Advertisement

ಮಳೆಗಾಲದ ಆರೋಗ್ಯಕ್ಕೆ ಮನೆ ಮದ್ದು…ಆಯುರ್ವೇದದ ಪಂಚಕರ್ಮ ಚಿಕಿತ್ಸೆಯ ಮಹತ್ವವೇನು?

04:41 PM Aug 08, 2022 | ಕಾವ್ಯಶ್ರೀ |

ಪರಿಸರ ಮನುಷ್ಯನ ಶರೀರದ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಮನುಷ್ಯನ ಶರೀರವು ಜೀವನ ಪೂರ್ತಿ ಸುತ್ತಮುತ್ತಲಿನ ವಾತಾವರಣದಿಂದಲೇ ಪ್ರಭಾವಿತವಾಗುತ್ತದೆ. ಸುತ್ತಮುತ್ತಲಿನಲ್ಲಿ ನಡೆಯುವ ಯಾವುದೇ ವಿಧದ ಬದಲಾವಣೆಗಳು, ಏರುಪೇರುಗಳು ಅವಶ್ಯವಾಗಿ ಶರೀರದ ಮೇಲೆ ಪರಿಣಾಮ ಬೀರುತ್ತದೆ.

Advertisement

ಉದಾಹರಣೆಗೆ ಮಳೆ, ಬಿಸಿಲು, ಚಳಿ, ಗಾಳಿಗಳಿಂದ ಶರೀರದ ಮೇಲೆ ಹಾಗೂ ಆರೋಗ್ಯದ ಮೇಲೆ ಅನುಕೂಲ ಅಥವಾ ಅನಾನುಕೂಲ ಪರಿಣಾಮ ಬೀರುತ್ತದೆ. ಇವುಗಳು ಪೂರಕ ಆಗಿದ್ದರೆ ವ್ಯಕ್ತಿಯು ಆರೋಗ್ಯವಾಗಿರುತ್ತಾನೆ. ಒಂದು ವೇಳೆ ಮಾರಕ ಆಗಿದ್ದರೆ ಆರೋಗ್ಯ ಕೆಡುತ್ತದೆ. ವರ್ಷಪೂರ್ತಿ ಪ್ರಕೃತಿ ಹಾಗೂ ವಾತಾವರಣ ಒಂದೇ ತರಹವಾಗಿರುವುದಿಲ್ಲ. ಕಾಲಕಾಲಕ್ಕೆ ಬದಲಾವಣೆಗಳು ಆಗುತ್ತಿರುತ್ತವೆ. ಇವುಗಳು ಪರಿಣಾಮವಾಗಿ ನಮ್ಮ  ಆರೋಗ್ಯವು ಏರುಪೇರಾಗಿ ರೋಗಗಳು ಕಾಡುವುದು ಸಾಮಾನ್ಯ.

ಮಳೆಗಾಲ ಸಮಯದಲ್ಲಿ ರೋಗಗಳು ಕಾಡುವುದು ಸಹಜ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಮಳೆಯಿಂದಾಗಿ ಸೊಳ್ಳೆಗಳು ಜಾಸ್ತಿಯಾಗಿ ಉತ್ಪತ್ತಿಯಾಗುತ್ತದೆ. ಈ ಕಾಲದ ಶೀತಲ ವಾತಾವರಣದಿಂದ ಜ್ವರ ಸಾಮಾನ್ಯವಾಗಿ ಕಾಡುತ್ತದೆ. ಅದರ ಜೊತೆಗೆ ಶೀತ, ಕಫ, ಕೆಮ್ಮು, ಉಂಟಾಗುತ್ತದೆ. ಹೀಗೆ ವಿವಿಧ ರೋಗಗಳ ಕಾಲ ಎಂದರೆ ಮಳೆಗಾಲ ಎನ್ನಬಹುದು.

ಪ್ರತಿ ವರ್ಷ ಸುಮಾರು 700 ಮಿಲಿಯನ್ ಜನರು ಸೊಳ್ಳೆಯಿಂದ ಹರಡುವ ಅನಾರೋಗ್ಯ ಪಡೆಯುತ್ತಾರೆ. ಇದರ ಪರಿಣಾಮವಾಗಿ ಒಂದು ದಶಲಕ್ಷಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತವೆ ಎಂದು ವರದಿ ತಿಳಿಸಿದೆ. ಮಳೆಗಾಲದಲ್ಲಿ ನಾವು ಎಷ್ಟೇ ಜಾಗೃತರಾಗಿದ್ದರೂ ಅನಾರೋಗ್ಯ ಕಾಡುವುದು ಸಾಮಾನ್ಯ. ಆಯುರ್ವೇದದ ಪ್ರಕಾರ ಕಾಲಮಾನಗಳು ಬದಲಾದ ಹಾಗೆ ದೈಹಿಕವಾಗಿಯೂ ಬದಲಾವಣೆ ಉಂಟಾಗಿ, ಅನಾರೋಗ್ಯ ಕಾಣಿಸಿಕೊಳ್ಳುತ್ತದೆ.

ಹಾಗಾದರೆ ಮಳೆಗಾಲದಲ್ಲಿ ನಮ್ಮ ಆರೋಗ್ಯವನ್ನು ನಾವು ಹೇಗೆ ಕಾಪಾಡಿಕೊಳ್ಳಬಹುದು? ಆಯುರ್ವೇದ ಮೂಲಕ ಹೇಗೆ ಆರೋಗ್ಯ ರಕ್ಷಣೆ ಮಾಡಿಕೊಳ್ಳಬಹುದು? ಯಾವೆಲ್ಲ ಆರೋಗ್ಯ ಸಮಸ್ಯೆ ಕಾಡುತ್ತೆ..? ತಿಳಿಯೋಣ..

Advertisement

ಈಗಾಗಲೇ ಹೇಳಿದಂತೆ ಮಳೆಗಾಲ ಎಂದರೆ ಉತ್ತಮ ಆರೋಗ್ಯಕ್ಕೆ ಒಳ್ಳೆಯ ಕಾಲವಲ್ಲ. ಮಳೆಗಾಲ ಪ್ರಾರಂಭವಾದಗಿಂದ ತೇವಾಂಶ ಹೆಚ್ಚಳದಿಂದ ಮನುಷ್ಯನ ದೇಹದಲ್ಲೂ ಅನೇಕ ಬದಲಾವಣೆಗಳು ಉಂಟಾಗುತ್ತವೆ. ಶೀತ, ಜ್ವರ, ಹಳದಿ ಜ್ವರ, ಅತಿಸಾರದಂತಹ ಆರೋಗ್ಯ ಸಮಸ್ಯೆಗಳು ಬಾಧಿಸುತ್ತವೆ. ಮಳೆ ನೀರು ಅಲ್ಲಲ್ಲಿ ನಿಂತು ಸೊಳ್ಳೆಗಳ ಸಂತಾನ ಉತ್ಪತ್ತಿಯಾಗಿ ಮಲೇರಿಯಾ, ಡೆಂಗ್ಯೂ, ಚಿಕೂನ್‌ ಗುನ್ಯಾ, ಟೈಫಾಯ್ಡ್‌ ಮೊದಲಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.

ಮಳೆಗಾಲದಲ್ಲಿ ಮುಖ್ಯವಾಗಿ ವಾತ, ಪಿತ್ತದಂತಹ ಆರೋಗ್ಯ ಸಮಸ್ಯೆಗಳು ಕಾಡುವುದು ಸಾಮಾನ್ಯ.

ವಾತ ಸಮಸ್ಯೆ ಜಾಸ್ತಿ: ಮಳೆಗಾಲದಲ್ಲಿ ವಾತ ದೋಷ ಜಾಸ್ತಿಯಾಗುತ್ತದೆ. ಬೇಸಿಗೆಯ ಶುಷ್ಕ ಅಥವಾ ನಿರ್ಜಲೀಕರಣದ ಶಾಖದ ಸಮಯದಲ್ಲಿ ವಾತ ದೋಷವು ಸಂಗ್ರಹಗೊಳ್ಳುತ್ತದೆ. ಮಳೆಗಾಲದ ಅಸಿಡಿಕ್ ವಾತಾವರಣದ ಪರಿಸ್ಥಿಯಿಂದ ಇದು ಉಲ್ಬಣಗೊಂಡು ಜೀರ್ಣಕ್ರಿಯೆ ಸಮಸ್ಯೆ ಉಂಟಾಗುತ್ತದೆ.

ಪಿತ್ತ: ಮಳೆಗಾಲದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಯಾಗಿದ್ದು, ವಾತಾವರಣದಲ್ಲಿ ಆಮ್ಲೀಯ ಗುಣಗಳು ಹೆಚ್ಚಿರುತ್ತದೆ. ಜೀರ್ಣಕ್ರಿಯೆಯೂ ಸರಿ ಇರುವುದಿಲ್ಲ. ಇದರಿಂದ ಪಿತ್ತ ನಮ್ಮ ದೇಹದಲ್ಲಿ ಸಂಗ್ರಹಗೊಳ್ಳುತ್ತದೆ. ಮಳೆಗಾಲ ಕಳೆದು ಮತ್ತೆ ಬೇಸಿಗೆಗಾಲ ಆರಂಭವಾಗುತ್ತಿದ್ದಂತೆ ಕಾಲಮಾನ ಬದಲಾವಣೆಯಿಂದ ಪಿತ್ತ ಉಲ್ಬಣಗೊಳ್ಳುತ್ತದೆ. ಪಿತ್ತದ ಪ್ರಕ್ರಿಯೆ ಆರಂಭಗೊಳ್ಳುವುದು ಮಳೆಗಾಲದಲ್ಲಿಯೇ ಎನ್ನಬಹುದು.

ಇವಿಷ್ಟೇ ಅಲ್ಲದೇ ಮಳೆಗಾಲದಲ್ಲಿ ಇತರ ಆರೋಗ್ಯ ಸಮಸ್ಯೆಗಳೂ ಕಾಡುತ್ತದೆ. ಮಳೆಗಾಲದಲ್ಲಿ ಕೆಲವೊಂದು ಚಟುವಟಿಕೆಗಳಿಂದ ಕೆಲವರಿಗೆ ತೀವ್ರ ಆರೋಗ್ಯ ಸಮಸ್ಯೆ ಕಾಡಬಹುದು. ಮಳೆಯಲ್ಲಿ ಕೆಲಸ ಮಾಡುವವರಿಗೆ ಕಾಯಿಲೆ ಅಂಟಿಕೊಳ್ಳಬಹುದು. ಮಳೆಗಾಲದಲ್ಲಿ ಶೀತ ವಾತಾವರಣದಿಂದ ರಕ್ತನಾಳಗಳಲ್ಲಿ ಅಡಚಣೆಯನ್ನು ಉಂಟುಮಾಡುತ್ತವೆ. ಇದು ಅಧಿಕ ರಕ್ತದೊತ್ತಡ ಮತ್ತು ಹೃದಯದ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಮಳೆಗಾಲದಲ್ಲಿ ರಕ್ತದ ಸಂಬಂಧಿ ಸಮಸ್ಯೆ ಉಂಟಾಗುವುದರಿಂದ ಮಧುಮೇಹ ಇರುವವರ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಕಾಲರ, ಹಳದಿ ರೋಗ, ಥೈರಾಯ್ಡ್ ನಂತಹ ಸಮಸ್ಯೆ ಕೂಡ ಉಲ್ಬಣಿಸುವುದು ಮಳೆಗಾಲದಲ್ಲಿಯೇ.

ಆರೋಗ್ಯ ಪರೀಕ್ಷೆ ಮಾಡಿಸುತ್ತಿರಬೇಕು…

ಮಳೆಗಾಲ ಎಂದರೆ ಅನಾರೋಗ್ಯಗಳು ಸಂಭವಿಸುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಸಮಯದಲ್ಲಿ ಆರೋಗ್ಯ ತಪಾಸಣೆ ಮಾಡುತ್ತಿರಬೇಕಾಗುತ್ತದೆ. ಸಣ್ಣ-ಪುಟ್ಟ ಆರೋಗ್ಯ ಬದಲಾವಣೆ ಪ್ರಾರಂಭವಾಗುವ ಕೂಡಲೇ ಅದಕ್ಕೆ ತಕ್ಕಂತೆ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ಕೈಗೊಳ್ಳುವುದು ಉತ್ತಮ.

ಮಳೆಗಾಲದ ಆರೋಗ್ಯಕ್ಕೆ ಮನೆ ಮದ್ದು….

ಮಳೆಗಾಲದಲ್ಲಿ ಮನೆ ಮದ್ದು ಉಪಯೋಗಿಸಿ ರೋಗ ಬರದಂತೆ ತಡೆಗಟ್ಟಬಹುದು. ಒಳ್ಳೆಯ ಆಹಾರ ಪದ್ದತಿ ಅನುಸರಿಸಿಕೊಳ್ಳಿ. ಮಳೆಗಾಲದಲ್ಲಿ ಜೀರ್ಣಕ್ರಿಯೆ ಸಮಸ್ಯೆ ಇರುವುದು ಸಾಮಾನ್ಯ, ಹೀಗಾಗಿ ಜೀರ್ಣವಾಗುವ ಆಹಾರ ಕ್ರಮಗಳನ್ನು ಪಾಲಿಸಿ. ಬೆಳ್ಳುಳ್ಳಿಯಲ್ಲಿ ಬ್ಯಾಕ್ಟೀರಿಯಾ ನಿರೋಧಕ ಶಕ್ತಿ ಹೆಚ್ಚಾಗಿದ್ದು, ನಮ್ಮ ದಿನನಿತ್ಯದ ಅಡುಗೆಯಲ್ಲಿ ಬೆಳ್ಳುಳ್ಳಿ ಉಪಯೋಗಿಸುವುದು ಉತ್ತಮ ಅಭ್ಯಾಸ.

ಮಳೆಗಾಲದ ಶೀತ ಹವಾಮಾನದಲ್ಲಿ ತಣ್ಣಗೆ ಇರುವ ಆಹಾರ (ಐಸ್ ಕ್ರೀಮ್, ಕೋಲ್ಡ್ ಡ್ರಿಂಕ್ಸ್) ಹಾಗೂ ಇತರ ಆಹಾರಗಳಿಂದ ದೂರವಿದ್ದು ಬಿಸಿ ಬಿಸಿ ಆಹಾರ ಸೇವಿಸಬೇಕು. ತಣ್ಣೀರಿಗಿಂತ ಬಿಸಿ ನೀರು ಕುಡಿಯುವುದು ಒಳ್ಳೆಯ ಅಭ್ಯಾಸ. ಹಾಲಿಗೆ ಸ್ವಲ್ಪ ಅರಶಿನ ಸೇರಿಸಿ ಸೇವಿಸಿದರೆ ಕೆಮ್ಮು-ಶೀತವನ್ನು ದೂರವಿಡಬಹುದು. ಬೇವಿನ ಎಲೆಗಳು ರುಚಿಯಲ್ಲಿ ಕಹಿಯಾದರೂ ವೈರಸ್‌ ಎದುರಿಸಲು ಈ ಎಲೆಗಳು ಸಮರ್ಥವಾಗಿವೆ. ಹೀಗಾಗಿ ಬೇವಿನ ಎಲೆಯ ಕಷಾಯ ಮಾಡಿ ಕುಡಿಯಬಹುದು. ತುಳಸಿ ಎಲೆಗಳು ಬ್ಯಾಕ್ಟೀರಿಯಾ ನಿರೋಧಕ ಮತ್ತು ಶಿಲೀಂಧ್ರ ನಿವಾರಕ ಗುಣಗಳನ್ನು ಹೊಂದಿದ್ದು ಜ್ವರ, ಮಲೇರಿಯಾ, ಗಂಟಲು ನೋವು ಮೊದಲಾದ ತೊಂದರೆಗಳಿಂದ ರಕ್ಷಿಸುತ್ತದೆ. ಸ್ವಲ್ಪ ನೀರನ್ನು ಕುದಿಸಿ ಇದರಲ್ಲಿ ಹತ್ತರಿಂದ ಹದಿನೈದು ತುಳಸಿ ಎಲೆಗಳನ್ನು ಸೇರಿಸಿ ತಣಿಸಿ. ಬಳಿಕ ಈ ನೀರನ್ನು ಸೋಸಿ ಬಿಸಿಬಿಸಿ ಇದ್ದಂತೆಯೇ ದಿನಕ್ಕೆ ಎರಡು ಬಾರಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು.

ಪಂಚಕರ್ಮ ಚಿಕಿತ್ಸೆ!

ಆಯುರ್ವೇದದ ಪ್ರಮುಖ ಚಿಕಿತ್ಸೆ ಪಂಚಕರ್ಮ ಚಿಕಿತ್ಸೆ. ದೇಹ, ಮನಸ್ಸು ಹಾಗೂ ಆತ್ಮವನ್ನು ಸಮತೋಲನವಾಗಿ ಕಾಪಾಡುವ ಗುರಿ ಹೊಂದಿದೆ. ಇದು ಕೇವಲ ರೋಗಗಳಿಂದ ಬಳಲುವವರು ಮಾತ್ರವಲ್ಲದೆ ಆರೋಗ್ಯವಂತರು ಕೂಡಾ ಪಡೆಯಬಹುದಾದ ಚಿಕಿತ್ಸೆ. ದೇಹದಿಂದ ಟಾಕ್ಸಿನ್ಸ್ ಹೊರ ತೆಗೆದು, ಕಟ್ಟಿಕೊಂಡ ನಾಳಗಳನ್ನು ಸ್ವಚ್ಛತೆ, ಜೀರ್ಣಕ್ರಿಯೆ ಸರಾಗ, ಮೆಟಾಬಾಲಿಸಂ ಹೆಚ್ಚಳ, ತೂಕ ಇಳಿಕೆ, ಒತ್ತಡ ಶಮನ, ರೋಗ ನಿರೋಧಕ ಶಕ್ತಿ ಹೆಚ್ಚಳ ಮುಂತಾದ ಆರೋಗ್ಯ ಲಾಭಗಳು ಪಂಚಕರ್ಮದಿಂದ ಸಿಗುತ್ತವೆ. ಹೀಗಾಗಿ ಮಳೆಗಾಲದಲ್ಲಿ ಪಂಚಕರ್ಮ ಚಿಕಿತ್ಸೆಯನ್ನೂ ಬಳಸಬಹುದು.ಹೀಗಾಗಿ ನಾವು ಅರೋಗ್ಯವಾಗಿರಲು ಉತ್ತಮ ಆಹಾರ ಪದಾರ್ಥ ಬಳಸಿಕೊಂಡು ಮಳೆಗಾಲದಲ್ಲೂ ಆರೋಗ್ಯವಂತರಾಗಿರೋಣ.

*ಕಾವ್ಯಶ್ರೀ

Advertisement

Udayavani is now on Telegram. Click here to join our channel and stay updated with the latest news.

Next