ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ಅಯುಕ್ತ’ ಸಿನಿಮಾ ತೆರೆಗೆ ಬರಲು ತಯಾರಾಗುತ್ತಿದೆ. “ಬಾಲಾಜಿ ಕ್ರಿಯೇಶನ್ಸ್’ ಬ್ಯಾನರ್‌ನಲ್ಲಿ ವಿಶ್ವಾಸ್. ಆರ್. ಗಂಗಡ್ಕರ್ ಬಂಡವಾಳ ಹೂಡಿ ನಿರ್ಮಿಸಿರುವ “ಅಯುಕ್ತ’ ಸಿನಿಮಾಕ್ಕೆ ಕನಸು ರಮೇಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಈಗಾಗಲೇ ಸದ್ದಿಲ್ಲದೆ “ಅಯುಕ್ತ’ ಸಿನಿಮಾದ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸ ಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ.
ಇದೇ ವೇಳೆ ಮಾತನಾಡಿದ ನಿರ್ದೇಶಕ ಕನಸು ರಮೇಶ್, “ಈ ಹಿಂದೆ ಸುಮಾರು 250ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ ಅನುಭವದಿಂದ “ಅಯುಕ್ತ’ ಸಿನಿಮಾವನ್ನು ನಿರ್ದೇಶಿಸಲು ಸುಲಭವಾಯಿತು. ಸಂಪಾದನೆಗಾಗಿ ಡಿಗ್ರಿ ಮಾಡ ಬೇಡಿ. ಬದಲಾಗಿ ಜ್ಞಾನಾರ್ಜನೆಗಾಗಿ ಡಿಗ್ರಿ ಮಾಡಿ ಎಂಬ ಸಂದೇಶ ಸಿನಿಮಾದಲ್ಲಿದೆ. ಹೆತ್ತವರು ತಮ್ಮ ಆಸೆ-ಆಕಾಂಕ್ಷೆಗಳನ್ನು ಮಕ್ಕಳ ಮೇಲೆ ಹೇರದೆ ಅವರಿಗೆ ಸ್ವಾತಂತ್ರ್ಯ ನೀಡಬೇಕು. ಮಕ್ಕಳ ಮೇಲೆ ಬಲವಂತವಾಗಿ ಒತ್ತಡ ಹಾಕಿದರೆ, ಅವರು ದಿಕ್ಕು ತಪ್ಪುವ ಸಾಧ್ಯತೆಯಿರುತ್ತದೆ’ ಎಂದು ಕಥಾಹಂದರದ ಬಗ್ಗೆ ವಿವರಣೆ ನೀಡಿದರು.
“ಅಯುಕ್ತ’ ಸಿನಿಮಾದಲ್ಲಿ ಶ್ರೀನಿವಾಸಗೌಡ, ಅದ್ದೂರಿ ಬಸವ, ಫೈಯು ಸುಫಿಯಾನ್ ಮೂವರು ನಾಯಕರಾಗಿ ಮತ್ತು ಅಮೃತಾ, ಸೌಂದರ್ಯಾ ಗೌಡ, ಋತ್ವಿಕಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಗಣೇಶ್ ರಾವ್ ಕೇಸರ್ಕರ್, ಮಿಮಿಕ್ರಿ ಗೋಪಿ, ಚನ್ನಬಸವ, ಸಿದ್ದನಾಗ, ಚಾಮುಂಡಿ ನಾಯಕ, ಶಿವಮಾಧು, ನಿಶಿತ್ ಪೂಜಾರಿ, ಜಾನ್ಸನ್, ರಮೇಶ್ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ