Advertisement

ಆಯುಷ್ಮಾನ್‌ ಭಾರತ್‌ ನಡಿ ವಿರಳ ಕಾಯಿಲೆಗಳಿಗೂ ಚಿಕಿತ್ಸಾ ವೆಚ್ಚ ಭರಿಸಲು ಕ್ರಮ: ಸುಧಾಕರ್

02:24 PM Sep 08, 2022 | Team Udayavani |

ಬೆಂಗಳೂರು: ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ವಿರಳ ಕಾಯಿಲೆಗಳಿಗೂ ಚಿಕಿತ್ಸಾ ವೆಚ್ಚ ಭರಿಸಲು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕ್ರಮ ವಹಿಸಿದ್ದಾರೆ. ಹಾಗೆಯೇ, ಹೆಚ್ಚು ಚಿಕಿತ್ಸಾ ವೆಚ್ಚ ತಗುಲುವ ಕಾಯಿಲೆಗಳಿಗೂ ಉಚಿತ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗಿದೆ. ಈ ಮೂಲಕ ಬಡ ಜನರ ಆರೋಗ್ಯ ರಕ್ಷಣೆಗೆ ಹೊಸ ಕೊಡುಗೆಯನ್ನು ರಾಜ್ಯ ಸರ್ಕಾರ ನೀಡಿದೆ.

Advertisement

ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಯೋಜನೆಯಡಿ, ವಿವಿಧ ಕಾಯಿಲೆಗಳಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಿಂದ ಚಿಕಿತ್ಸಾ ವೆಚ್ಚ ಭರಿಸಲಾಗುತ್ತಿದೆ. ಆದರೆ ಕೆಲ ವಿರಳ ಕಾಯಿಲೆಗಳನ್ನು ಈ ಯೋಜನೆಯಡಿ ಸೇರಿಸಲಾಗಿಲ್ಲ. ಅಲ್ಲದೆ ಇಂತಹ ರೋಗಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿ ಆ ವೆಚ್ಚವನ್ನು ಭರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ, ಚಿಕಿತ್ಸೆಗಳು ಹಾಗೂ ವೆಚ್ಚದ ಪಟ್ಟಿಯನ್ನು ಸಿದ್ಧಪಡಿಸಿದ್ದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌, ಈ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿ ಆದೇಶ ಹೊರಡಿಸಿದೆ. ಇದರ ಜೊತೆಗೆ, ಹೆಚ್ಚು ವೆಚ್ಚ ತಗುಲುವ ಕಾಯಿಲೆಗಳ ಚಿಕಿತ್ಸಾ ವಿಧಾನ ಗುರುತಿಸಿ, ಅವುಗಳಿಗೂ ವೆಚ್ಚ ನಿಗದಿ ಮಾಡಲು ಕ್ರಮ ವಹಿಸಲಾಗಿದೆ.

ಇದಕ್ಕಾಗಿ ಗಿರಿಜನ ಉಪಯೋಜನೆಯಡಿ 7.39 ಕೋಟಿ ರೂ., ಪರಿಶಿಷ್ಟ ಜಾತಿ ಉಪಯೋಜನೆಯಡಿ 15.79 ಕೋಟಿ ಸೇರಿ, ಒಟ್ಟು 23.18 ಕೋಟಿ ರೂ. ಮೊತ್ತವನ್ನು ಪುನರ್‌ ವಿನಿಯೋಗದ ಮೂಲಕ ಬಿಡುಗಡೆ ಮಾಡಿ ಆದೇಶಿಸಲಾಗಿದೆ. ಪಿಇಟಿ ಸ್ಕ್ಯಾನ್‌ಗೆ 10,000 ರೂ., ಅಸ್ತಿ ಮಜ್ಜೆ ಕಸಿಗೆ ಎರಡು ವಿಧಾನಗಳಲ್ಲಿ 7 ಲಕ್ಷ ರೂ. ಹಾಗೂ 21 ಲಕ್ಷ ರೂ., ರೋಬೋಟಿಕ್‌ ಸರ್ಜರಿಗೆ 1.50 ಲಕ್ಷ ರೂ. ಸೇರಿದಂತೆ ವಿವಿಧ ಚಿಕಿತ್ಸೆಗಳಿಗೆ ವೆಚ್ಚ ನಿಗದಿ ಮಾಡಲಾಗಿದೆ.

ಈ ಕುರಿತು ಮಾತನಾಡಿದ ಸಚಿವ ಡಾ.ಕೆ.ಸುಧಾಕರ್‌, “ಪ್ರಧಾನಿ ನರೇಂದ್ರ ಮೋದಿಯವರು ಜನರ ಬಡ ಜನರ ಆರೋಗ್ಯ ರಕ್ಷಣೆಗಾಗಿ ಜಾರಿ ಮಾಡಿದ ಆಯುಷ್ಮಾನ್‌ ಯೋಜನೆಯನ್ನು ವಿಸ್ತರಿಸುವ ಕೆಲಸವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದ ರಾಜ್ಯ ಸರ್ಕಾರ ಮಾಡುತ್ತಿದೆ. ವಿರಳ ಕಾಯಿಲೆಗಳಿಗೂ ಚಿಕಿತ್ಸಾ ವೆಚ್ಚವನ್ನು ಭರಿಸುವ ಮಹತ್ವದ ಕ್ರಮವನ್ನು ಸರ್ಕಾರ ಕೈಗೊಂಡಿದೆ. ಜೊತೆಗೆ, ಹೆಚ್ಚು ವೆಚ್ಚ ತಗುಲುವ ಚಿಕಿತ್ಸೆಗಳಿಗೂ ದರ ನಿಗದಿ ಮಾಡಿ, ಆ ವೆಚ್ಚ ಭರಿಸುವ ಕ್ರಮ ವಹಿಸಲಾಗುತ್ತಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಇದರಿಂದ ಬಹಳಷ್ಟು ಪ್ರಯೋಜನವಾಗಲಿದೆʼʼ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next