ಬೆಂಗಳೂರು: ಆಯುರ್ವೇದ ಮೂಲಕ ಹಜಿಮಾ ಥೆರಪಿ ಚಿಕಿತ್ಸೆ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ಸುಲಿಗೆ ಮಾಡುತ್ತಿದ್ದ ರಾಜಸ್ಥಾನ ಮೂಲದ ಅಪ್ಪ-ಮಗ ಸೇರಿ ಮೂವರು ವಂಚಕರು ವಿಲ್ಸನ್‌ಗಾರ್ಡನ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ರಾಜಸ್ಥಾನ ಮೂಲದ ಮೊಹಮ್ಮದ್ ಸಮೀನ್ ಅಲಿಯಾಸ್ ಡಾ.ಮಲ್ಲಿಕ್ (50), ಆತನ ಪುತ್ರ ಶೈಫ್ ಅಲಿ (25) ಮತ್ತು ಸಹಾಯಕ ಮೊಹಮ್ಮದ್ ರಹೀಸ್ (55) ಬಂಧಿತರು. ಆರೋಪಿಗಳಿಂದ 4 ಕಾರುಗಳು, 3 ಬೈಕ್, 3.5 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಇತ್ತೀಚೆಗೆ ಪಂಕಜ್ ರಾಠೊರ್ ಎಂಬುವರ ತಾಯಿಗೆ ಚಿಕಿತ್ಸೆ ನೀಡುವುದಾಗಿ 8 ಲಕ್ಷ ರೂ. ಪಡೆದು ವಂಚಿಸಿದ್ದರು. ಈ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತಿಬ್ಬರು ತಲೆಮರೆಸಿಕೊಂಡಿದ್ದಾರೆ.
ರಾಜಸ್ಥಾನದಿಂದ ಕಾರುಗಳ ಮೂಲಕ ಬಂದಿರುವ ಆರೋಪಿಗಳು, ನೆಲಮಂಗಲದ ಬಳಿ ಗುಡಿಸಲು ನಿರ್ಮಿಸಿಕೊಂಡು ಆಯುರ್ವೇದ ಚಿಕಿತ್ಸೆ ಕೊಡಿಸುವುದಾಗಿ ನಾಮಫಲಕ ಗಳನ್ನು ಹಾಕಿಕೊಂಡು ಸಾರ್ವಜನಿಕರನ್ನು ವಂಚಿಸುತ್ತಿದ್ದರು. ಈ ಮಧ್ಯೆ ಶಾಂತಿನಗರ ಬಸಪ್ಪ ರಸ್ತೆಯ ನಿವಾಸಿ, ದೂರುದಾರ ಪಂಕಜ್ ರಾಠೊರ್ ಎಂಬುವರ ತಾಯಿಗೆ ಕಾಲು ನೋವು ಇತ್ತು. ಆಗ ಪರಿಚಯಸ್ಥರ ಪಂಕಜ್ ಆರೋಪಿಗೆ ಕರೆ ಮಾಡಿ ಡಿ.16ರಂದು ಮನೆಗೆ ಕರೆಸಿಕೊಂಡಿದ್ದರು. ಪರೀಕ್ಷಿಸಿದ ಮಲ್ಲಿಕ್, ಕಾಲಿನಲ್ಲಿ ಕೀವು ತುಂಬಿಕೊಂಡಿದೆ.
ಒಂದು ಡ್ರಾಪ್ ಕೀವು ತೆಗೆಯಲು 4 ಸಾವಿರ ರೂ. ಖರ್ಚಾಗುತ್ತದೆ ಎಂದು ಹೇಳಿ ಮತ್ತು ಅವರ ಕುಟುಂಬದವರಿಂದ ಒಟ್ಟು 8.8 ಲಕ್ಷ ರೂ. ಪಡೆದುಕೊಂಡು ಯಾವುದೇ ರೀತಿಯ ಚಿಕಿತ್ಸೆ ನೀಡದೇ ವಂಚಿಸಿ ಪರಾರಿಯಾಗಿದ್ದ. ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ವಿಲ್ಸನ್‌ಗಾರ್ಡನ್ ಠಾಣಾಧಿಕಾರಿ ಎ. ರಾಜು ನೇತೃತ್ವದ ತಂಡ ಆರೋಪಿಗಳನ್ನು ನೆಲಮಂಗಲ ದಲ್ಲಿ ಬಂಧಿಸಿತ್ತು.
ಇನ್ನು ತಾವು ತಂದಿದ್ದ ಕಾರುಗಳು ಮತ್ತು ಬೈಕ್‌ಗಳನ್ನು ಗುಡಿಸಲು ಅಥವಾ ಟೆಂಟ್ ಸಮೀಪದಲ್ಲಿರುವ ಕಟ್ಟಡಗಳ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ನಿತ್ಯ ಬಾಡಿಗೆ ಪಾವತಿಸುತ್ತಿದ್ದರು ಎಂದು ಪೊಲೀಸರು ಹೇಳಿದರು.
ದೇವಾಲಯಗಳ ಬಳಿ ಪ್ರಚಾರ:
ತಲೆಮರೆಸಿಕೊಂಡಿರುವ ಆರೋಪಿಗಳು ವಿವಿಧ ಧರ್ಮದ ದೇವಾಲಯಗಳ ಬಳಿ ಹೋಗಿ ಹೆಸರು ಬದಲಿಸಿಕೊಂಡು ಸಾರ್ವಜನಿಕರ ಜತೆ ಮಾತನಾಡುತ್ತಿದ್ದರು. ಆಗ ಯಾರಾದರೂ ಕಾಲು, ಕುತ್ತಿಗೆ ನೋವಿನ ಬಗ್ಗೆ ಹೇಳಿಕೊಂಡರೆ ಹಜಿಮ್ ಥೆರೆಪಿ ಬಗ್ಗೆ ಹೇಳುತ್ತಾ, ಡಾ ಮಲ್ಲಿಕ್ ಬಗ್ಗೆ ಮಾಹಿತಿ ನೀಡುತ್ತಿದ್ದರು. ಹೀಗೆ ಪಂಕಜ್ ರಾಠೊರ್‌ಗೆ ಮಲ್ಲಿಕ್ ಬಗ್ಗೆ ಹೇಳಿ, ಆತನ ಮೊಬೈಲ್ ನಂಬರ್ ಕೂಡ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮನೆಗೆ ಬಂದ ಮಲ್ಲಿಕ್ ಚಿಕಿತ್ಸೆ ನೀಡುವುದಾಗಿ ನಂಬಿಸಿ ವಂಚಿಸಿದ್ದಾನೆ ಎಂದು ಪೊಲೀಸರು ಹೇಳಿದರು.