Advertisement

ಆಯುಷ್ಮಾನ್‌ ಭಾರತ್‌- ಆರೋಗ್ಯ ಕರ್ನಾಟಕ ಯೋಜನೆ: ದ.ಕ., ಉಡುಪಿ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ

11:36 AM Jul 01, 2019 | keerthan |

ಉಡುಪಿ: ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಸಂಯೋಜಿತ ಯೋಜನೆಗೆ ಉಡುಪಿ ಹಾಗೂ ದಕ್ಷಿಣ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರಕಿದೆ. ಉಭಯ ಜಿಲ್ಲೆಗಳಲ್ಲಿ ಕಳೆದ 7 ತಿಂಗಳಲ್ಲಿ 7,481 ಫ‌ಲಾನುಭವಿಗಳು 25.66 ಕೋ.ರೂ. ವೆಚ್ಚದ ಚಿಕಿತ್ಸೆ ಪಡೆದುಕೊಂಡಿದ್ದಾರೆ.

Advertisement

2018-19ನೇ ಸಾಲಿನಲ್ಲಿ ಉಡುಪಿ, ಕಾರ್ಕಳ, ಕುಂದಾಪುರ ತಾಲೂಕುಗಳಲ್ಲಿ ಒಟ್ಟು 1,979 ಫ‌ಲಾನುಭವಿಗಳು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಎಪ್ರಿಲ್‌ ಹಾಗೂ ಮೇ ತಿಂಗಳಿನಲ್ಲಿ ಕಾರ್ಕಳದಲ್ಲಿ 218, ಕುಂದಾಪುರದಲ್ಲಿ 565, ಉಡುಪಿ ತಾಲೂಕಿನಲ್ಲಿ 1,258 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 3,239 ಫ‌ಲಾನುಭವಿಗಳು 11.61 ರೂ. ವೆಚ್ಚದ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ದ.ಕ. 14 ಕೋ.ರೂ. ವೆಚ್ಚದ ಚಿಕಿತ್ಸೆ
ದ.ಕ. ಜಿಲ್ಲೆಯಲ್ಲಿ ಒಟ್ಟು 4,242 ಜನರು ಯೋಜನೆಯಡಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. 2018-19ನೇ ಸಾಲಿನಲ್ಲಿ ಒಟ್ಟು 2534 ಫ‌ಲಾನುಭವಿಗಳು 8.92 ಕೋ.ರೂ. ವೆಚ್ಚದ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಮಂಗಳೂರು 550, ಬಂಟ್ವಾಳ 433, ಬೆಳ್ತಂಗಡಿ 299, ಸುಳ್ಯ 160, ಪುತ್ತೂರು ತಾಲೂಕಿನಲ್ಲಿ 266 ಫ‌ಲಾನು ಭವಿಗಳು ಸೇರಿದಂತೆ ಒಟ್ಟು 1708 ಫ‌ಲಾನುಭವಿಗಳು 5.12 ಕೋ. ರೂ. ವೆಚ್ಚದ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ದ.ಕ. ರಾಜ್ಯದಲ್ಲೇ ಪ್ರಥಮ
ಆಯುಷ್ಮಾನ್‌ ಭಾರತ್‌- ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ವೆನ್ಲ್ಯಾಕ್ ಆಸ್ಪತ್ರೆ ರಾಜ್ಯದಲ್ಲಿ ಅತ್ಯಧಿಕ ಮಂದಿಗೆ ಚಿಕಿತ್ಸೆ ನೀಡಿದೆ. ಉಡುಪಿ, ದ.ಕ., ಹಾಸನ, ಚಿತ್ರದುರ್ಗ, ಬಳ್ಳಾರಿ, ಹಾವೇರಿ, ಉ.ಕ. ಸೇರಿದಂತೆ ಒಟ್ಟು 4,218 ಜನರು ಈ ಯೋಜನೆಯಡಿ ವೆನ್ಲ್ಯಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಬಿಪಿಎಲ್‌ ಕಾರ್ಡ್‌ದಾರಿಗೆ 5 ಲ.ರೂ.
ಬಿಪಿಎಲ್‌ ಪಡಿತರ ಚೀಟಿ ಹೊಂದಿ ರುವ ಕುಟುಂಬಕ್ಕೆ ಆಯುಷ್ಮಾನ ಭಾರತ್‌ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯಡಿ ವಾರ್ಷಿಕ 5 ಲ.ರೂ. ಚಿಕಿತ್ಸೆಗಳ ವೆಚ್ಚ ಭರಿಸಲಾಗುತ್ತದೆ.

Advertisement

ಎಪಿಎಲ್‌ನವರಿಗೆ 1.50 ಲ.ರೂ.
ಎಪಿಎಲ್‌ ಕಾರ್ಡ್‌ ಕುಟುಂಬದವ ರಿಗೆ ವಾರ್ಷಿಕ 1.50 ರೂ. ವರೆಗಿನ ಚಿಕಿತ್ಸೆ ವೆಚ್ಚ ಭರಿಸಲಾಗುತ್ತದೆ. ಸರಕಾರದ ಯೋಜನೆಯ ಪ್ಯಾಕೇಜ್‌ ದರದ ಶೇ. 30ರಷ್ಟು ಹಣವನ್ನು ಸರಕಾರ ಭರಿಸುತ್ತದೆ. ಉಳಿದ ಶೇ. 70ರಷ್ಟು ಹಣವನ್ನು (ಉದಾ: ಖಾಸಗಿ ಆಸ್ಪತ್ರೆಯಲ್ಲಿ ಹೃದಯ ಕವಾಟ ಅಳವಡಿಸಲು ಸುಮಾರು 2 ಲ.ರೂ. ಆದರೆ ಆಯುಷ್ಮಾನ್‌ ಯೋಜನೆಯಡಿ ಸರಕಾರದ ಯೋಜನೆಯ ಪ್ಯಾಕೇಜ್‌ ದರದ 1 ಲ.ರೂ. ಅದರಲ್ಲಿ ಶೇ. 70ರಷ್ಟು ಅಂದರೆ ಕೇವಲ 70,000 ರೂ.) ಫ‌ಲಾನುಭವಿ ಭರಿಸಬೇಕಾಗುತ್ತದೆ.

ತುರ್ತು ಚಿಕಿತ್ಸೆಗೆ ಶಿಫಾರಸು ಅಗತ್ಯವಿಲ್ಲ
ತುರ್ತು ಚಿಕಿತ್ಸೆಗೆ ಆರೋಗ್ಯ ಕಾರ್ಡ್‌ ಇಲ್ಲದಿದ್ದರೂ ಸಮಸ್ಯೆಯಿಲ್ಲ. ರೋಗಿಗಳು ಪಡಿತರ ಚೀಟಿ ಹಾಗೂ ಆಧಾರ್‌ ಕಾರ್ಡ್‌ ಮೂಲಕ ಚಿಕಿತ್ಸೆ ಪಡೆಯಬಹುದು. ಪ್ರಾಥಮಿಕ ಹಾಗೂ ಸಾಮಾನ್ಯ ದ್ವಿತೀಯ ಹಂತದ ಆರೋಗ್ಯ ಸೇವೆಗಳನ್ನು ಸರಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತದೆ. ಸರಕಾರಿ ಆಸ್ಪತ್ರೆಯಲ್ಲಿ ಸೂಪರ್‌ ಸ್ಪೆಷಾಲಿಟಿ ಚಿಕಿತ್ಸೆ ಲಭ್ಯವಿಲ್ಲದೇ ಇದ್ದರೆ ಹೆಚ್ಚಿನ ಚಿಕಿತ್ಸೆಗೆ ಯೋಜನೆ ನೋಂದಾಯಿತ ಖಾಸಗಿ ಆಸ್ಪತ್ರೆಗೆ ವೈದ್ಯರು ಶಿಫಾರಸು ಮಾಡುತ್ತಾರೆ. ಆದರೆ ತುರ್ತು ಚಿಕಿತ್ಸೆ (169 ಚಿಕಿತ್ಸಾ ವಿಭಾಗಕ್ಕೆ) ಶಿಫಾರಸು ಅಗತ್ಯವಿಲ್ಲ.

ಮಾಹಿತಿ ಎಲ್ಲಿ ?
ಆಯುಷ್ಮಾನ ಭಾರತ್‌- ಆರೋಗ್ಯ ಕರ್ನಾಟಕ ಮಾಹಿತಿಯನ್ನು ಸಮೀಪದ ಸರಕಾರಿ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಆರೋಗ್ಯ ಮಿತ್ರರು, ನೋಂದಾಯಿತ ಆಸ್ಪತ್ರೆಗಳು, ಟೋಲ್‌ ಫ್ರೀ ಸಂಖ್ಯೆ 1800425833, ಆರೋಗ್ಯ ಸಹಾಯವಾಣಿ 104, ವೆಬ್‌ಸೈಟ್‌: www.sast.gov.in, www.arogya.karnataka.gov.in ಇಲ್ಲಿ ಪಡೆಯಬಹುದಾಗಿದೆ.

ಸಹಾಯವಾಣಿ ಚಿಂತನೆ
ಆಯುಷ್ಮಾನ್‌ ಭಾರತ್‌ -ಆರೋಗ್ಯ ಕರ್ನಾಟಕ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾಮಟ್ಟದಲ್ಲಿ ಸಹಾಯವಾಣಿ ಪ್ರಾರಂಭಿಸುವ ಚಿಂತನೆಯಿದೆ. ಸಹಾಯವಾಣಿಯ ಮೂಲಕ ಸಾರ್ವಜನಿಕರು ಮಾಹಿತಿಯನ್ನು ಪಡೆಯಬಹುದು.
-ಡಾ| ರಾಮ ರಾವ್‌, ಪ್ರಭಾರ ಡಿಎಚ್‌ಒ ಉಡುಪಿ ಜಿಲ್ಲೆ.

ಉತ್ತಮ ಸ್ಪಂದನೆ
ಜಿಲ್ಲೆಯಲ್ಲಿ ಆಯುಷ್ಮಾನ್‌ ಭಾರತ್‌- ಆರೋಗ್ಯ ಕರ್ನಾಟಕ ಯೋಜನೆಗೆ ಉತ್ತಮ ಸ್ಪಂದನೆಯಿದೆ. ಜನರಲ್ಲಿ ಮಾಹಿತಿ ಕೊರತೆಯಿದೆ. ಸರಕಾರಿ ಆಸ್ಪತ್ರೆಯಲ್ಲಿ ಇರದ ಚಿಕಿತ್ಸೆಗಳಿಗೆ ಮಾತ್ರ ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಲಾಗುತ್ತದೆ.
ಡಾ| ಸಚ್ಚಿದಾನಂದ, ಜಿಲ್ಲಾ ಸಂಯೋಜಕ, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ

ಆಯುಷ್ಮಾನ್‌ ಭಾರತ್‌- ಆರೋಗ್ಯ ಕರ್ನಾಟಕ ಸಂಯೋಜಿತ್‌ ಯೋಜನೆ ಜಾರಿಗೆ ಬಂದ ಅನಂತರ ಜನರು ಸರಕಾರಿ ಆಸ್ಪತ್ರೆಯತ್ತ ಮುಖ ಮಾಡುತ್ತಿದ್ದಾರೆ. ದ.ಕ. ಜಿಲ್ಲೆಯಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ.
ಜಗನ್ನಾಥ, ಜಿಲ್ಲಾ ಸಂಯೋಜಕ ದ.ಕ. ಜಿಲ್ಲೆ.

ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next