ಬೆಂಗಳೂರು:ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕ ಹಾಗೂ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಎರಡೂ ಯೋಜನೆಗಳು ಒಟ್ಟುಗೂಡಿದ್ದು”ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ’ ರೂಪದಲ್ಲಿ ಜಾರಿಯಾಗುತ್ತಿದೆ.
ಆರೋಗ್ಯ ಕರ್ನಾಟಕ ಯೋಜನೆಯಡಿ ಬಿಪಿಎಲ್ ಕುಟುಂಬಕ್ಕೆ ದೊರೆಯುತ್ತಿದ್ದ 2 ಲಕ್ಷ ರೂ. ನೆರವು ಜತೆಗೆ ಇದೀಗ ಆಯುಷ್ಮಾನ್ ಭಾರತ್ ಯೋಜನೆಯ ನೆರವು ಸೇರಿ ಒಟ್ಟು ಪ್ರತಿ ಕುಟುಂಬಕ್ಕೆ 5 ಲಕ್ಷ ರೂ.ವರೆಗೆ ನೆರವು ಸಿಗಲಿದೆ. ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ 1.50 ಲಕ್ಷ ರೂ.ವರೆಗೆ ನೆರವು ದೊರೆಯಲಿದೆ.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್, ಆರೋಗ್ಯ ಭದ್ರತೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಎರಡೂ ಯೋಜನೆಗಳ ಗುರಿ ಒಂದೇ ಆಗಿರುವುದರಿಂದ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ’ ಹೆಸರಿನಲ್ಲಿ ಜಾರಿಗೊಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.ಈ ಕುರಿತು ಅ.31 ರಂದೇ ಒಪ್ಪಂದ ಮಾಡಿಕೊಂಡರೂ ಚುನಾವಣಾ ನೀತಿ ಸಂಹಿತೆ ಕಾರಣ ಅಧಿಕೃತ ಘೋಷಣೆ ಸಾಧ್ಯವಾಗಲಿಲ್ಲ. ಆದರೂ 2391 ಸದಸ್ಯರು ಯೋಜನೆಯ ನೆರವು ಪಡೆದಿದ್ದಾರೆ ಎಂದರು.
ರಾಜ್ಯದಲ್ಲಿರುವ 4.40 ಕೋಟಿ ಜನ, 1.28 ಕೋಟಿ ಕುಟುಂಬಗಳಿಗೆ ಆರೋಗ್ಯ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಒಟ್ಟಾಗಿ ಜಾರಿಯಾಗುತ್ತಿವೆ. ಇದರಿಂದ ಸಾರ್ವಜನಿಕರಿಗೆ ಹೆಚ್ಚು ಅನುಕೂಲ ಹಾಗೂ ಯೋಜನೆ ವ್ಯಾಪ್ತಿಗೆ ಇನ್ನೂ ಹೆಚ್ಚಿನ ಚಿಕಿತ್ಸೆ ಸೇವೆಗಳು ಬರಲಿವೆ ಎಂದು ತಿಳಿಸಿದರು.
ಆರೋಗ್ಯ ಕರ್ನಾಟಕ ಯೋಜನೆಯು ಜಿಲ್ಲಾ ಹಾಗೂ ತಾಲೂಕು ಹಂತದ ಆಸ್ಪತ್ರೆಗಳಲ್ಲಿ ಈ ಹಿಂದೆಯೇ ಜಾರಿಗೊಳಿಸಲಾಗಿತ್ತು. 481 ದ್ವಿತೀಯ ಹಂತದ ಚಿಕಿತ್ಸೆ, ಕ್ಲಿಷ್ಟಕರ ದ್ವಿತೀಯ ಹಾಗೂ ತೃತೀಯ ಹಂತಗಳಿಗೆ ಸೇರಿದ 881 ಚಿಕಿತ್ಸೆಗಳಿಗೆ ಸರ್ಕಾರಿ ಆರೋಗ್ಯ ಸಂಸ್ಥೆಗಳು ಸಾಮರ್ಥ್ಯ ಹೊಂದಿಲ್ಲದಿದ್ದರೆ ಖಾಸಗಿ ನೋಂದಾಯಿತ ಆಸ್ಪತ್ರೆಗಳಿಗೆ ರೆಫರ್ ಮಾಡಲಾಗುತ್ತಿತ್ತು. ತುರ್ತು ಹಂತದ 154 ಚಿಕಿತ್ಸೆಗಳಿಗೆ ರೆಫರ್ ಇಲ್ಲದೆ ನೇರವಾಗಿ ನೋಂದಾಯಿತ ಖಾಸಗಿ ಆಸ್ಪತ್ರೆ ಅಥವಾ ಸಾರ್ವಜನಿಕ ಆಸ್ಪತ್ರೆಗಳಿಗೆ ರೋಗಿ ನೇರವಾಗಿ ಹೋಗಿ ಚಿಕಿತ್ಸೆ ಪಡೆಯಬಹುದಾಗಿತ್ತು. ಜೂನ್ 2018 ರಿಂದ 51296 ಫಲಾನುಭವಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ ಪೈಕಿ 22004 ಫಲಾನುಭವಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು 29292 ಫಲಾನುಭವಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಇದರಲ್ಲಿ 7585 ತುರ್ತು ಚಿಕಿತ್ಸಾ ವಿಧಾನಗಳೂ ಸೇರಿವೆ ಎಂದು ವಿವರಿಸಿದರು.
ಆರೋಗ್ಯ ಕರ್ನಾಟಕದಡಿ ಈಗಾಗಲೇ ಎಂಟು ಜಿಲ್ಲೆಗಳ 11 ಆಸ್ಪತ್ರೆಗಳಲ್ಲಿ ನೋಂದಣಿ ಮಾಡಲಾಗುತ್ತಿದ್ದು ಇದುವರೆಗೂ 4,52.860 ಆರೋಗ್ಯ ಕಾರ್ಡ್ ವಿತರಿಸಲಾಗಿದೆ. ಒಟ್ಟಿ 14,9,943 ಮಂದಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿಸಿದರು.
ಆಯುಷ್ಮಾನ್ ಯೋಜನೆ ಸಂಯೋಜಿತಗೊಂಡಿರುವುದರಿಂದ ಆರೋಗ್ಯ ಕರ್ನಾಟಕದಡಿ ನೋಂದಣಿಯಾಗಿರುವ ಸದಸ್ಯರಿಗೂ “ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ’ ಯೋಜನೆ ನೆರವು ಸಿಗಲಿದೆ. ಆರೋಗ್ಯ ಕರ್ನಾಟಕ ಯೋಜನೆಯಡಿ 1516 ಪ್ಯಾಕೇಜ್, ಆಯುಷ್ಮಾನ್ ಭಾರತ ಯೋಜನೆಯ 1349 ಪ್ಯಾಕೇಜ್ ಸಂಯೋಜಿಸಿ ಒಗ್ಗೂಡಿತ ಯೋಜನೆಯಲ್ಲಿ 1614 ಪ್ಯಾಕೇಜ್ ಕಾರ್ಯಾಚರಣೆ ಮಾಡಲಾಗುವುದು. ಈ ಪೈಕಿ 291 ಪ್ಯಾಕೇಜ್‌ಗಳನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ಮಿತಿಗೊಳಿಸಲಾಗಿದೆ. 254 ಕ್ಲಿಷ್ಕಕರ ದ್ವೀತಿಯ ಚಿಕಿತ್ಸೆಗಳು, 900 ತೃತೀಯ ಹಂತದ ಚಿಕಿತ್ಸೆ, 169 ತುರ್ತು ಚಿಕಿತ್ಸೆಗಳನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆ ಹಾಗೂ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಒದಗಿಸಲಾಗುವುದು. ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೆ ರೋಗಿಗಳು ನೇರವಾಗಿ ನೋಂದಾಯಿತ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯಬಹುದಾಗಿದೆ.
– ಡಿ.ಕೆ.ಶಿವಕುಮಾರ್