆಗೆ ಸಂಗ್ರಹಿಸುವುದಕ್ಕಾಗಿ 500 ಕೋಟಿ ರೂ. ಮೀಸಲಿಡಲು ನಿರ್ಧರಿಸಲಾಗಿದೆ. ಇನ್ನೊಂದೆಡೆ ಆಪರೇಶನ್‌ ಫ್ಲಡ್‌ ಯೋಜನೆಯನ್ನೂ ಘೋಷಿಸಲಾಗಿದ್ದು, ಇದರ ಅಡಿಯಲ್ಲಿ ಕೃಷಿ ಉತ್ಪಾದಕರ ಸಂಘಟನೆಗಳು, ಕೃಷಿ ಉತ್ಪನ್ನ ಸಾಗಣೆ, ಸಂಸ್ಕರಣೆ ಘಟಕಗಳು ಮತ್ತು ವೃತ್ತಿಪರ ನಿರ್ವಹಣೆ ಮಾಡಲಾಗುತ್ತದೆ.  

ಕೃಷಿ ಸಾಲಕ್ಕೆ 11 ಲಕ್ಷ ಕೋಟಿ ರೂ.
 ನಿರೀಕ್ಷೆಯಂತೆಯೇ ಕೃಷಿ ಸಾಲಕ್ಕಾಗಿ ಈ ಬಾರಿ ಕಳೆದ ವರ್ಷಕ್ಕಿಂತ 1 ಲಕ್ಷ ಕೋಟಿ ರೂ. ಹೆಚ್ಚುವರಿ ಹಣಕಾಸು ಮೀಸಲಿಡಲಾಗಿದೆ.

Advertisement

ಮಧ್ಯಮ ವರ್ಗಕ್ಕೆ ನಿರಾಸೆ: ಆದಾಯ ತೆರಿಗೆ ಮಿತಿಯನ್ನು ಏರಿಕೆ ಮಾಡಬಹುದು ಎಂಬ ಮಧ್ಯಮ ವರ್ಗ ಅಥವಾ ವೇತನ ವರ್ಗಕ್ಕೆ ಜೇಟಿÉ ನಿರಾಸೆಯನ್ನುಂಟು ಮಾಡಿದ್ದಾರೆ. ಈ ಬಾರಿಯೂ ಆದಾಯ ತೆರಿಗೆ ಮಿತಿಯನ್ನು ಏರಿಕೆ ಮಾಡಲು ಹೋಗಿಲ್ಲ. ಆದರೆ, 40 ಸಾವಿರ ರೂ.ಗಳ ವರೆಗೆ ಸ್ಟಾಂಡರ್ಡ್‌ ಡಿಡಕ್ಷನ್‌ ಅವಕಾಶ ನೀಡಿದ್ದಾರೆ. ಈ ವಿನಾಯಿತಿ ಪಡೆಯಲು ಯಾವುದೇ ಬಿಲ್‌ ಅಥವಾ ಪತ್ರಗಳು ಬೇಕಾಗಿಲ್ಲ. ಆದರೆ ಹಿರಿಯ ನಾಗರಿಕರಿಗೆ ಆದಾಯ ತೆರಿಗೆಯಲ್ಲಿ ಹೆಚ್ಚಿನ ಲಾಭ ಸಿಕ್ಕಿದೆ. ಅವರ ಅಂಚೆ ಕಚೇರಿ ಠೇವಣಿ, ಆರೋಗ್ಯ ವಿಮಾ ಕಂತು ಮತ್ತು ಗಂಭೀರ ಅನಾರೋಗ್ಯ ವೆಚ್ಚ ವನ್ನು ಆಧರಿಸಿ ತೆರಿಗೆಯಲ್ಲಿ ವಿನಾಯಿತಿ ಸಿಕ್ಕಿದೆ.

ಕಾರ್ಪೊರೇಟ್‌ ತೆರಿಗೆ ಕಡಿತ
 2015ರಲ್ಲಿ ಅರುಣ್ ಜೇಟ್ಲಿ ಅವರೇ ಭರವಸೆ ನೀಡಿದಂತೆ ಈ ಬಾರಿ ಕಾರ್ಪೊರೇಟ್‌ ವಲಯಕ್ಕೆ ಸಿಹಿ ಸುದ್ದಿ ನೀಡಿದ್ದಾರೆ. ಕಾರ್ಪೊರೇಟ್‌ ತೆರಿಗೆಯನ್ನು ಶೇ.30 ರಿಂದ ಶೇ.25ಕ್ಕೆ ಇಳಿಕೆ ಮಾಡಲಾಗಿದೆ.

ದೇಶದ ಆರ್ಥಿಕ ಸ್ಥಿತಿಗತಿ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾವಿಸಿರುವ ಅರುಣ್ ಜೇಟ್ಲಿ ಅವರು, ದೇಶದ ಆರ್ಥಿಕ ಆರೋಗ್ಯ ಚೆನ್ನಾಗಿದೆ ಎಂದು ಬಣ್ಣಿಸಿದ್ದಾರೆ. ನೋಟು ಅಮಾನ್ಯ ಮತ್ತು ಜಿಎಸ್‌ಟಿ ಕೊಂಚ ಅಡ್ಡಿ ಮಾಡಿದ್ದರೂ, ಈಗ ಆರ್ಥಿಕತೆ ಚಿಗಿತುಕೊಳ್ಳುತ್ತಿದೆ ಎಂದಿದ್ದಾರೆ. ಮುಂದಿನ ಹಣಕಾಸು ವರ್ಷದಲ್ಲಿ ಶೇ.8 ರಷ್ಟು ಜಿಡಿಪಿ ಗಳಿಸಿಕೊಳ್ಳಲಿದ್ದೇವೆ. ಭಾರತದ ಆರ್ಥಿಕತೆ ಸದ್ಯ ಜಗತ್ತಿನಲ್ಲೇ ಏಳನೇ ಸ್ಥಾನದಲ್ಲಿದ್ದು, ಸದ್ಯದಲ್ಲೇ ಐದನೇ ಸ್ಥಾನಕ್ಕೆ ಬರಲಿದೆ ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿಗೆ ಖುಷಿ
ಬೆಂಗಳೂರು ನಾಗರಿಕರ  ಬೇಡಿಕೆಗೆ  ಅರುಣ್ ಜೇಟ್ಲಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸಬ್‌ ಅರ್ಬನ್‌ (ಉಪನಗರ) ರೈಲು ಯೋಜನೆಗಾಗಿ 17,000 ಕೋಟಿ ರೂ.ಗಳನ್ನು ಮೀಸಲಿರಿಸಿದ್ದಾರೆ. 160 ಕಿ.ಮೀ.ದೂರದ ಉಪನಗರಗಳ ವ್ಯಾಪ್ತಿಯಲ್ಲಿ ಈ ಯೋಜನೆ ಜಾರಿಯಾಗಲಿದೆ.

ನವಭಾರತ ದೃಷ್ಟಿಗೆ ಇಂಬು ನೀಡುವಂತೆ ಅರುಣ್ ಜೇಟ್ಲಿ ಮತ್ತು ತಂಡ ಬಜೆಟ್‌ ರೂಪಿಸಿದೆ. ಇದು ದೇಶದ ಎಲ್ಲ ಸ್ಥರದವರ ಸ್ನೇಹಿ ಬಜೆಟ್‌. ರೈತರ ಮತ್ತು ಗ್ರಾಮೀಣ ಭಾರತಕ್ಕೆ ಈ ಹೆಚ್ಚಿನ ಆದ್ಯತೆ ನೀಡಿರುವುದು ದೇಶದಲ್ಲಿ ಹೊಸ ಅವಕಾಶಗಳ ಸಾಧ್ಯತೆ ತೆರೆಯಲಿದೆ
– ನರೇಂದ್ರ ಮೋದಿ, ಪ್ರಧಾನಿ

ಹಂತ ಹಂತವಾಗಿ ಮಧ್ಯಮ ವರ್ಗದವರ ಆದಾಯದ ಮೇಲಿನ ತೆರಿಗೆಯನ್ನು ಕಡಿಮೆ ಮಾಡುತ್ತ ಬಂದಿದ್ದೇನೆ. 5ಲಕ್ಷ ರೂ. ಆದಾಯ ಇರುವವರಿಗೆ ಶೇ.5ರಷ್ಟು ತೆರಿಗೆ ವಿನಾಯಿತಿ ಮಿತಿ ಇದೆ. ಜನಪರ ಹಾಗೂ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಬಜೆಟ್‌ ಇದಾಗಿದೆ.
– ಅರುಣ್ ಜೇಟ್ಲಿ, ವಿತ್ತ ಸಚಿವ

ವಿತ್ತೀಯ ಲೆಕ್ಕಾಚಾರಗಳು ತಪ್ಪಾಗಿರ ಬಹುದು ಎಂದು ನನಗೆ ಆತಂಕವಾಗುತ್ತಿದೆ. ರೈತರ ಆದಾಯ ದುಪ್ಪಟ್ಟು ಮಾಡಲಾಗುವುದು ಎಂದು ಭರವಸೆ ನೀಡಿದೆ. ಈ ಭರವಸೆ ಹೇಗೆ ಈಡೇರಿಸಲಾಗುತ್ತದೆ?
– ಮನಮೋಹನ್‌ ಸಿಂಗ್‌, ಮಾಜಿ ಪ್ರಧಾನಿ

ವಿತ್ತೀಯ ಕೊರತೆ ಸರಿದೂಗಿಸುವಲ್ಲಿ ಅರುಣ್ ಜೇಟ್ಲಿ ಸೋತಿದ್ದಾರೆ. ರಫ್ತು ಹೆಚ್ಚಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಆರೋಗ್ಯ ಸೇವೆಯಡಿ ಪ್ರತಿ ಕುಟುಂಬಕ್ಕೂ 5 ಲಕ್ಷ ರೂ. ನೀಡುತ್ತೇವೆ ಎಂದು ಭರವಸೆ ನೀಡಿರುವುದು ಅತಿ ದೊಡ್ಡ ಜುಮ್ಲಾ.
– ಪಿ. ಚಿದಂಬರಂ, ಕಾಂಗ್ರೆಸ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next