Advertisement

ಆಯುಷ್ಮಾನ್‌ ವಿಸ್ತರಣೆ ; ಎಲ್ಲ ಆರೋಗ್ಯ ವಿಮೆಗಳೂ ಆಯುಷ್ಮಾನ್‌ನಲ್ಲಿ ವಿಲೀನ

02:09 AM Aug 15, 2020 | mahesh |

ಹೊಸದಿಲ್ಲಿ: ಆಯುಷ್ಮಾನ್‌ ಭಾರತ್‌ ಆರೋಗ್ಯ ವಿಮಾ ಯೋಜನೆಯನ್ನು ಎಲ್ಲ ವರ್ಗದವರಿಗೆ ವಿಸ್ತರಿಸಲು ಕೇಂದ್ರ ಸರಕಾರ ಮುಂದಾಗಿದೆ. ದೇಶದ 10 ಕೋಟಿ ಬಡ ಕುಟುಂಬಗಳ 53 ಕೋಟಿ ಮಂದಿಗೆ ಮಾತ್ರ ಈ ವಿಮೆಯ ಸೌಲಭ್ಯ ಸಿಗುತ್ತಿತ್ತು. ಈಗ ಮಧ್ಯಮ ವರ್ಗ ಮತ್ತು ಬಡವರ ಮಧ್ಯೆ ಇರುವ ಹೊಸ ವರ್ಗವೊಂದನ್ನು ಗುರುತಿಸಿ, ಇವರಿಗೂ ವಿಮಾ ಸೌಲಭ್ಯ ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ. ಈ ವರ್ಗವನ್ನು “ದಿ ಮಿಸ್ಸಿಂಗ್‌ ಮಿಡಲ್‌’ ಎಂದು ಕರೆದು ಸೌಕರ್ಯ ನೀಡುವುದು ಕೇಂದ್ರ ಸರಕಾರದ ಉದ್ದೇಶ.

Advertisement

ಇತ್ತೀಚೆಗಷ್ಟೇ ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್‌ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ಎಚ್‌ಎ)ದ ಸಭೆಯಲ್ಲಿ “ವಂಚಿತ ಮಧ್ಯಮ ವರ್ಗ’ಕ್ಕೆ ಯೋಜನೆ ವಿಸ್ತರಿಸುವ ಪ್ರಯೋಗಾತ್ಮಕ ಯೋಜನೆಯನ್ನು ಆರಂಭಿಸಲು ನಿರ್ಧರಿಸಲಾಗಿದೆ.

ಇತರೆಲ್ಲ ಆರೋಗ್ಯ ವಿಮೆ ವಿಲೀನ
ಇದಲ್ಲದೆ ಕೇಂದ್ರ ಸರಕಾರ ಈ ಹಿಂದೆ ಜಾರಿ ಮಾಡಿದ್ದ ಎಲ್ಲ ಆರೋಗ್ಯ ವಿಮೆಗಳನ್ನು “ಆಯುಷ್ಮಾನ್‌ ಭಾರತ್‌- ಪ್ರಧಾನ್‌ ಮಂತ್ರಿ ಜನ್‌ ಆರೋಗ್ಯ ಯೋಜನಾ’ ಅಡಿಯಲ್ಲಿ ವಿಲೀನ ಗೊಳಿಸಲು ನಿರ್ಧರಿಸಲಾಗಿದೆ.

“ಮಿಸ್ಸಿಂಗ್‌ ಮಿಡಲ್‌’ ಯಾರು?
ಎಂಎಸ್‌ಎಂಇ ವಲಯದ ನೌಕರರು, ಅನೌಪಚಾರಿಕ ವಲಯದ ಕಾರ್ಮಿಕರು, ಸ್ವಂತ ಉದ್ಯೋಗಿಗಳು, ವೃತ್ತಿಪರರು, ಕಟ್ಟಡ ನಿರ್ಮಾಣ ಕಾರ್ಮಿಕರು, ರಸ್ತೆ ಅಪಘಾತ ಸಂತ್ರಸ್ತರು, ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ ಸಿಬಂದಿ, ಸರಕಾರಿ ಮತ್ತು ಗುತ್ತಿಗೆ ಸಿಬಂದಿ- ಪ್ರಮುಖವಾಗಿ ಇವರನ್ನು “ಮಿಸ್ಸಿಂಗ್‌ ಮಿಡಲ್‌’ ವ್ಯಾಪ್ತಿಯಲ್ಲಿ ಗುರುತಿಸಲಾಗಿದೆ.

ಪೈಲಟ್‌ ಯೋಜನೆ ಏಕೆ?
ಕೇಂದ್ರ ಸರಕಾರ ಈ “ವಂಚಿತ ಮಧ್ಯಮ ವರ್ಗ’ಕ್ಕೆ ಪೈಲಟ್‌ ಯೋಜನೆ ಮೂಲಕ ಈ ವಿಮಾ ಸೌಲಭ್ಯ ನೀಡುತ್ತಿದೆ. ಮೊದಲಿಗೆ ಇಂಥವರನ್ನು ಗುರುತಿಸಿ ಅವರ ಆರೋಗ್ಯಕ್ಕೆ ಸಂಬಂಧಿಸಿದ ಆದ್ಯತೆಗಳು, ವೆಚ್ಚ ಭರಿಸುವ ಸಾಮರ್ಥ್ಯ, ಇವರನ್ನು ತಲುಪುವ ಬಗೆ ಮತ್ತು ವಿತರಣೆ, ಆರೋಗ್ಯ ಸೇವೆಯ ಭಾಗಿತ್ವ, ಆರ್ಥಿಕತೆ, ಗ್ರಾಹಕರ ಪ್ರತಿಕ್ರಿಯೆಗಳನ್ನು ಆಧರಿಸಿ ಮುಂದೆ ಯೋಜನೆಯನ್ನು ವಿಸ್ತರಿಸುವ ಬಗೆಯನ್ನು ತಿಳಿದುಕೊಳ್ಳಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next