ಕಾರ್ಕಳ: ಆರೋಗ್ಯ ಹದಗೆಟ್ಟಾಗ ಸರಕಾರಿ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಪಡಬೇಕು. ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗುವಂತಹ ಸಂದರ್ಭ ಸರಕಾರಿ ವೈದ್ಯರು ಸೂಚಿಸಿದ ಆಸ್ಪತ್ರೆಗೆ ಹೋದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಪಡೆಯಬಹುದು. ಈ ಅತ್ಯುತ್ತಮ ಯೋಜನೆಯ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ತಾ.ಪಂ. ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ ಹೇಳಿದರು.
ಸೆ. 24ರಂದು ಕಾರ್ಕಳ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜಿ.ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾ| ಆರೋಗ್ಯಾಧಿಕಾರಿಗಳ ಕಚೇರಿ, ಸರಕಾರಿ ಪದವಿಪೂರ್ವ ಕಾಲೇಜು ಕಾರ್ಕಳ ಸಂಯುಕ್ತ ಆಶ್ರಯದಲ್ಲಿ ನಡೆದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಪಾಕ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿ.ಪಂ. ಸದಸ್ಯ ಉದಯ ಎಸ್. ಕೋಟ್ಯಾನ್, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯು ಬಡವರಿಗೆ, ಮಧ್ಯಮ ವರ್ಗದವರಿಗೆ ಉಪಯುಕ್ತ ಯೋಜನೆ ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ| ಕೃಷ್ಣಾನಂದ ಶೆಟ್ಟಿ, ಜಿ.ಪಂ. ಸದಸ್ಯೆ ರೇಷ್ಮಾ ಉದಯ ಶೆಟ್ಟಿ, ಜ್ಯೋತಿ ಹರೀಶ್ ಮಾತನಾಡಿದರು. ಕಾರ್ಕಳ ಪುರಸಭೆಯ ಮುಖ್ಯಾಧಿಕಾರಿ ಮೇಬಲ್ ಡಿ’ಸೋಜಾ ಅಧ್ಯಕ್ಷತೆ ವಹಿಸಿದ್ದರು.
ಜಿ.ಪಂ. ಸದಸ್ಯೆ ದಿವ್ಯಾಶ್ರೀ ಅಮೀನ್, ಪುರಸಭಾ ಸದಸ್ಯೆ ಸುಮಾ ಕೇಶವ್, ಕಾಲೇಜಿನ ಪ್ರಾಂಶುಪಾಲ ಪ್ರೊ| ಮಾಧವ ಭಟ್, ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಪಿ.ಕೆ. ಮಲ್ಯ, ಕಿರಿಯ ಆರೋಗ್ಯ ಸಹಾಯಕ-ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಿರಿಯ ಆರೋಗ್ಯ ಸಹಾಯಕ ಬಿ.ವಿ. ಶಿವರಾಮ ಸ್ವಾಗತಿಸಿ, ಐಸಿಟಿಸಿ ವಿಭಾಗದ ಕಿರಣ್ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ವಿ.ಜೆ. ಅನ್ನಕುಟ್ಟಿ ವಂದಿಸಿದರು.
5 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆ
ಸುವರ್ಣ ಆರೋಗ್ಯ ಟ್ರಸ್ಟ್‌ನ ಜಿಲ್ಲಾ ಸಂಯೋಜಕ ಜಗನ್ನಾಥ ಮಾಹಿತಿ ನೀಡಿ, ಬಿಪಿಎಲ್ ಪಡಿತರ ಕಾರ್ಡ್ ಹೊಂದಿರುವ ಹಾಗೂ ರಾಷ್ಟ್ರೀಯ ಸ್ವಾಸ್ಥ é ವಿಮಾ ಯೋಜನೆಯಲ್ಲಿ ನೋಂದಾಯಿತರಾಗಿರುವ ಫಲಾನುಭವಿಗಳಿಗೆ ವರ್ಷಕ್ಕೆ 5 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆ ಸೌಲಭ್ಯವಿದೆ. ಎಪಿಎಲ್ ಕಾರ್ಡುದಾರರಿಗೆ ಸಹ ಪಾವತಿ ಆಧಾರದ ಮೇಲೆ ಸರಕಾರಿ ಪ್ಯಾಕೇಜ್ ದರದ ಶೇ. 30ರಷ್ಟು ಚಿಕಿತ್ಸಾ ವೆಚ್ಚ ಭರಿಸಲಾಗುತ್ತಿದೆ. ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ ಒಂದೂವರೆ ಲಕ್ಷ ರೂ. ಆಗಿದ್ದು, ಪಡಿತರ ಚೀಟಿ, ಆಧಾರ್ ಕಾರ್ಡ್ ಹಾಜರು ಪಡಿಸಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದರು.