Advertisement

ಪ್ರತಿ ಜಿಲ್ಲೆಗೂ ಆಯುರ್ವೇದ ಆಸ್ಪತ್ರೆ: ಕೇಂದ್ರ ಸರ್ಕಾರ ಚಿಂತನೆ

06:15 AM Oct 18, 2017 | Harsha Rao |

ಹೊಸದಿಲ್ಲಿ: ಇತ್ತೀಚೆಗಷ್ಟೇ ಜೆನೆರಿಕ್‌ ಔಷಧಗಳಿಗೆ ಹೆಚ್ಚಿನ ಒತ್ತು ನೀಡುವಂತೆ ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಆಯುರ್ವೇದ ಔಷಧಗಳನ್ನು ಉತ್ತೇಜಿಸುವತ್ತಲೂ ಹೆಜ್ಜೆಯಿಟ್ಟಿದ್ದಾರೆ. “ಆಯುರ್ವೇದ ದಿನ’ವಾದ ಮಂಗಳವಾರ ದಿಲ್ಲಿಯಲ್ಲಿ “ಅಖೀಲ ಭಾರತ ಆಯುರ್ವೇದ ಸಂಸ್ಥೆ’ಯನ್ನು ಲೋಕಾರ್ಪಣೆ ಮಾಡಿರುವ ಅವರು, “ದೇಶದ ಪ್ರತಿ ಜಿಲ್ಲೆಯಲ್ಲೂ ಆಯುರ್ವೇದ ಆಸ್ಪತ್ರೆ ನಿರ್ಮಿಸಲು ಸರಕಾರ ಚಿಂತನೆ ನಡೆಸುತ್ತಿದೆ’ ಎಂದಿದ್ದಾರೆ. ಜತೆಗೆ, ದೇಶದಲ್ಲಿ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಿಂದ ಸ್ಫೂರ್ತಿ ಪಡೆದು “ಆರೋಗ್ಯ ಕ್ರಾಂತಿ’ಗೆ ನಾಂದಿ ಹಾಡುವಂತೆ ಕರೆ ನೀಡಿದ್ದಾರೆ.

Advertisement

ಬಡವರಿಗೆ ಅಗ್ಗದ ದರದಲ್ಲಿ ಆರೋಗ್ಯ ಸೇವೆ ನೀಡು ವುದಕ್ಕೆ ಕೇಂದ್ರ ಸರಕಾರ ಬದ್ಧವಾಗಿದೆ. ಆಯುರ್ವೇದ ಎನ್ನುವುದು ಭಾರತದ ಶಕ್ತಿ. ಹಾಗಾಗಿ, ತಜ್ಞರು ಅಲೋ ಪತಿಯಂತೆಯೇ ಬೇಗನೆ ರೋಗ ಶಮನವಾಗಬಲ್ಲಂಥ, ಆದರೆ ಯಾವುದೇ ಅಡ್ಡ ಪರಿಣಾಮ ಬೀರದಂಥ ಆಯುರ್ವೇದ ಔಷಧವನ್ನು ಅಭಿವೃದ್ಧಿಪಡಿಸಬೇಕು ಎಂದೂ ಮೋದಿ ಹೇಳಿದರು. ಪ್ರತಿ ಜಿಲ್ಲೆಯಲ್ಲೂ ಆಯುರ್ವೇದ ಆಸ್ಪತ್ರೆ ಸ್ಥಾಪಿಸಲು ಆಯುಷ್‌ ಸಚಿವಾಲಯ ಚಿಂತನೆ ನಡೆಸುತ್ತಿದೆ. 3 ವರ್ಷಗಳಲ್ಲಿ 65 ಆಯುಷ್‌ ಆಸ್ಪತ್ರೆಗಳನ್ನು ತೆರೆಯಲಾಗಿದೆ ಎಂದರು.

ಪುನಶ್ಚೇತನದ ಶಪಥ: ನಾವು ಕಳೆದ 30 ವರ್ಷಗಳಲ್ಲಿ ಐಟಿ ಕ್ರಾಂತಿಯನ್ನು ನೋಡಿದ್ದೇವೆ. ಈಗ ಆಯುರ್ವೇದದ ಮೂಲಕ ಆರೋಗ್ಯ ಕ್ರಾಂತಿ ಆಗಬೇಕು. ಆಯುರ್ವೇದವನ್ನು ಬಲಿಷ್ಠಗೊಳಿಸಲು ಹಾಗೂ ಪುನಶ್ಚೇತನಗೊಳಿಸಲು ನಾವೆಲ್ಲ ಶಪಥ ಮಾಡೋಣ ಎಂದೂ ಇದೇ ಸಂದರ್ಭದಲ್ಲಿ ಮೋದಿ ಹೇಳಿದರು. ಆಯುರ್ವೇದ ಶಿಕ್ಷಣದ ಪ್ರತಿಯೊಂದು ಹಂತವನ್ನೂ ಪೂರ್ತಿಗೊಳಿಸಿದೊಡನೆ, ಅದಕ್ಕೆ ಪ್ರಮಾಣಪತ್ರ ನೀಡುವಂಥ ಕ್ರಮ ಜಾರಿಯಾಗಬೇಕು ಎಂದರು.

ಪರಂಪರೆ ಬಗ್ಗೆ ಹೆಮ್ಮೆಯಿರಲಿ: ತಾಜ್‌ ವಿವಾದಕ್ಕೆ ಪ್ರತಿಕ್ರಿಯೆ
ಇದೇ ವೇಳೆ, “ತಾಜ್‌ಮಹಲ್‌ ಭಾರತದ ಇತಿಹಾಸದ ಕಪ್ಪುಚುಕ್ಕೆ’ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ಸಂಗೀತ್‌ ಸೋಮ್‌ ನೀಡಿರುವ ಹೇಳಿಕೆ ಕುರಿತೂ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ. “ಇತಿಹಾಸ ಹಾಗೂ ಪರಂಪರೆಯ ಬಗ್ಗೆ ಹೆಮ್ಮೆ ಇಲ್ಲದೇ ಹೋದರೆ, ಅಂಥ ದೇಶವು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಅಷ್ಟೇ ಅಲ್ಲ, ಪರಂಪರೆಯನ್ನು ಮರೆತರೆ ದೀರ್ಘ‌ಕಾಲದಲ್ಲಿ ಆ ದೇಶವು ತನ್ನ ಅಸ್ಮಿತೆಯನ್ನೇ ಕಳೆದುಕೊಳ್ಳಲಿದೆ,’ ಎಂದಿದ್ದಾರೆ. ಈ ಮೂಲಕ ಶಾಸಕ ಸೋಮ್‌ ಹೇಳಿಕೆಗೆ ತಮ್ಮ ಸಹಮತವಿಲ್ಲ ಎಂಬುದನ್ನು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next