ಮಂಗಳೂರು: ಕೇಂದ್ರ ಸರಕಾರದ ಆಯುಷ್ ಇಲಾಖೆಯಿಂದ ಪ್ರಮಾಣೀಕೃತ ಕೋವಿಡ್ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧ ಆಯುಷ್ “ಕ್ವಾಥ್’ ಅನ್ನು ಶನಿವಾರ ಮಂಗಳೂರಿನಲ್ಲಿ ಬಿಡುಗಡೆ ಗೊಳಿಸಲಾಗಿದೆ.
ಕೊಡಿಯಾಲ್‌ಬೈಲ್ ಸಮೀಪದ ಅಟಲ್ ಸೇವಾ ಕೇಂದ್ರದಲ್ಲಿ ಆಯುಷ್ ಕ್ವಾಥ್ ಬಿಡುಗಡೆಗೊಳಿಸಿ ಮಾತನಾಡಿದ ನಳಿನ್ ಅವರು, ಆಯುಷ್ ಕ್ವಾಥ್ ಜನರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೋವಿಡ್ 19 ವಿರುದ್ಧ ದೇಹವನ್ನು ಅಣಿಗೊಳಿಸುತ್ತದೆ.
ಭಾರತ ಮಾತ್ರವಲ್ಲ ಜಗತ್ತಿನ ವಿವಿಧ ರಾಷ್ಟ್ರಗಳು ಆಯುರ್ವೇದ ಔಷಧಗಳ ಮಹತ್ವವನ್ನು ಅರಿತಿವೆ. ಎಸ್‌ಡಿಪಿ ಮತ್ತು ಆಯುರ್ ವಿವೇಕ್ ಸಂಸ್ಥೆ ಹೊರ ತಂದಿರುವ ಈ ಔಷಧದ ಬಳಕೆಯಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಕೋವಿಡ್ ನಿಂದ ದೂರ ಇರುವಂತಾಗಲಿ ಎಂದು ಹಾರೈಸಿದರು.
ಔಷಧ ತಯಾರಿಸಿದ ಎಸ್‌ಡಿಪಿ ರೆಮೆಡಿಸ್ ಮತ್ತು ರಿಸರ್ಚ್ ಸೆಂಟರ್‌ನ ಪ್ರವರ್ತಕ ಡಾ| ಹರಿಕೃಷ್ಣ ಪಾಣಾಜೆ ಮಾತನಾಡಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ತುಳಸಿ, ಶುಂಠಿ, ದಾಲ್ಚಿನಿ, ಕರಿಮೆಣಸು ಮಿಶ್ರಿತ ಆಯುಷ್ ಕ್ವಾಥ್ ಕಷಾಯದ ಸೇವನೆ ಪರಿಣಾಮಕಾರಿಯಾಗಿದೆ ಎಂದರು.
ಕ್ವಾರಂಟೈನ್‌ಗೊಂಡಿದ್ದ ಸುಮಾರು 6,000 ಮಂದಿಗೆ ಈ ಕಷಾಯವನ್ನು ಸೇವಿಸಲು ನೀಡಲಾಗಿದೆ. ಅದರಲ್ಲಿ ಅನೇಕ ಮಂದಿಗೆ ಕೋವಿಡ್ 19 ವೈರಾಣು ಇರುವುದು ಪ್ರಾರಂಭಿಕ ಹಂತದಲ್ಲಿ ಪತ್ತೆಯಾಗಿತ್ತು. ಆದರೆ ಈ ಕಷಾಯದ ನಿರ್ದಿಷ್ಟ ಸೇವನೆಯಿಂದ ಹಲವಾರು ರೋಗಿಗಳು ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.
ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ಎಸ್‌ಡಿಪಿ ಮತ್ತು ಆಯುರ್ ವಿವೇಕ್ ಈ ಔಷಧವನ್ನು ರಾಜ್ಯ, ಹೊರ ರಾಜ್ಯಗಳಿಗೂ ಪೂರೈಸುವ ಮೂಲಕ ಕೋವಿಡ್ 19 ಮಹಾಮಾರಿಯನ್ನು ಹೊಡೆದೋಡಿಸಲು ಈ ಕಷಾಯ ಪೂರಕವಾಗಿ ಕೆಲಸ ಮಾಡಲಿ ಎಂದು ಹಾರೈಸಿದರು.
ವಿವೇಕ್ ಟ್ರೇಡರ್ ಮಾಲಕ ಮಂಗಲ್ಪಾಡಿ ನರೇಶ್ ಶೆಣೈ ಉಪಸ್ಥಿತರಿದ್ದರು. ಆರ್. ಕಿರಣ್ ಶೆಣೈ ನಿರೂಪಿಸಿದರು.