Advertisement
ಬೆಳಗಾವಿಯ ವ್ಯಾಕ್ಸಿನ್ ಡಿಪೋದಲ್ಲಿ ಉದ್ದೇಶಿತ ಆಯುರ್ವೇದ ಔಷಧಾಲಯ ಘಟಕವನ್ನು ಬೆಂಗಳೂರಿಗೆ ಸ್ಥಳಾಂತರಿಸುವ ಯತ್ನ ನಡೆದಿತ್ತು. ಇದಕ್ಕೆ ಬೆಳಗಾವಿಯ ಕನ್ನಡಪರ ಸಂಘಟನೆಗಳು ಸೇರಿದಂತೆ ಅನೇಕರ ವಿರೋಧ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಖಡಕ್ ಆದೇಶ ಹಿನ್ನೆಲೆಯಲ್ಲಿ ಆಯುಷ್ ನಿರ್ದೇಶನಾಲಯ ಅಧಿಕಾರಿಗಳ ತಂಡ ಸೆ. 18-19ರಂದು ಬೆಳಗಾವಿಗೆ ಆಗಮಿಸಿ ಪರಿಶೀಲಿಸಿರುವುದು ಘಟಕ ಸ್ಥಾಪನೆ ಆಸೆ ಗರಿಗೆದರುವಂತೆ ಮಾಡಿದೆ.
Related Articles
Advertisement
ಆಯುರ್ವೇದ ವೈದ್ಯಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಸುಮಾರು 100-120 ವೈದ್ಯರು ಇದ್ದು, ಅವರ ಸಂಶೋಧನೆ, ಇನ್ನಿತರ ಕಾರ್ಯಗಳಿಗೆ ಸಮರ್ಪಕ ಸೌಲಭ್ಯ ಇಲ್ಲವಾಗಿದೆ. ಬೆಳಗಾವಿಯಲ್ಲಿ ಆಯುರ್ವೇದ ಔಷಧಾಲಯ ಘಟಕ ಸ್ಥಾಪನೆ ಮಾಡಿದರೆ ಸ್ನಾತಕೋತ್ತರ ಪದವೀಧರ ವೈದ್ಯರ ಸಂಶೋಧನೆಗೆ ಇನ್ನಷ್ಟು ಉತ್ತೇಜನ ಜತೆಗೆ, ಈ ಭಾಗದ ಜನರಿಗೆ ಆಯುರ್ವೇದ ಔಷಧಿಗಳನ್ನು ನೀಡಲು ಸಹಕಾರಿ ಆಗಲಿದೆ.
ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬೆಳಗಾವಿಯ ಆಯುರ್ವೇದ ಔಷಧಾಲಯ ಘಟಕಕ್ಕೆ 20 ಕೋಟಿ ಅಂದಾಜು ವೆಚ್ಚದೊಂದಿಗೆ ಅನುಮೋದನೆ ನೀಡಿದ್ದು, ಬಜೆಟ್‌ನಲ್ಲಿ 6 ಕೋಟಿ ಅನುದಾನ ನಿಗದಿ ಪಡಿಸಿದ್ದನ್ನು ಸ್ಮರಿಸಬಹುದಾಗಿದೆ.
ಸಿಎಂರಿಂದ ಶಂಕು ಸ್ಥಾಪನೆ?: ಬೆಳಗಾವಿಯಲ್ಲಿನ ಉದ್ದೇಶಿತ ಆಯುರ್ವೇದ ಔಷಧಾಲಯ ಘಟಕವನ್ನು ಬೆಂಗಳೂಗಿಗೆ ಸ್ಥಳಾಂತರಿಸುವ ಕೆಲ ಅಧಿಕಾರಿಗಳ ಯತ್ನಕ್ಕೆ ಮಹತ್ವದ ಬ್ರೇಕ್ ಹಾಕಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಬೆಳಗಾವಿಯಲ್ಲಿಯೇ ಘಟಕ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಲಿಖೀತ ಆದೇಶ ನೀಡಿದ್ದರು.
ಮುಖ್ಯಮಂತ್ರಿಗಳ ಖಡಕ್ ಸೂಚನೆಯಿಂದ ಎಚ್ಚೆತ್ತ ಅಧಿಕಾರಿಗಳು ಬೆಳಗಾವಿಗೆ ದೌಡಾಯಿಸಿ ಸ್ಥಳ ಪರಿಶೀಲನೆಯೊಂದಿಗೆ ಮುಂದಿನ ಪ್ರಕ್ರಿಯೆಯ ಆಶಾಭಾವನೆ ಮೂಡಿಸಿದ್ದು, ಘಟಕ ಬೆಳಗಾವಿಯಲ್ಲಿ ಸ್ಥಾಪನೆಗೊಳ್ಳುವುದು ಬಹುತೇಕ ಖಚಿತಗೊಂಡಿದೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುವ ವಿಧಾನಮಂಡಲ ಅಧಿವೇಶನ ವೇಳೆ ಕುಮಾರಸ್ವಾಮಿಯವರು ಆಯುರ್ವೇದ ಔಷಧಾಲಯ ಘಟಕಕ್ಕೆ ಶಂಕು ಸ್ಥಾಪನೆ ನೆರವೇರಿಸುವರೇ ಎಂಬುದನ್ನು ಉತ್ತರ ಕರ್ನಾಟಕದ ಜನತೆ ಆಸೆಕಂಗಳಿಂದ ಕಾಯುತ್ತಿದ್ದಾರೆ.
ಅಮರೇಗೌಡ ಗೋನವಾರ