Advertisement

ಅಯೋಧ್ಯಾಕಾಂಡ: ಸರಯೂ ತೀರದ ಸಾಮರಸ್ಯದ ಚಿತ್ರಗಳು

09:56 AM Nov 24, 2019 | Lakshmi GovindaRaj |

ಫೋಟೊಗ್ರಫಿ ಮಾಡಲೆಂದೇ ಸಾಕಷ್ಟು ಸಲ ಅಯೋಧ್ಯೆಯಲ್ಲಿ ಓಡಾಡಿದ್ದೆ. ಮೊದಲ ಬಾರಿಗೆ ಹೋದಾಗ, ಅಲ್ಲೊಬ್ಬ ಪುಟ್ಟ ಹುಡುಗ ಬರಿಮೈಯಲ್ಲಿ ನಿಂತಿದ್ದ. “ಇಕ್ಬಾಲ್‌ ಅನ್ಸಾರಿ ಅಂತ ಇದ್ದಾರಲ್ಲ, ಅವರು ಇಲ್ಲಿ ಎಲ್ಲಿರ್ತಾರೆ?’ ಅಂತ ಕೇಳಿದೆ. ನಿಮಿಷದಲ್ಲಿ ಸಾಗಬಹುದಾದ, ಕಣ್ಣಳತೆಯ ದೂರಕ್ಕೆ ಬೆರಳು ತೋರಿಸಿದ: “ಅವರೇ ಇಕ್ಬಾಲ್‌’. ಅವರು, ರಾಮಮಂದಿರದ ಕಟ್ಟೆಯ ಮೇಲೆ, ಕೆಲ ಪುರೋಹಿತರ ಜತೆ ಹರಟುತ್ತಾ ಕುಳಿತಿದ್ದರು.

Advertisement

“ನಿಮ್ಮನ್ನು ಸಂದರ್ಶಿಸಲು ಬೆಂಗಳೂರಿನಿಂದ ಬಂದಿದ್ದೇನೆ’ ಎಂದೆ. ಇಕ್ಬಾಲ್‌ ಆತ್ಮೀಯವಾಗಿ, 20-30 ಅಡಿ ವಿಸ್ತಾರವಿದ್ದ ತಮ್ಮ ಪುಟ್ಟ ಮನೆಯೊಳಗೆ ಕೂರಿಸಿಕೊಂಡು, ಮಾತುಕತೆಯಲ್ಲಿ ಮುಳುಗಿದರು. ಬಳಿಕ, ಒಂದು ಚಹಾದ ಪೆಟ್ಟಿಗೆ ಅಂಗಡಿಗೆ ಕರಕೊಂಡು ಬಂದರು. ಅಷ್ಟರಲ್ಲಾಗಲೇ, ರಾಮಮಂದಿರದ ಪುರೋಹಿತರು ಅಲ್ಲಿದ್ದರು. ಅವರೆಲ್ಲ ಸೋದರರಂತೆ ಒಟ್ಟಿಗೆ ಚಹಾ ಕುಡಿಯುವಾಗ, ಶತಮಾನಗಳ ಬಾಂಧವ್ಯದ ಚಿತ್ರ ಮೂಡುತ್ತಿತ್ತು.

“ನೋಡಿ, ಕೋರ್ಟಿನ ಕಣ್ಣಿಗೆ ನಾವೆಲ್ಲ ದಾವೆದಾರರು. ಇಲ್ಲಿ ನಿತ್ಯ ಚಹಾ ಕುಡಿಯುವಾಗ ಒಡನಾಡಿಗಳು. ಬಾಲ್ಯದಿಂದಲೂ ಇದೇ ಸ್ನೇಹದಿಂದಲೇ ನಾವು ಬೆಳೆದವರು. ಆದರೆ, ಇಲ್ಲಿನ ವಿಚಾರ ಎಲ್ಲಿಗೋ ಹೋಗಿ, ಇನ್ನೆಲ್ಲಿಗೋ ಮುಟ್ಟಿದೆ’ ಎಂದು ಅವರೆಲ್ಲ ಹೇಳುವಾಗ, ತಾಜಾ ಚಹಾ ಕೈಸೇರಿತ್ತು. “ಅಯೋಧ್ಯೆ ಎಂದರೆ, ಯಾರೂ ಗೆಲ್ಲಲಾಗದ, ಜಗಳವೇ ಇಲ್ಲದ ಪ್ರದೇಶ’ ಎಂಬುದನ್ನು ಕೇಳಿದ್ದೆ. ಆ ಪುಟ್ಟ ಪಟ್ಟಣ ಹಾಗೆಯೇ ರೂಪುಗೊಂಡಿದೆ ಕೂಡ.

ನಾನು ಹೋದಾಗ ರಂಜಾನ್‌ ಮಾಸ. ಅಲ್ಲಿನ ಪ್ರಧಾನ ಅರ್ಚಕರಾದ ಮಹಾಂತ ಜ್ಞಾನದಾಸ್‌, ಇಫ್ತಾರ್‌ ಕೂಟವನ್ನು ಏರ್ಪಡಿಸಿದ್ದರು. “ಅವರು ನೂರು ಜನ ಮುಸಲ್ಮಾನರನ್ನು ಕರೆದರೆ, ಸಾವಿರಾರು ಬಾಂಧವರು ಅವರ ಸುತ್ತ ನೆರೆಯುತ್ತಾರೆ’ ಎನ್ನುವ ಸ್ಥಳೀಯನೊಬ್ಬನ ಮಾತು, ಅವರ ಅನ್ಯೋನ್ಯತೆಗೆ ಕನ್ನಡಿ ಹಿಡಿದಂತಿತ್ತು. ಮೂರ್ನಾಲ್ಕು ವರುಷದ ಕೆಳಗೆ ಅಯೋಧ್ಯೆಯಲ್ಲಿ ಸರಿಯಾದ ಹೋಟೆಲ್ಲುಗಳೇ ಇದ್ದಿರಲಿಲ್ಲ. ನಾವು ಕುಳಿತ ಆಟೋದ ಮುಸಲ್ಮಾನ ಡ್ರೈವರ್‌ಗೆ, “ಇಲ್ಲಿ ನಾನ್‌ವೆಜ್‌ ಊಟ ಸಿಗುವ ಹೋಟೆಲ್ಲು ಎಲ್ಲಿದೆ?’ ಎಂದು ಕೇಳಿದೆ.

ಅವನ ಮುಖಭಾವವೇ ಬದಲಾಯಿತು. “ರಾಮ ಹುಟ್ಟಿದ ಜಾಗಕ್ಕೆ ಬಂದು ಯಾರಾದರೂ ನಾನ್‌ವೆಜ್‌ ಬಯಸುತ್ತಾರಾ ಸಾರ್‌…? ಇಲ್ಲಿ ನಾವುಗಳೇ ಮಾಂಸಾಹಾರ ಮುಟ್ಟೋದಿಲ್ಲ’ ಎಂದಾಗ, ಪ್ರಶ್ನೆ ಕೇಳಿದ್ದ ನನಗೇ ಮುಜುಗರ ಹುಟ್ಟಿತು. ರಾಮನನ್ನು ನೋಡಲೆಂದೇ ಸಹಸ್ರಾರು ಸಾಧುಗಳು ಅಲ್ಲಿಗೆ ಬರುತ್ತಾರೆ. ಹಾಗೆ ಬಂದವರಲ್ಲಿ ಅನೇಕರು, “ಖಡಾವು’ ಚಪ್ಪಲಿಗಾಗಿ ಒಂದು ಅಂಗಡಿಗೆ ಹೋಗು ತ್ತಾರೆ. ಖಡಾವು ಎಂದರೆ, ವಿವಿಧ ಚಿತ್ತಾರ ಗಳನ್ನು ಮೂಡಿಸಿ, ಮರದಿಂದ ರೂಪಿಸಿದ ಸಾಧುಗಳ ಚಪ್ಪಲಿ.

Advertisement

ಅಯೂಬ್‌ಖಾನ್‌ ಎನ್ನುವವರ ಕುಟುಂಬ ಐದು ತಲೆಮಾರಿ ನಿಂದ, ಸುಂದರ ಖಡಾವುಗಳನ್ನು ಸಿದ್ಧಮಾ ಡುತ್ತಾ ಬಂದಿದೆ. ಅದರ ಆಚೆಗೆ ಸ್ವಲ್ಪವೇ ದೂರದಲ್ಲಿ ಬಾಬು ಖಾನ್‌ನ ಟೈಲರ್‌ ಅಂಗಡಿ ಕಾಣಿಸುತ್ತದೆ. ಅವನು “ಝಗ್‌ ಝಗ್‌’ ಎನ್ನುತ್ತಾ, ಮಶೀನು ತುಳಿಯು ವುದೇ ಶ್ರೀರಾಮ ನಿಗಾಗಿ. ಅಯೋಧ್ಯೆಯ ರಾಮಲಲ್ಲಾ ವಿಗ್ರಹ, ಬಾಬು ಸಾಹೇಬರು ಹೊಲಿದು ಕೊಟ್ಟ ಬಟ್ಟೆಯಿಂದಲೇ ಅಲಂಕೃತ ವಾಗುತ್ತದೆ. ಸಂಜೆಯಾದರೆ, ಆ ಪುಣ್ಯಾತ್ಮನ ಮನೆಯಿಂದಲೇ ಹನುಮಾನ್‌ ಚಾಲೀಸ ಕೇಳಿಸುತ್ತದೆ. ಇದೇ ಅಲ್ಲವೇ, ನಮ್ಮ ಅಯೋಧ್ಯೆ!

* ಸುಧೀರ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next