Advertisement
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಎರಡು ವರ್ಷಗಳಲ್ಲಿ ಉಡುಪಿಯ 54 ಸಾವಿರ ಹಾಗೂ ದಕ್ಷಿಣ ಕನ್ನಡದ 87 ಸಾವಿರ ರೋಗಿಗಳ ಸಹಿತ ರಾಜ್ಯದಲ್ಲಿ ಒಟ್ಟು 34.89 ಲಕ್ಷ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ.
ರಾಜ್ಯದಲ್ಲಿ 2021-22ರಲ್ಲಿ 13,01,232 ಮತ್ತು 2022-23ರಲ್ಲಿ 21,97,665 ರೋಗಿಗಳು ಈ ಯೋಜನೆಯಡಿ ಚಿಕಿತ್ಸೆ ಪಡೆದಿದ್ದಾರೆ.ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ, ಜಿಲ್ಲಾ ಸರ್ಜನ್ ಶಿಫಾರಸಿನಂತೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದರೆ ಯೋಜನೆಯಡಿ ಸುಲಭವಾಗಿ ಚಿಕಿತ್ಸೆ ದೊರೆಯುತ್ತದೆ. ಬಿಪಿಎಲ್ ಕಾರ್ಡ್‌ದಾರರಿಗೆ 5 ಲಕ್ಷ ರೂ.ವರೆಗೆ ಹಾಗೂ ಎಪಿಎಲ್ ಕಾರ್ಡ್ ದಾರರಿಗೆ ಚಿಕಿತ್ಸೆ ವೆಚ್ಚದ ಶೇ. 30ರಷ್ಟು ಈ ಯೋಜನೆಯಡಿ ಸೌಲಭ್ಯ ದೊರೆಯಲಿದೆ. ಸರಕಾರಿ ವೈದ್ಯರ ಶಿಫಾರಸಿನ ಬಳಿಕ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದರೂ ಬೇರೆ ಆರೋಗ್ಯ ವಿಮಾ ಸೌಲಭ್ಯ ಪಡೆದರೆ ಆಯುಷ್ಮಾನ್ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ. ಉಡುಪಿ ಜಿಲ್ಲೆಯಲ್ಲಿ ಕ್ರಮವಾಗಿ 16,999 ಮತ್ತು 37,293 ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. ದ.ಕ. ಜಿಲ್ಲೆಯಲ್ಲಿ ಈ ಸಂಖ್ಯೆ ಕ್ರಮವಾಗಿ 33,049 ಹಾಗೂ 53,953. ಮಂಡ್ಯದಲ್ಲಿ 2.55 ಲಕ್ಷ, ಹಾಸನದಲ್ಲಿ 22.27 ಲಕ್ಷ, ಬಳ್ಳಾರಿ, ಬೆಂಗಳೂರು ನಗರ, ಬೆಳಗಾವಿ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಕಲಬುರಗಿ, ಮೈಸೂರು, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ತಲಾ 1 ಲಕ್ಷಕ್ಕೂ ಅಧಿಕ ರೋಗಿಗಳು ಈ ಯೋಜನೆಯ ಫಲ ಪಡೆದಿದ್ದಾರೆ.
Related Articles
ಎರಡು ವರ್ಷಗಳಲ್ಲಿ ಉಡುಪಿಯಲ್ಲಿ 54,292, ಕೊಡಗಿನಲ್ಲಿ 45,633, ದ.ಕ.ದಲ್ಲಿ 87,002 ರೋಗಿಗಳು ಚಿಕಿತ್ಸೆ ಪಡೆದಿದ್ದು, ಇದು ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಅತೀ ಕಡಿಮೆ. ಇದಕ್ಕೆ ಹಲವು ಕಾರಣಗಳಿವೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಪೂರ್ಣ ಸುರಕ್ಷೆ ಸಹಿತ ವಿವಿಧ ಖಾಸಗಿ ಆರೋಗ್ಯ ವಿಮಾ ಸೌಲಭ್ಯ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಿದೆ. ಅಲ್ಲದೆ ಬಹುತೇಕರು ಖಾಸಗಿ ಆಸ್ಪತ್ರೆಗೆ ದಾಖಲಾದ ಬಳಿಕ ಆಯುಷ್ಮಾನ್ ಯೋಜನೆಯಡಿ ಸೌಲಭ್ಯ ಪಡೆಯುವ ಯೋಚನೆ ಮಾಡುತ್ತಾರೆ ಅಥವಾ ತಮ್ಮ ಖಾಸಗಿ ಆರೋಗ್ಯ ವಿಮೆ ಅಡಿಯಲ್ಲೇ ಚಿಕಿತ್ಸೆ ಪಡೆಯುತ್ತಾರೆ. ಮೊದಲು ಸರಕಾರಿ ಆಸ್ಪತ್ರೆಗೆ ದಾಖಲಾಗುವುದಿಲ್ಲ. ಎಪಿಎಲ್ ಕಾರ್ಡ್‌ದಾರರು ಈ ಯೋಜನೆಯ ಫಲ ಪಡೆಯಲು ಮುಂದೆ ಬರುವುದಿಲ್ಲ ಎಂದು ಮೂಲಗಳು ತಿಳಿಸಿವೆ.
Advertisement
ಯೋಜನೆಯ ಲಾಭ ಪಡೆಯುವುದು ಹೇಗೆ?ಗಂಭೀರ ಆರೋಗ್ಯ ಸಮಸ್ಯೆ ಎದುರಾದ ಸಂದರ್ಭದಲ್ಲಿ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಅಲ್ಲಿಂದ ಶಿಫಾರಸು ಪತ್ರದೊಂದಿಗೆ ಖಾಸಗಿ ಆಸ್ಪತ್ರೆಗೆ ಹೋದಾಗ ಯೋಜನೆಯಡಿ ಯಾವುದೇ ಸಮಸ್ಯೆ ಇಲ್ಲದೆ ಚಿಕಿತ್ಸೆ ಸಿಗುತ್ತದೆ. ಬಿಪಿಎಲ್ ಕಾರ್ಡ್‌ದಾರರು ಆಧಾರ್ ಕಾರ್ಡ್ ಹೊಂದಿದ್ದಲ್ಲಿ 5 ಲಕ್ಷ ರೂ. ವರೆಗೆ ಚಿಕಿತ್ಸೆಯ ವೆಚ್ಚವನ್ನು ಸರಕಾರವೇ ಭರಿಸುತ್ತದೆ. ಎಪಿಎಲ್ ಕಾರ್ಡ್‌ದಾರರಿಗೆ ಚಿಕಿತ್ಸೆ ವೆಚ್ಚದ ಶೇ. 30ರಷ್ಟು ಸರಕಾರ ಭರಿಸುತ್ತದೆ. ಸರಕಾರಿ ಆಸ್ಪತ್ರೆಯ ವೈದ್ಯರ ಶಿಫಾರಸು ಪತ್ರ ಇಲ್ಲದೆ ಈ ಯೋಜನೆಯಡಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ. ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಯೋಜನೆಯಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸರಕಾರಿ ಆಸ್ಪತ್ರೆಯಲ್ಲಿ ಮೊದಲು ದಾಖಲಾಗಿ ಶಿಫಾರಸಿನ ಮೇಲೆ ಖಾಸಗಿ ಆಸ್ಪತ್ರೆಗೆ ಹೋಗಬೇಕಾಗುತ್ತದೆ. ಯೋಜನೆಯಡಿ ಫಲಾನುಭವಿಗಳಿಗೆ ಚಿಕಿತ್ಸೆ ನೀಡಲು ತಾಂತ್ರಿಕ ಸಮಸ್ಯೆಯಿಲ್ಲ. ಬೇರೆ ಆರೋಗ್ಯ ವಿಮಾ ಸೌಲಭ್ಯ ಬಳಸಿದ ಸಂದರ್ಭದಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಸೌಲಭ್ಯ ಪಡೆಯಲು ಅವಕಾಶ ಇಲ್ಲ.
– ಡಾ| ಎಚ್. ನಾಗಭೂಷಣ ಉಡುಪ, ಡಿಎಚ್‌ಒ, ಉಡುಪಿ