Advertisement
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಂತೆ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯನಿಗೆ ವಾರ್ಷಿಕ 5 ಲಕ್ಷ ರೂ. ಮತ್ತು ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯನಿಗೆ ವಾರ್ಷಿಕ ಶೇ.30ರಷ್ಟು ಉಚಿತ ಆರೋಗ್ಯ ಸೇವೆ ಪಡೆಯಲು ಅವಕಾಶವಿದೆ. ನಿಯಮಾನುಸಾರ ಈ ಕಾರ್ಡ್ ಮಾಡಿಸಲು ಸರಕಾರಿ ಆಸ್ಪತ್ರೆಗಳಲ್ಲಿ 10 ರೂ., ಖಾಸಗಿ ಸಂಸ್ಥೆಗಳಲ್ಲಿ 35 ರೂ. ನೀಡಬೇಕು. ಆದರೆ ಖಾಸಗಿ ಸಂಸ್ಥೆಗಳು ಜನರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವುದು ಗಂಭೀರ ವಿಚಾರ.
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಡ್ ಮನೆಗೆ ಒಂದರಂತೆ ಅಲ್ಲ; ವ್ಯಕ್ತಿಗೊಂದು. ಜೆರಾಕ್ಸ್ ಸೆಂಟರ್ ಸೇರಿದಂತೆ ಕೆಲವು ಖಾಸಗಿಯವರು ಒಂದು ಕಾರ್ಡ್‌ಗೆ 200 ರೂ. ವಸೂಲು ಮಾಡುತ್ತಿದ್ದಾರೆ. ಆರೋಗ್ಯ ಇಲಾಖೆ ನಿಗದಿಪಡಿಸಿರುವ 35 ರೂ. ಸ್ವೀಕರಿಸುವಾಗ ಸಂಸ್ಥೆಯವರು ಸ್ವೀಕೃತಿ ಪತ್ರ ನೀಡಬೇಕು. ಇಲ್ಲಿ ಹೆಚ್ಚುವರಿ ಹಣ ಪಡೆದುಕೊಂಡದ್ದಕ್ಕೆ ಸ್ವೀಕೃತಿಯನ್ನೂ ನೀಡುತ್ತಿಲ್ಲ ಎಂದು ಕಾರ್ಡ್ ಮಾಡಿಸಿಕೊಂಡವರು ಹೇಳುತ್ತಾರೆ. ಜಿಲ್ಲೆಯಲ್ಲಿ ಈವರೆಗೆ 33,349 ಮಂದಿ ಕಾರ್ಡ್ ಮಾಡಿಸಿಕೊಂಡಿದ್ದು, ಇದರಲ್ಲಿ ಬಿಪಿಎಲ್ ಕಾರ್ಡ್‌ದಾರರ ಸಂಖ್ಯೆಯೇ ಅಧಿಕ.
Related Articles
ದೂರು ಆಧರಿಸಿ ಒಂದೆರಡು ಸಂಸ್ಥೆಗಳಲ್ಲಿ ವಿಚಾರಿಸಿದಾಗ ಇತರ ಕಾರ್ಡ್ ಮತ್ತು ಆಯುಷ್ಮಾನ್-ಆರೋಗ್ಯ ಕರ್ನಾಟಕ ಕಾರ್ಡ್ ಸೇರಿ ಹೆಚ್ಚುವರಿ ಹಣ ಪಡೆಯಲಾಗಿದೆ ಎಂದಿದ್ದಾರೆ. ಆದರೆ ಕಾರ್ಡ್ ಮಾಡಿಸಿಕೊಂಡ ಜನರು ಹೇಳುವ ಪ್ರಕಾರ, ಒಂದೇ ಕಾರ್ಡ್‌ಗೆ 100, 200 ರೂ. ಪಡೆಯಲಾಗುತ್ತಿದೆ.
Advertisement
ಲಿಖೀತ ದೂರು ನೀಡಿ ಹೆಚ್ಚುವರಿ ಹಣ ಪಡೆಯುತ್ತಿರುವ ಬಗ್ಗೆ ಕೆಲವರು ಫೋನ್ ದೂರು ನೀಡಿದ್ದಾರೆ. 35 ರೂ.ಗಳಿಗಿಂತ ಹೆಚ್ಚು ಹಣ ಪಡೆದುಕೊಂಡಲ್ಲಿ ಲಿಖೀತ ದೂರು ನೀಡಿದರೆ ಕ್ರಮ ಜರುಗಿಸಲಾಗುವುದು. ಅಲ್ಲದೆ ಅವರಿಗೆ ನೀಡಲಾಗಿರುವ ಪಾಸ್‌ವರ್ಡ್ ಬ್ಲಾಕ್ ಮಾಡಲು ಬೆಂಗಳೂರಿಗೆ ಬರೆಯಲಾಗುವುದು. ಜನ ದೂರು ನೀಡಲು ಮುಂದಾಗಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಯೋರ್ವರು “ಉದಯವಾಣಿಗೆ ತಿಳಿಸಿದ್ದಾರೆ. ಸಿಎಸ್‌ಸಿ ಸೂಚನೆ: ಏಜೆನ್ಸಿಗಳ ಸಮರ್ಥನೆ
ಸುಳ್ಯದ ಜೆರಾಕ್ಸ್ ಕೇಂದ್ರವೊಂದರ ಮಾಲಕರನ್ನು ಸಂಪರ್ಕಿಸಿದಾಗ, ವೈಯಕ್ತಿಕ ಸ್ಮಾರ್ಟ್ ಕಾರ್ಡ್‌ಗೆ 200 ರೂ. ಪಡೆಯಬೇಕೆಂಬುದು ಸಿಎಸ್‌ಸಿಯಿಂದ ನಮಗೆ ಬಂದ ಸೂಚನೆ ಎಂದು ಸಮರ್ಥನೆ ನೀಡಿದ್ದಾರೆ. ಸಿಎಸ್‌ಸಿ-ಇ ಗವರ್ನೆನ್ಸ್ ಸರ್ವೀಸ್‌ನ ಜಿಲ್ಲಾ ಪ್ರಾಜೆಕ್ಟ್ ಮ್ಯಾನೇಜರ್ ಅವರನ್ನು ಸಂಪರ್ಕಿಸಿದಾಗ, ಆಯುಷ್ಮಾನ್ ಕಾರ್ಡ್ ಮಾಡಿಸಲು ಬರುವ ಜನರಿಂದ ಎ4 ಶೀಟ್‌ಗೆ 10 ರೂ. ಅಥವಾ ಇತರ ಶೀಟ್‌ಗೆ 35 ರೂ. ಶುಲ್ಕ ಪಡೆಯಲು ಸೂಚಿಸಲಾಗಿದೆ. 200 ರೂ. ಪಡೆಯಲು ಯಾವುದೇ ಏಜೆನ್ಸಿಗಳಿಗೆ ಸೂಚನೆ ನೀಡಿಲ್ಲ. ಒಂದುವೇಳೆ ಯಾರಾದರೂ 200 ರೂ. ಸಂಗ್ರಹಿಸುತ್ತಿರುವುದರ ಬಗ್ಗೆ ದೂರು ನೀಡಿದರೆ ಅಂಥ ಏಜೆನ್ಸಿಗಳಿಗೆ ನೀಡಲಾಗಿರುವ ಸಿಎಸ್‌ಸಿ ಐಡಿಯನ್ನು ರದ್ದುಪಡಿಸಲಾಗುವುದು ಎಂದು “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ. ದೂರು ನೀಡಿ
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಡ್ ಮಾಡಿಸುವಾಗ ಹೆಚ್ಚುವರಿ ಹಣ ವಸೂಲು ಮಾಡಿದ್ದಲ್ಲಿ ದೂರು ನೀಡಬಹುದು. ದೂರು ಬಂದಲ್ಲಿ ಮಾರ್ಗಸೂಚಿ ನೋಡಿಕೊಂಡು ವಿಚಾರಿಸಲಾಗುವುದು. ನಿಜವಾಗಿದ್ದಲ್ಲಿ ಮೇಲಧಿಕಾರಿಗಳಿಗೆ ಬರೆಯಲಾಗುವುದು.
-ಡಾ| ರಾಮಕೃಷ್ಣ ರಾವ್,ದ.ಕ.ಜಿಲ್ಲಾ ಆರೋಗ್ಯಾಧಿಕಾರಿ – ಧನ್ಯಾ ಬಾಳೆಕಜೆ