Advertisement
ಆಯುಧಪೂಜೆ ವೇಳೆ ವಾಹನ ಪೂಜೆಗೆ ಹೆಚ್ಚಾಗಿ ಸೇವಂತಿಗೆಯನ್ನು ಬಳಸುವುದರಿಂದ ಬಿಜೈ, ಬಂಟ್ಸ್‌ಹಾಸ್ಟೆಲ್, ಕಂಕನಾಡಿ, ಸ್ಟೇಟ್‌ಬ್ಯಾಂಕ್, ಹಂಪನಕಟ್ಟೆ, ಕೆ.ಎಸ್.ರಾವ್ ರಸ್ತೆ ಸಹಿತ ಎಲ್ಲೆಡೆಯೂ ಸೇವಂತಿಗೆಯ ಅಟ್ಟಿಗಳು ಕಾಣ ಸಿಗುತ್ತಿವೆ. ಇದರೊಂದಿಗೆ ಮಲ್ಲಿಗೆಗೂ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ವ್ಯಾಪಾರಸ್ಥರು. ದೊಡ್ಡ ಸೇವಂತಿಗೆ ಮಾಲೆಗೆ 80-100 ರೂ., ಸಣ್ಣ ಸೇವಂತಿಗೆ 70 ರೂ.ಗಳಿಗೆ ಕೆಲವೆಡೆ ಮಾರಾ ಟವಾಗುತ್ತಿದ್ದು, ಏಕರೂಪದ ದರ ಇಲ್ಲ.
ಸೇಬು, ಕಿತ್ತಳೆ, ದಾಳಿಂಬೆ, ಬಾಳೆಹಣ್ಣು ಮುಂತಾದ ಹಣ್ಣುಗಳ ಖರೀದಿಯೂ ಬಿರುಸಾಗಿದ್ದು, ಸೇಬು ಕೆಜಿಗೆ 150 ರೂ.ಗಳಿಂದ 200 ರೂ.ಗಳವರೆಗೆ ಮಾರಾಟ ವಾಗುತ್ತಿದೆ. ದಾಳಿಂಬೆಗೆ 70 ರೂ. ತನಕ ಬೆಲೆ ಇದೆ. ಆಯುಧ ಪೂಜೆಯಂದು ವಿಶೇಷ ತರಕಾರಿ ಭೋಜನ ಸಿದ್ಧಪಡಿಸುವುದಕ್ಕಾಗಿ ಹೆಸರುಕಾಳು, ತೊಂಡೆಕಾಯಿ, ಬೆಂಡೆ ಕಾಯಿ, ಸೌತೆ, ಕಡಲೆ ಬೀಜಗಳನ್ನು ಗ್ರಾಹಕರು ಖರೀದಿಸುತ್ತಿದ್ದಾರೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ. ಲಿಂಬೆ, ಹಸಿ ಮೆಣಸಿಗೆ ಬೇಡಿಕೆ
ಆಯುಧ ಪೂಜೆಯಂದು ಹೂವಿನ ಜತೆಗೆ ವಾಹನಗಳಿಗೆ ಕಟ್ಟಲು ಬೇಕಾಗುವ ಲಿಂಬೆ ಮತ್ತು ಹಸಿ ಮೆಣಸಿಗೂ ಬೇಡಿಕೆ ಕುದುರಿದ್ದು, ಲಿಂಬೆ ಮತ್ತು ಹಸಿಮೆಣಸಿನಕಾಯಿ ಮಾಲೆಗೆ 10 ರೂ. ದರ ನಿಗದಿಪಡಿಸಲಾಗಿದೆ. ಇದರೊಂದಿಗೆ ಸೀಯಾಳ ವ್ಯಾಪಾರವೂ ಬಿರುಸಾಗಿದ್ದು, ಕೆಂದಾಳೆಗೆ 40 ರೂ., ಸಾಮಾನ್ಯ ಸೀಯಾಳಕ್ಕೆ 35 ರೂ.ಗಳಿಗೆ ಮಾರಾಟವಾಗುತ್ತಿದೆ. ಸೋಮವಾರಕ್ಕೆ ಈ ದರ ಹೆಚ್ಚಾಗಲೂಬಹುದು ಎನ್ನುತ್ತಾರೆ ವ್ಯಾಪಾರಸ್ಥರು. ಕುಂಬಳ ಕಾಯಿಗೂ ಬೇಡಿಕೆ ಹೆಚ್ಚಿದ್ದು, ಮಳೆಯ ಕಾರಣ ಸ್ಥಳೀಯ ಕುಂಬಳಕಾಯಿ ಆವಕ ಕಡಿಮೆಯಾಗಿದೆ. ಆದರೆ ಘಟ್ಟ ಪ್ರದೇಶದಿಂದ ಮಂಗಳೂರಿಗೆ ಕುಂಬಳಕಾಯಿ ಆವಕವಾಗುತ್ತಿದ್ದು, ಪರಿ ಣಾಮ ಅದರ ಬೆಲೆ ಹೆಚ್ಚಳವಾಗಿದೆ.
ಆಯುಧ ಪೂಜೆಯ ಮುನ್ನಾದಿನವಾದ ರವಿವಾರ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ ವಿವಿಧ ಸೇವೆ ಸಲ್ಲಿಸಿ ಶ್ರೀದೇವರ ದರ್ಶನ ಪಡೆದರು.
Related Articles
ನಗರದ ವಿವಿಧ ದೇವಸ್ಥಾನಗಳಲ್ಲಿ ನವರಾತ್ರಿ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ನಡೆಯುತ್ತಿದ್ದು, ಲಕ್ಷಾಂತರ ಭಕ್ತರು ಶ್ರೀ ದೇವರ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ. ಸೋಮವಾರ ಜರಗುವ ಆಯುಧ ಪೂಜಾ ಕಾರ್ಯಕ್ರಮಕ್ಕೆ ನಗರದ ಪ್ರಮುಖ ದೇವಸ್ಥಾನಗಳಲ್ಲಿ ವಿವಿಧ ಪೂಜೆಗಳಿಗಾಗಿ ವಿಶೇಷ ಸಿದ್ಧತೆಗಳು ನಡೆಯುತ್ತಿವೆ. ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಆಯುಧ ಪೂಜಾ ದಿನವಾದ ಸೋಮವಾರ ಸರಸ್ವತೀ ದುರ್ಗಾಹೋಮ, ಶತ ಸೀಯಾಳ ಅಭಿಷೇಕ, ಶಿವಪೂಜೆ, ಶ್ರೀ ದೇವಿ ಪುಷ್ಪಾಲಂಕಾರ ಮಹಾಪೂಜೆ, ಉತ್ಸವಾದಿಗಳು ಜರಗಲಿವೆ. ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಮಹಾನವಮಿ, ಚಂಡಿಕಾ ಹೋಮ, ರಾತ್ರಿ ದೊಡ್ಡ ರಂಗಪೂಜೆ, ಸಣ್ಣ ರಥೋತ್ಸವ ಜರಗಲಿದೆ. ಆಯುಧ ಪೂಜೆ ಹಿನ್ನೆಲೆಯಲ್ಲಿ ವಾಹನ ಪೂಜೆಗಾಗಿ ಮಂಗಳಾದೇವಿ, ಶರವು ಶ್ರೀ ಮಹಾಗಣಪತಿ ದೇವಸ್ಥಾನ, ಕದ್ರಿ ಶ್ರೀ ಮಂಜುನಾಥ ದೇವಸ್ಥಾನಗಳಲ್ಲಿ ತಯಾರಿಗಳು ನಡೆಯುತ್ತಿವೆ. ವಾಹನಾದಿಗಳಿಗೆ ಪೂಜೆ ನೆರವೇರಿಸಲು ಜನ ಮುಂಜಾವಿನಿಂದಲೇ ದೇವಸ್ಥಾನಗಳಿಗೆ ಆಗಮಿಸಲಿರುವುದರಿಂದ ಮತ್ತು ಸಾವಿರಾರು ಮಂದಿ ವಾಹನಗಳಿಗೆ ಪೂಜೆ ನೆರವೇರಿಸುವುದರಿಂದ ದೇವಸ್ಥಾನಗಳಲ್ಲಿ ತಯಾರಿ ಬಿರುಸಾಗಿದೆ.
Advertisement