Advertisement

ಗ್ರಾಹಕರ ಸೋಗಿನಲ್ಲಿ ಆಯುರ್ವೇದಿಕ್‌ ಸೆಂಟರ್‌ಗೆ ನುಗ್ಗಿ ಸುಲಿಗೆ: ಐವರ ಬಂಧನ

03:01 PM Jan 18, 2024 | Team Udayavani |

ಬೆಂಗಳೂರು: ಸಾಲ ತೀರಿಸಲು ಗ್ರಾಹಕರ ಸೋಗಿನಲ್ಲಿ ಹಾಡುಹಗಲೇ ಆಯುರ್ವೇದಿಕ್‌ ಸೆಂಟರ್‌ಗೆ ನುಗ್ಗಿ ಮಹಿಳೆಯ ಕೈ, ಕಾಲು ಕಟ್ಟಿ ಮಾಂಗಲ್ಯ ಸರ ಸೇರಿ ಎರಡು ಚಿನ್ನದ ಸರ ಹಾಗೂ ಮೊಬೈಲ್‌ ಸುಲಿಗೆ ಮಾಡಿದ್ದ ದಂಪತಿ ಸೇರಿ ಐವರು ಕೊಡಿಗೇಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹಾರೋಹಳ್ಳಿ ನಿವಾಸಿ ಗುರು, ಆತನ ಪತ್ನಿ ರೇಣುಕಾ, ಸ್ನೇಹಿತೆ ಪ್ರಭಾವತಿ ಹಾಗೂ ಈಕೆಯ ಸಂಬಂಧಿಕರಾದ ರುದ್ರೇಶ್‌, ಸಂದೀಪ್‌ನನ್ನು ಬಂಧಿಸಲಾಗಿದೆ.

Advertisement

ಆರೋಪಿಗಳು ಜ.14ರಂದು ಕೊಡಿಗೇಹಳ್ಳಿ ಸಮೀಪದ ತಿಂಡ್ಲು ಸರ್ಕಲ್‌ನಲ್ಲಿರುವ ಗಂಗಾ ಆಯುರ್ವೇದಿಕ್‌ ಸೆಂಟರ್‌ಗೆ ನುಗ್ಗಿ, ಅನುಶ್ರೀ ಎಂಬಾಕೆಯ ಕೈ, ಕಾಲು ಕಟ್ಟಿ ಹಾಕಿ, 35 ಗ್ರಾಂ ತೂಕದ ಮಾಂಗಲ್ಯ ಸರ, 13 ಗ್ರಾಂ ತೂಕದ ಚಿನ್ನದ ಸರ ಹಾಗೂ ಒಂದು ಐಫೋನ್‌ ಸುಲಿಗೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಅನುಶ್ರೀ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳ ಪೈಕಿ ಗುರು, ರೇಣುಕಾಳನ್ನು 2ನೇ ಮದುವೆಯಾಗಿದ್ದು, ಗುರು ಹಾಗೂ ರೇಣುಕಾ ಸ್ನೇಹಿತೆ ಪ್ರಭಾವತಿ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ರೇಣುಕಾಳ ಸಂಚಿನಂತೆ ಆರೋಪಿಗಳು ಆಯುರ್ವೇದಿಕ್‌ ಸೆಂಟರ್‌ಗೆ ನುಗ್ಗಿ ಅನುಶ್ರಿ ಅವರನ್ನು ಸುಲಿಗೆ ಮಾಡಿದ್ದರು ಎಂದು ಪೊಲೀಸರು ಹೇಳಿದರು. ಬಳಿಕ ಅನುಶ್ರೀ ಎಚ್ಚರಗೊಂಡ ಕೂಡಲೇ ಸ್ಥಳೀಯರ ನೆರವು ಪಡೆದು ಕೊಡಿಗೇಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

ಈ ಸಂಬಂಧ ಕಾರ್ಯಾಚರಣೆ ನಡೆಸಿದ ಪೊಲೀಸರು, ಸಿಸಿ ಕ್ಯಾಮೆರಾದ ದೃಶ್ಯಗಳನ್ನು ಸಂಗ್ರಹಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಯಲಹಂಕದ ಉಪವಿಭಾಗದ ಎಸಿಪಿ ಪಿ.ನರಸಿಂಹಮೂರ್ತಿ, ಠಾಣಾಧಿಕಾರಿ ಎಂ.ಎ.ಮಹೇಶ್‌, ಪಿಎಸ್‌ಐ ಕೌಶಿಕ್‌, ಅನಿಲ್‌, ಪ್ರೊಬೆಷನರಿ ಪಿಎಸ್‌ಐ ಪದ್ಮನಾಭ ಹಾಗೂ ತಂಡ ಕಾರ್ಯಾಚರಣೆ ನಡೆಸಿದೆ.

ಸ್ನೇಹಿತೆಯೇ ಟಾರ್ಗೆಟ್‌

Advertisement

ಆರೋಪಿ ರೇಣುಕಾ ಈ ಹಿಂದೆ ಇದೇ ಆಯುರ್ವೇದಿಕ್‌ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಆಗ ಅನುಶ್ರೀ ಪರಿಚಯವಿತ್ತು. ಈ ವೇಳೆ ಅನುಶ್ರೀ ಬಳಿ ಚಿನ್ನಾಭರಣ, ನಗದು ಹಾಗೂ ಸೆಂಟರ್‌ ಅನ್ನು ಈಕೆಯ ನಿರ್ವಹಿಸುತ್ತಿದ್ದರಿಂದ ಭಾರೀ ನಗದು ಸಿಗುತ್ತದೆ ಎಂದು ಭಾವಿಸಿದ ರೇಣುಕಾ ಪತಿ ಹಾಗೂ ಇತರರ ಜತೆ ಸೇರಿ ಸಂಚು ರೂಪಿಸಿದ್ದಳು.

ಅದರಂತೆ ಜ.13ರಂದು ಸಂಜೆ ಪ್ರಭಾವತಿ ಆಯುರ್ವೇದಿಕ್‌ ಸೆಂಟರ್‌ಗೆ ಹೋಗಿ ಬೆನ್ನು ನೋವಿಗೆ ಚಿಕಿತ್ಸೆ ಬೇಕೆಂದು ಕೇಳಿದ್ದಾಳೆ. ಆಗ ಅನುಶ್ರೀ, ಮರು ದಿನ ಬರುವಂತೆ ಸೂಚಿಸಿದ್ದರು. ಹೀಗಾಗಿ ಜ.14ರಂದು ಬೆಳಗ್ಗೆಯೇ ಸೆಂಟರ್‌ಗೆ ಬಂದ ಪ್ರಭಾವತಿಗೆ ಅನುಶ್ರೀ ಚಿಕಿತ್ಸೆ ಕೊಡಲು ಒಳಗಡೆ ಕರೆದೊಯ್ಯುತ್ತಿದ್ದಂತೆ, ರುದ್ರೇಶ್‌, ಸಂದೀಪ್‌ ಮತ್ತು ಗುರು ಏಕಾಏಕಿ ಸೆಂಟರ್‌ನ ಒಳಗಡೆ ನುಗ್ಗಿದ್ದಾರೆ.

ಅದನ್ನು ಪ್ರಶ್ನಿಸಿದ ಅನುಶ್ರೀಗೆ, ಆರೋಪಿ ಗುರು, ಪ್ರಭಾವತಿ ತನ್ನ ಪತ್ನಿ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ, ಆನ್‌ಲೈನ್‌ ಪೇಮೆಂಟ್‌ ಮಾಡುತ್ತೇನೆ ಎಂದು ಜೇಬಿನಿಂದ ಕರವಸ್ತ್ರ ತೆಗೆದು, ಅದರಲ್ಲಿದ್ದ ಕೆಮಿಕಲ್‌ನಿಂದ ಅನುಶ್ರೀಯ ಮುಖಕ್ಕೆ ಸಿಂಪಡಿಸಿ ಪ್ರಜ್ಞೆ ತಪ್ಪಿಸಿದ್ದಾರೆ. ಬಳಿಕ ಆಕೆಯ ಕೈ, ಕಾಲುಗಳನ್ನು ಕಟ್ಟಿಹಾಕಿ, ಮೈಮೇಲಿದ್ದ ಮಾಂಗಲ್ಯ ಸರ ಸೇರಿ ಎರಡು ಚಿನ್ನದ ಸರಗಳು, 1 ಐಫೋನ್‌ ಸುಲಿಗೆ ಮಾಡಿ ಪರಾರಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next