Advertisement

ಮಂಗಳೂರಿನಲ್ಲಿ ಆಯುಷ್‌ ಆಸ್ಪತ್ರೆ: ಒಂದೇ ಕಡೆ ಐದು ಚಿಕಿತ್ಸಾ ವಿಭಾಗ

09:56 AM Nov 26, 2018 | |

ಮಂಗಳೂರು: ನ್ಯಾಚುರೋಪತಿ, ಹೋಮಿಯೋಪತಿ, ಆಯುರ್ವೇದ, ಯುನಾನಿ ಹಾಗೂ ಯೋಗ ವಿಭಾಗಗಳನ್ನು ಒಂದೇ ಸೂರಿನಡಿ ಹೊಂದಿರುವ ಸರಕಾರಿ ಆಯುಷ್‌ ಆಸ್ಪತ್ರೆ  ನಗರದ ಸರಕಾರಿ ವೆನ್ಲ್ಯಾಕ್  ಜಿಲ್ಲಾಸ್ಪತ್ರೆಯ ಆವರಣದಲ್ಲಿ ನಿರ್ಮಾಣವಾಗುತ್ತಿದೆ. ಇದು ಎರಡು ತಿಂಗಳೊಳಗೆ ರೋಗಿಗಳ ಸೇವೆಗೆ ತೆರೆದುಕೊಳ್ಳುವ ನಿರೀಕ್ಷೆ ಇದೆ.
ಯು.ಟಿ. ಖಾದರ್‌ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದಾಗ ಈ ಆಯುಷ್‌ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ್ದರು. 2018ರ ಮಾರ್ಚ್‌ನಲ್ಲಿ ಕಾಮಗಾರಿ ಆರಂಭಗೊಂಡಿತ್ತು. ವಿಶೇಷವೆಂದರೆ ಕೇವಲ ಎಂಟು ತಿಂಗಳಿನಲ್ಲಿ ಈ ಆಸ್ಪತ್ರೆ ಕಟ್ಟಡ ನಿರ್ಮಾಣ ಶೇ.70ರಷ್ಟು ಪೂರ್ಣಗೊಂಡಿದೆ.

Advertisement

ಆಸ್ಪತ್ರೆಯು ನಾಲ್ಕು ಮಹಡಿಗಳನ್ನು ಹೊಂದಿದೆ. ತಳಮಹಡಿಯಲ್ಲಿ ಹೊರ ರೋಗಿ, ನ್ಯಾಚುರೋಪತಿ, ಆಯುರ್ವೇದ, ಯುನಾನಿ ವಿಭಾಗಗಳಿರುತ್ತವೆ. ಮೊದಲ ಮಹಡಿಯಲ್ಲಿ ಆಡಳಿತ ಬ್ಲಾಕ್‌, ದ್ವಿತೀಯ ಮಹಡಿಯಲ್ಲಿ ಮಹಿಳಾ ವಾರ್ಡ್‌ ಮತ್ತು ಮಹಿಳಾ ವಿಶೇಷ ಕೊಠಡಿ, ಮೂರನೇ ಮಹಡಿಯಲ್ಲಿ ಪುರುಷರ ವಾರ್ಡ್‌ ಮತ್ತು ಪುರುಷರ ವಿಶೇಷ ಕೊಠಡಿ, ಡಯಟ್‌ ಕಿಚನ್‌ ಇರುತ್ತದೆ. ನಾಲ್ಕನೇ ಮಹಡಿಯಲ್ಲಿ ಕೆಲವು ಥೆರಪಿ, ಚಿಕಿತ್ಸೆಗಳು ಲಭ್ಯವಿರುತ್ತವೆ.
ಆಸ್ಪತ್ರೆಯ ಒಟ್ಟು ನಿರ್ಮಾಣ ವೆಚ್ಚ 9 ಕೋಟಿ ರೂ.ಗಳಾಗಿದ್ದು, ಈಗಾಗಲೇ 7.5 ಕೋಟಿ ರೂ.ಗಳ ಕಾಮಗಾರಿ ಪೂರ್ಣಗೊಂಡಿದೆ. ಒಟ್ಟು 50 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದೆ. ದೇಶದ ಇತರ ಸರಕಾರಿ ಆಸ್ಪತ್ರೆಗಳಲ್ಲಿ ಆಯುಷ್‌ ಆಸ್ಪತ್ರೆ ಇದ್ದರೂ ನ್ಯಾಚುರೋಪತಿ, ಹೋಮಿಯೋಪತಿ, ಆಯುರ್ವೇದ, ಯುನಾನಿ ಹಾಗೂ ಯೋಗ – ಈ ಐದೂ ವಿಭಾಗಗಳ ಸೇವೆಯನ್ನು ಒಂದೇ ಸೂರಿನಡಿ ಒದಗಿಸುವ ದೇಶದ ಮೊದಲ ಸರಕಾರಿ ಆಸ್ಪತ್ರೆ ಇದಾಗಲಿದೆ ಎಂದು ಜಿಲ್ಲಾ ಆಯುಷ್‌ ಅಧಿಕಾರಿ ಇಕ್ಬಾಲ್‌ ತಿಳಿಸಿದ್ದಾರೆ.

ನ್ಯಾಚುರೋಪತಿ, ಆಯುರ್ವೇದ, ಯುನಾನಿಯ ಎಲ್ಲ ಥೆರಪಿಗಳು ಇಲ್ಲಿ ಲಭ್ಯವಾಗಲಿವೆ. ಪಂಚಕರ್ಮ ಚಿಕಿತ್ಸೆ, ಡಯಟ್‌ ಕಿಚನ್‌, ನ್ಯೂಟ್ರಿಶನ್‌ ಸೆಂಟರ್‌, ಥೆರಪಿ ಲ್ಯಾಬ್‌ ಸೌಲಭ್ಯಗಳು ಮತ್ತು ಎಲ್ಲ ರೀತಿಯ ಆಯುರ್ವೇದ ಔಷಧಗಳು ಉಚಿತವಾಗಿ ಆಸ್ಪತ್ರೆಯಲ್ಲಿ ದೊರಕಲಿವೆ.

ಜನವರಿಯಲ್ಲಿ  ಸೇವಾರಂಭ?
ಸರಕಾರಿ ಆಯುಷ್‌ ಆಸ್ಪತ್ರೆ ನಿರ್ಮಾಣದ ಬಹುತೇಕ ಕಾಮಗಾರಿ ಮುಗಿದಿದ್ದು, ಜ.15 ರೊಳಗೆ ಬಿಟ್ಟುಕೊಡುವುದಾಗಿ ಎಂಜಿನಿಯರ್‌ಗಳು ತಿಳಿಸಿದ್ದಾರೆ. ಅಷ್ಟರೊಳಗೆ ಕಾಮಗಾರಿ ಪೂರ್ಣಗೊಂಡರೆ ಮುಂದಿನ 2ತಿಂಗಳಲ್ಲಿ ಆಸ್ಪತ್ರೆ ಜನಸೇವೆಗೆ ಮುಕ್ತವಾಗಲಿದೆ ಎಂದು ಜಿಲ್ಲಾ ಆಯುಷ್‌ ಅಧಿಕಾರಿ ಇಕ್ಬಾಲ್‌ ತಿಳಿಸಿದ್ದಾರೆ.

ಈಗಾಗಲೇ ಆಯುಷ್‌ ಆಸ್ಪತ್ರೆ ಕಟ್ಟಡದ ಶೇ.70ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಕೆಲವೇ ತಿಂಗಳುಗಳಲ್ಲಿ ಆಸ್ಪತ್ರೆ ಜನಸೇವೆಗೆ ತೆರೆದುಕೊಳ್ಳಲಿದೆ.
ಡಾ| ರಾಜೇಶ್ವರಿ ದೇವಿ, ವೈದ್ಯಕೀಯ ಅಧೀಕ್ಷಕಿ, ವೆನ್ಲ್ಯಾಕ್ ಜಿಲ್ಲಾ ಆಸ್ಪತ್ರೆ

Advertisement

ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next