ಧಾರವಾಡ: ಆಧುನಿಕ ಒತ್ತಡದ ಜೀವನದಲ್ಲಿ ಆರೋಗ್ಯ ರಕ್ಷಣೆ ಹಾಗೂ ಚಿಕಿತ್ಸಾ ವಿಧಾನಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿ ಡಾ| ಸಂಗಮೇಶ ಕಲಹಾಳ ಹೇಳಿದರು.
ತಾಪಂ ಸಭಾಭವನದಲ್ಲಿ ಮಾಧವ ಭಾಗ ಸಂಸ್ಥೆ ವತಿಯಿಂದ ಹೃದ್ರೋಗ ಮುಕ್ತ ನಗರ ಅಭಿಯಾನ ನಿಮಿತ್ತ ಇಲಾಖೆ ಸಿಬ್ಬಂದಿಗಾಗಿ ಹಮ್ಮಿಕೊಂಡಿದ್ದ ಉಚಿತ ಹೃದಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು. ಆಯುರ್ವೇದದಿಂದ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಆರೋಗ್ಯ ಕಾಪಾಡಲು ಸಾಧ್ಯವಿದೆ. ಆಯುರ್ವೇದವು ಪರಿಪೂರ್ಣ ಶಾಸ್ತ್ರವಾಗಿದೆ. ಇಂದು ಜಗತ್ತಿನಾದ್ಯಂತ ಆಯುರ್ವೇದ ಪದ್ಧತಿಯನ್ನು ಜನರು ಅನುಸರಿಸುತ್ತಿದ್ದಾರೆ. ಹೃದಯ ರೋಗ, ಸಕ್ಕರೆ ಕಾಯಿಲೆ, ಬೊಜ್ಜು ನಿವಾರಣೆ, ಅಧಿಕ ರಕ್ತದೊತ್ತಡಕ್ಕೆ ಮಾಧವಭಾಗ ಸಂಸ್ಥೆ ವತಿಯಿಂದ ಜನರಿಗೆ ಆರೋಗ್ಯ ತಿಳಿವಳಿಕೆ ನೀಡುವುದರ ಜೊತೆಗೆ ಆಯುರ್ವೇದ ಔಷಧ ಕೊಡಮಾಡುತ್ತಿರುವುದು ಶ್ಲಾಘನೀಯ ಎಂದರು.
ತಜ್ಞ ವೈದ್ಯ ಡಾ| ಪ್ರಸಾದ ದೇಶಪಾಂಡೆ ಮಾತನಾಡಿ, ಜೀವನ ಶೈಲಿ ಬದಲಾವಣೆ ಜೊತೆಗೆ ಆಹಾರ ವಿಹಾರ ಪದ್ಧತಿ ಸರಿಯಲ್ಲದ ಕಾರಣ ಹಿರಿಯರಿಂದ ಕಿರಿಯರ ವರೆಗೂ ವಿವಿಧ ರೋಗಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಹೇಳಿದರು.
ಮಾಧವಭಾಗ ಸಂಸ್ಥೆಯು ಯಾವುದೇ ತರಹದ ಶಸ್ತ್ರಚಿಕಿತ್ಸೆ ಮಾಡದೇ ಆಯುರ್ವೇದ ಔಷಧ ಒದಗಿಸಿ ಲಕ್ಷಾಂತರ ಜನರನ್ನು ರೋಗದಿಂದ ಮುಕ್ತ ಮಾಡಿದೆ. ಸಕ್ಕರೆ ಕಾಯಿಲೆ, ರಕ್ತದೊತ್ತಡ ಹಾಗೂ ಹೃದಯ ಸಂಬಂ ಧಿ ರೋಗಗಳಿಂದ ಬಳಲುತ್ತಿದ್ದ ಜನರನ್ನು ಔಷಧ ಇಲ್ಲದೇ ಜೀವನ ನಡೆಸುವಂತೆ ಮಾಡಿದ್ದೇವೆ ಎಂದರು.
ಡಾ| ಅಕ್ಷತಾ ರಾಯ್ಕರ ಮಾತನಾಡಿದರು. ತಾಪಂ ಇಒ ಎಸ್.ಎಸ್. ಕಾದ್ರೋಳ್ಳಿ, ಸಹಾಯಕ ನಿರ್ದೇಶಕ ಗಿರೀಶ ಕೋರಿ, ಮಾಧವಭಾಗ ಸಂಸ್ಥೆ ಸಂಯೋಜನಾ ಧಿಕಾರಿ ಪುಷ್ಪಾ ಕಳ್ಳಿಮಠ ಇದ್ದರು. ಶಶಿರೇಖಾ ಚಕ್ರಸಾಲಿ ನಿರೂಪಿಸಿದರು.