Advertisement

ಸೇಫ್ಟಿ ಪಿನ್‌ಗೂ ಆಯುಧಪೂಜೆ ಬೇಕಲ್ವೇ?

06:00 AM Oct 17, 2018 | |

ಹಳೇ ಕಾಲದ ಹೆಂಗಸರೆಲ್ಲ ಸೇಫ್ಟಿಪಿನ್‌ ಅನ್ನು ಮಾಂಗಲ್ಯದ ಸರಕ್ಕೋ, ಬಳೆಗೋ ಸಿಕ್ಕಿಸಿಕೊಂಡರೆ, ಈಗಿನವರು ವ್ಯಾನಿಟಿ ಬ್ಯಾಗ್‌ನಲ್ಲೋ, ಪರ್ಸ್‌ನಲ್ಲೋ ಇಟ್ಟುಕೊಂಡಿರುತ್ತಾರೆ. ಯಾಕೋ ಆಯುಧಪೂಜೆಯ ಈ ಹೊತ್ತಿನಲ್ಲಿ ಸೇಫ್ಟಿ ಪಿನ್‌ ನೆನಪಾಯಿತು…

Advertisement

ಸೇಫ್ಟಿ ಪಿನ್‌ಗೆ ಕನ್ನಡದಲ್ಲಿ ಏನೆನ್ನುತ್ತಾರೋ ಎಷ್ಟು ತಲೆ ಕೆರೆದುಕೊಂಡರೂ ಉತ್ತರ ಸಿಗಲಿಲ್ಲ. ಆದರೆ, ಎಷ್ಟೋ ಸಮಯ ಸಂದರ್ಭದಲ್ಲಿ ನಮಗೆ ಉಪಕಾರಿಯಾಗುವ ಈ ಪಿನ್ನು ಒಂದು ರೀತಿಯಲ್ಲಿ ಆಪತಾºಂಧವ ಎಂದರೆ ಅತಿಶಯೋಕ್ತಿಯೇನಿಲ್ಲ ಬಿಡಿ. ಆ ದುರ್ಗೆಯ ಕೈಯಲ್ಲಿ ಬೇರಾವುದೋ ಹರಿತದ ಆಯುಧ ಇದ್ದಿರಬಹುದು. ಆದರೆ, ಹೆಣ್ಣುಮಕ್ಕಳ ಕೈಯಲ್ಲಿ ಈ ಚೂಪು ಅಸ್ತ್ರವೇ ಪರಮಾಯುಧ.

  ಈಗಲೂ ಅದೆಷ್ಟೋ ಹೆಂಗಸರು ತಮ್ಮ ಮಾಂಗಲ್ಯದ ಸರಕ್ಕೆ, ಕೈಬಳೆಗಳಿಗೆ ಕೊಂಬೆ ಹಿಡಿದು ಜೋತಾಡುತ್ತಿರುವ ಮಂಗಗಳಂತೆ ನೇತಾಡುತ್ತಿರುವ ಸೇಫ್ಟಿಪಿನ್ನುಗಳನ್ನು ಸಿಕ್ಕಿಸಿಕೊಂಡಿರುತ್ತಾರೆ. ಊಟ ಆಗುತ್ತಿದ್ದಂತೆಯೇ ಸರದಲ್ಲಿರೋ ಅಥವಾ ಬಳೆಯಲ್ಲಿರೋ ಪಿನ್ನು ತೆಗೆದು ಹಲ್ಲಿನ ಸಂದಿಯಲ್ಲಿ ಸಿಕ್ಕಿಕೊಂಡ ಆಹಾರ ಪದಾರ್ಥಗಳನ್ನು ಹೆಕ್ಕಿ ತೆಗೆಯುವ ಟೂತ್‌ಪಿಕ್‌ ಆಗಿಯೂ ಇದನ್ನು ಬಳಸುತ್ತಾರೆ. ಇಯರ್‌ ಬಡ್‌ ಆಗಿ ಕಿವಿಯೊಳಗಿನ ಗುಗ್ಗೆ ತೆಗೆಯುವ ಕೆಲಸಕ್ಕೂ ಸೇಫ್ಟಿ ಪಿನ್ನೇ ಬೇಕು. ಬಾಳಕಕ್ಕೆ, ಮಿರ್ಚಿ ಮಾಡುವುದಕ್ಕೆ ಮೆಣಸಿನಕಾಯಿ ಸೀಳಲು ಪಿನ್ನೇ ಆಧಾರ. ಉಗುರಿನ ಸಂದಿಯ ಕಸ ತೆಗೆಯಲು, ಕೆಲವೊಮ್ಮೆ ಉಗುರು ಸುತ್ತೋ ಅಥವಾ ಗಾಯವೋ ಆದಾಗ ಅದು ಕೀವು ತುಂಬಿ ಊದಿಕೊಂಡು ಒದ್ದಾಡುವಾಗ, ಪಿನ್ನು ಚುಚ್ಚಿ ಅದನ್ನು ಹೊರಹೋಗಲು ಅನುವು ಮಾಡಿಕೊಡುತ್ತಿದ್ದರು. ಹೂವು ಮುಡಿಯಲು ಹೇರ್‌ಪಿನ್‌ ಸಿಗದಿದ್ದ ಕಾಲದಲ್ಲಿ ಪಿನ್ನುಗಳೇ ಆಶ್ರಯ. ಗುಲಾಬಿ, ಸಂಪಿಗೆ, ಕೇದಿಗೆ ಹೂವುಗಳನ್ನು ಮುಡಿಯಲು ಪಿನ್ನುಗಳಿಗೇ ಮೊದಲ ಪ್ರಾಶಸ್ತ. ಬ್ಲೌಸು, ಶರ್ಟು, ಪೆಟ್ಟಿಕೋಟು ಅಂಗಿಯ ಬಟನ್‌ಗಳು ಅಥವಾ ಹುಕ್ಕುಗಳು ಕಿತ್ತು ಹೋದರೆ, ಮತ್ತೆ ಗುಂಡಿ ಹೊಲೆಯುವ ತನಕ ಪಿನ್ನೇ ಗತಿ. ಕೊನೆ ಕೊನೆಗೆ ಬಟ್ಟೆಗಳ ಮೇಲೆ ಹುಕ್ಕು, ಗುಂಡಿಗಳಿಗಿಂತ ಹೆಚ್ಚಾಗಿ ಪಿನ್ನಿನ ರಾಜ್ಯಭಾರವೇ ಹೆಚ್ಚಾಗುತ್ತಿತ್ತು. ಕಾಲಲ್ಲಿ ಮುಳ್ಳು ಚುಚ್ಚಿದಾಗ ಆ ಭಾಗಕ್ಕೆ ಎಕ್ಕೆ ಹಾಲನ್ನು ಹಾಕಿ ಪಿನ್ನಿನಿಂದ ಆ ಜಾಗವನ್ನು ಸುತ್ತಲು ಕೆದಕುತ್ತಾ ಕೊನೆಗೆ ಮುಳ್ಳಿನ ಬುಡದವರೆಗೆ ಹೋಗಿ, ಅಲ್ಲಾಡಿಸಿ ಮುಳ್ಳನ್ನು ಎಬ್ಬಿಸಿ ಹೊರಹಾಕುತ್ತಿದ್ದರು.

  ಲಂಗ, ಪೈಜಾಮಾಗಳಿಗೆ ಈಗಲೂ ಲಾಡಿ ಏರಿಸಲು ಪಿನ್ನೇ ಬಹೋಪಯೋಗಿ. ಇಂದಿನ ಕಾಲದ ಹೆಣ್ಣುಮಕ್ಕಳಿಗಂತೂ ಸೀರೆ ಉಡಲು ಕನಿಷ್ಠ ಒಂದು ಡಜನ್ನಾದರೂ ಪಿನ್ನು ಬೇಕು ಬಿಡಿ. ಸಡನ್ನಾಗಿ ಬ್ಯಾಗು ಹರಿದಾಗ, ಚಪ್ಪಲಿ ಕಿತ್ತುಹೋದಾಗ, ಜಿಪ್ಪು ಕೆಟ್ಟು ಹೋದಾಗ ಪಿನ್ನುಗಳೇ ಆಧಾರ. ಪುಂಡ- ಪೋಕರಿಗಳು ಬಸ್ಸಿನ ರಶ್ಶಿನಲ್ಲಿ, ಸಿನಿಮಾ ಮಂದಿರದಲ್ಲಿ ಕೆಲವೊಮ್ಮೆ ಚೇಷ್ಟೆ ಮಾಡಲು ಮುಂದಾದಾಗ ಎಷ್ಟೋ ಸಲ ಈ ಸೇಫ್ಟಿಪಿನ್ನೇ ಬಚಾವು ಮಾಡಿದ್ದಿದೆ. ಕೆಲವೊಮ್ಮೆ ಗೆಜ್ಜೆಗೆ, ಸರಕ್ಕೆ… ಹೀಗೆ ಎಷ್ಟೋ ಆಭರಣಗಳಿಗೆ ಕೊಂಡಿಯಂತೆ ಕಾರ್ಯನಿರ್ವಸುತ್ತದೆ. ಬಟ್ಟೆಯ ಮೇಲಿನ ಹೊಲಿಗೆ ಎಬ್ಬಿಸಲು, ಚಿಕ್ಕ ಪುಟ್ಟ ಬೀಗದ ಕೀಲಿಕೈ ಕಳೆದಾಗ ಈ ಪಿನ್ನುಗಳಿಂದಲೇ ಎಷ್ಟೋ ಸಲ ತಿರು ತೆರೆಯುವುದುಂಟು. ಈಗಿನ ಕಾಲದವರು ನಾಜೂಕಾಗಿ ತಮ್ಮ ಪರ್ಸುಗಳಲ್ಲಿ, ವ್ಯಾನಿಟಿ ಬ್ಯಾಗಿನಲ್ಲಿ ಇದನ್ನು ಮರೆಯದೆ ಇಟ್ಟುಕೊಂಡಿರುತ್ತಾರೆ.  ಚೋಟುದ್ದವಿರುವ ಈ ಸೇಫ್ಟಿ ಪಿನ್ನೆಂಬ ಪುಟ್ಟ ವಸ್ತು, ದೈನಂದಿನ ಕೆಲಸಗಳಲ್ಲಿ ಅದೆಷ್ಟು ರೀತಿಯಲ್ಲಿ ಉಪಯೋಗವಾಗುತ್ತದೆ ಎಂಬುದೇ ಸೋಜಿಗ.

  ವಿಜಯ ದಶಮಿಯ ಈ ಹೊತ್ತಿನಲ್ಲಿ ದೇವಿಯ ಆಯುಧಕ್ಕೆ ಹೂ ಮುಡಿಸುತ್ತೇವೆ. ಬೇರೆಲ್ಲ ಆಯುಧಗಳಿಗೂ ಕುಂಕುವಿಟ್ಟು, ಕೈಮುಗಿಯುತ್ತೇವೆ. ಹೆಣ್ಣನ್ನು ಒಂದಲ್ಲಾ ಒಂದು ರೀತಿಯಲ್ಲಿ ರಕ್ಷಿಸುತ್ತಲೇ ಇರುವ ಸೇಫ್ಟಿ ಪಿನ್‌ಗೂ ಪೂಜೆಯಾದರೆ ಹೇಗೆ ಎಂಬ ಪ್ರಶ್ನೆ ಮೂಡಿತಷ್ಟೇ.

Advertisement

ನಳಿನಿ ಟಿ. ಭೀಮಪ್ಪ

Advertisement

Udayavani is now on Telegram. Click here to join our channel and stay updated with the latest news.

Next