Advertisement

ರಾಮ ಮಂದಿರ ಟ್ರಸ್ಟ್‌ ರಚನೆ ಪ್ರಕ್ರಿಯೆ ಶುರು

09:47 AM Nov 13, 2019 | Hari Prasad |

ಹೊಸದಿಲ್ಲಿ/ಲಕ್ನೋ: ಅಯೋಧ್ಯೆಯು ರಾಮನದ್ದೇ ಎಂಬ ತೀರ್ಪು ಹೊರಬಿದ್ದ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ ತೀರ್ಪಿನಂತೆ ರಾಮ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್‌ ರಚನೆ ಪ್ರಕ್ರಿಯೆಯನ್ನು ಕೇಂದ್ರ ಸರಕಾರ ಸೋಮವಾರ ಆರಂಭಿಸಿದೆ. ಯಾವ ರೀತಿಯಲ್ಲಿ ಟ್ರಸ್ಟ್‌ ಇರಬೇಕು ಎಂಬ ಬಗ್ಗೆ ತೀರ್ಪಿನ ಪ್ರತಿಯನ್ನು ಹಿರಿಯ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಲು ಶುರು ಮಾಡಿದೆ. ಅಟಾರ್ನಿ ಜನರಲ್‌, ಕಾನೂನು ಸಚಿವಾಲಯದ ಅಭಿ ಪ್ರಾಯ ಪಡೆದುಕೊಳ್ಳಲಾಗುತ್ತಿದೆ. ಗೃಹ ಸಚಿವಾಲಯ, ಸಂಸ್ಕೃತಿ ಸಚಿವಾಲಯ ಟ್ರಸ್ಟ್‌ನಲ್ಲಿ ಸೇರ್ಪಡೆಯಾಗಲಿದೆಯೋ ಇಲ್ಲವೋ ಎಂಬ ವಿಚಾರ ತತ್‌ಕ್ಷಣಕ್ಕೆ ಗೊತ್ತಾಗಿಲ್ಲ.

Advertisement

17ರಂದು ನಿರ್ಧಾರ: 2.77 ಎಕರೆ ಜಮೀನು ರಾಮ ಲಲ್ಲಾನಿಗೆ ಸೇರಬೇಕು ಎಂಬ ಸುಪ್ರೀಂಕೋರ್ಟ್‌ ನೀಡಿದ ತೀರ್ಪಿನ ಬಗ್ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕೇ ಬೇಡವೇ ಎಂಬ ಬಗ್ಗೆ ನ.17ರಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿರ್ಧರಿಸಲಿದೆ. ಹೊಸದಿಲ್ಲಿಯಲ್ಲಿ ಮಾತನಾಡಿದ ಹಿರಿಯ ನ್ಯಾಯವಾದಿ ಝಫ‌ರ್ಯಾಬ್‌ ಜಿಲಾನಿ ಈ ಮಾಹಿತಿ ನೀಡಿದ್ದು, ಮುಂದಿನ ಭಾನುವಾರ ನಡೆಯುವ ಸಭೆಯಲ್ಲಿ ನಿರ್ಧಾರ ಹೊರಬೀಳಲಿದೆ ಎಂದಿದ್ದಾರೆ.

ಮಾರ್ಚ್‌ನಲ್ಲೇ ಒಪ್ಪಿತ್ತು: ವಿವಾದಿತ ಭೂಮಿಯನ್ನು ಬಿಟ್ಟುಕೊಡಲು ಕಳೆದ ಮಾರ್ಚ್‌ನಲ್ಲೇ ಸುನ್ನಿ ವಕ್ಫ್ ಬೋರ್ಡ್‌ ಒಪ್ಪಿತ್ತು ಎಂಬ ಅಂಶ ಈಗ ಬಹಿರಂಗವಾಗಿದೆ. ರಾಷ್ಟ್ರೀಯ ಸಾಮರಸ್ಯದ ಹಿತಾಸಕ್ತಿಯಿಂದ ಈ ಭೂಮಿಯನ್ನು ಬಿಟ್ಟುಕೊಡಲು ನಾವು ಸಿದ್ಧರಿದ್ದೇವೆ. ಆದರೆ ನಮಗೆ ಪರ್ಯಾಯ ಜಾಗದಲ್ಲಿ ಮಸೀದಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಕೋರಿ ವಕ್ಫ್ ಬೋರ್ಡ್‌ ಮಾರ್ಚ್‌ನಲ್ಲೇ ಸುಪ್ರೀಂ ಕೋರ್ಟ್‌ ಗೆ ಪತ್ರವನ್ನು ಬರೆದಿತ್ತು.

ಯೋಗಿಗೆ ಅಭಿನಂದನೆ: ತೀರ್ಪಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಅವರ ಸಂಪುಟದ ಸಹೋದ್ಯೋಗಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ನ್ಯಾಯಮೂರ್ತಿಗಳಿಂದ ಮೆಚ್ಚುಗೆ: ಅಯೋಧ್ಯೆ 2.77 ಎಕರೆ ಭೂವಿವಾದ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಜವಾಬ್ದಾರಿಯುತವಾಗಿ ನಿರ್ವಹಿಸಿದ್ದಾರೆ ಎಂದು ನಿಯೋಜಿತ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ ಶ್ಲಾಘಿಸಿದ್ದಾರೆ. ಗುವಾಹಟಿಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಹಂತದಲ್ಲಿ ತಪ್ಪು ನುಸುಳದಂತೆ ಅವರು ಎಚ್ಚರಿಕೆ ವಹಿಸಿದ್ದರು. ನ್ಯಾ.ಗೊಗೋಯ್‌ ಜತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಅವರು ಹೊಂದಿರುವ ದೃಢ ಮನೋಭಾವ, ಪ್ರಕರಣಗಳನ್ನು ನಿಭಾಯಿಸುವ ರೀತಿ ಮೆಚ್ಚತಕ್ಕದ್ದು ಎಂದೂ ನ್ಯಾ. ಬೋಬ್ಡೆ ಹೇಳಿದರು.

Advertisement

ಪ್ರಜಾಪ್ರಭುತ್ವವು ಎಲ್ಲ ಪ್ರಜೆಗಳ ಕಲ್ಯಾಣಕ್ಕಾಗಿ ರಚಿತವಾಗಿದೆ. ಸ್ವತಂತ್ರ ನ್ಯಾಯಾಂಗವನ್ನು ಅದರ ಸದುಪಯೋಗಕ್ಕಾಗಿಯೇ ಬಳಕೆ ಮಾಡಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಮತ್ತೂಬ್ಬ ನ್ಯಾಯಮೂರ್ತಿ ಅರುಣ್‌ ಮಿಶ್ರಾ, ದೇಶ ಎದುರಿಸುತ್ತಿದ್ದ ಪ್ರಮುಖ ಸಮಸ್ಯೆಯನ್ನು ಸಿಜೆಐ ನಿವಾರಿಸಿದ್ದಾರೆ ಎಂದು ಶ್ಲಾಘಿಸಿದರು. ಎರಡರಿಂದ ಮೂರು ವಾರಗಳಲ್ಲಿ 1 ಸಾವಿರ ಪುಟಗಳ ತೀರ್ಪನ್ನು ಬರೆದಿರುವುದು ಅಸಾಧಾರಣ ಸಾಧನೆ ಎಂದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌, ಈ ವಿಚಾರ ಕುರಿತು ಮಾತನಾಡಲು ನಿರಾಕರಿಸಿದರು.

ವಿವಾದಿತ ಸ್ಥಳ ಕೇವಲ 0.3 ಎಕರೆ!
ಅಯೋಧ್ಯೆ ಪ್ರಕರಣದಲ್ಲಿ ವಿವಾದಿತ ಜಾಗ, ಮಾಧ್ಯಮಗಳಲ್ಲಿ ವರದಿಯಾದಂತೆ 2.77 ಎಕರೆಯಲ್ಲ. ಅದು, ಕೇವಲ 0.309 ಅಥವಾ 13,500 ಚದರಡಿಯ ಜಾಗವಷ್ಟೇ ಎಂದು ಈ ಪ್ರಕರಣದ ಬಗ್ಗೆ ನಿಖರ ಮಾಹಿತಿ ಇರುವ ವಕೀಲರು ತಿಳಿಸಿದ್ದಾರೆ. ಅಯೋಧ್ಯೆ ಪ್ರಕರಣದಲ್ಲಿ 2010ರಲ್ಲಿ ಅಲಹಾಬಾದ್‌ ಹೈಕೋರ್ಟ್‌ ತೀರ್ಪು ಹೊರಬಿದ್ದಾಗ, ಮಾಧ್ಯಮಗಳಲ್ಲಿ ವಿವಾದಿತ ಸ್ಥಳ 2.77 ಎಕರೆ ಎಂದು ತಪ್ಪಾಗಿ ವರದಿಯಾಗಿತ್ತು. ಆಗಿನಿಂದಲೂ ಅದು ಹಾಗೆಯೇ ಮುಂದುವರಿದಿದೆ ಎಂದಿರುವ ಅವರು, 13,500 ಚದರಡಿಯಲ್ಲೇ, ಈ ಹಿಂದಿದ್ದ ಬಾಬ್ರಿ ಮಸೀದಿಯ ಒಳ, ಹೊರ ಆವರಣ, ಸೀತಾ ಕೀ ರಸೋಯಿ ಇವೆ. ಅದರಲ್ಲೇ ಇದ್ದ ರಾಮ ಚಬೂಚರಾವನ್ನು ಬಾಬ್ರಿ ಮಸೀದಿ ಧ್ವಂಸದ ವೇಳೆಯೇ ನೆಲಸಮ ಮಾಡಲಾಗಿತ್ತು ಎಂದಿದ್ದಾರೆ.

27 ವರ್ಷಗಳ ವ್ರತಕ್ಕೆ ತೆರೆ
ಅಯೋಧ್ಯೆ ವಿವಾದ ಬಗೆಹರಿಯುವಲ್ಲಿಯ ವರೆಗೆ ಹಾಲು-ಹಣ್ಣು ಮಾತ್ರ ಸೇವಿಸುತ್ತೇನೆ ಎಂದು ಶಪಥ ಮಾಡಿ ವ್ರತದಲ್ಲಿದ್ದ ಜಬಲ್ಪುರದ ನಿವೃತ್ತ ಸಂಸ್ಕೃತ ಅಧ್ಯಾಪಕಿ ಊರ್ಮಿಳಾ ಚತುರ್ವೇದಿ (81) ಸೋಮವಾರ ತಮ್ಮ ವ್ರತ ಮುಕ್ತಾಯ ಹಾಡಿದ್ದಾರೆ. ಸುಪ್ರೀಂಕೋರ್ಟ್‌ ತೀರ್ಪಿನ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ‘1992ರಲ್ಲಿ ನನ್ನ ತಾಯಿ ಹಾಲು-ಹಣ್ಣು ಸೇವನೆ ಶುರು ಮಾಡಿದ್ದರು. ಆಗ ಅವರಿಗೆ 54 ವರ್ಷ. ತೀರ್ಪಿನಿಂದಾಗಿ ಅವರಿಗೆ ಸಂತೋಷವಾಗಿದೆ’ ಎಂದು ಊರ್ಮಿಳಾ ಪುತ್ರ ಅಮಿತ್‌ ಚತುರ್ವೇದಿ ಹೇಳಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳಿಗೆ ಧನ್ಯವಾದ ಹೇಳಿ ಪತ್ರ ಬರೆಯುವಂತೆಯೂ ತಮ್ಮ ತಾಯಿ ಸೂಚಿಸಿದ್ದಾರೆ ಎಂದಿದ್ದಾರೆ ಅಮಿತ್‌. 1992ಡಿ.6ರಂದು ಬಾಬರಿ ಮಸೀದಿ ಧ್ವಂಸವಾದ ಬಳಿಕ ಅವರು ನೊಂದಿದ್ದರು. ದೇಗುಲ ವಿವಾದ ಇತ್ಯರ್ಥವಾಗುವ ವರೆಗೆ ಹಾಲು-ಹಣ್ಣು ಮಾತ್ರ ಸೇವಿಸುತ್ತಿರುವುದಾಗಿ ಶಪಥ ಮಾಡಿದ್ದರು.

ಇಂದು ಕಾರ್ತಿಕ ಪೂರ್ಣಿಮೆ
ತೀರ್ಪಿನ ಬಳಿಕ ಮೊದಲ ಕಾರ್ತಿಕ ಪೂರ್ಣಿಮೆಯ ಪವಿತ್ರ ದಿನ ಮಂಗಳವಾರ (ನ.12) ಆಗಿರಲಿದೆ. ಸಾಮಾನ್ಯವಾಗಿ ಪ್ರತಿ ದಿನ ಎಂಟು ಸಾವಿರ ಮಂದಿ ಅಯೋಧ್ಯೆ, ರಾಮಜನ್ಮಭೂಮಿಗೆ ಭೇಟಿ ನೀಡುತ್ತಾರೆ. ನ.12ರಂದು ಬರೋಬ್ಬರಿ ಐದು ಲಕ್ಷ ಮಂದಿ ಭೇಟಿ ನೀಡುವ ಸಾಧ್ಯತೆ ಇದೆ. ನಯಾ ಘಾಟ್‌, ಸರಯೂ ನದಿ ತೀರದಲ್ಲಿರುವ ರಾಮ್‌ ಕಿ ಪಾಡಿ ಮತ್ತು ಇತರ ಸ್ಥಳಗಳಲ್ಲಿ ಶ್ರದ್ಧಾಳುಗಳು ಪವಿತ್ರ ಸ್ನಾನ ಮಾಡಲಿದ್ದಾರೆ ಎಂದು ಅಯೋಧ್ಯೆ ಜಿಲ್ಲಾಧಿಕಾರಿ ಅಂಜು ಕುಮಾರ್‌ ಝಾ ಹೇಳಿದ್ದಾರೆ.

ಭಕ್ತರ ಅನುಕೂಲಕ್ಕಾಗಿ 18 ಸ್ಥಳಗಳಲ್ಲಿ 20 ಮೆಡಿಕಲ್‌ ಕ್ಯಾಂಪ್‌ಗ್ಳನ್ನು, 30 ಸಂಚಾರಿ ಶೌಚಾಲಯಗಳನ್ನು ಸ್ಥಾಪಿಸಲಾಗಿದೆ. ‘ದೇವ ದೀಪಾವಳಿ’ ಎಂದು ಕರೆಯಲಾಗುವ ಈ ಸಂದರ್ಭದಲ್ಲಿ ಸಾವಿರಾರು ದೀಪಗಳನ್ನು ಬೆಳಗಿಸಲಾಗುತ್ತದೆ. ಅಂದರೆ ದೇವತೆಗಳೇ ದೀಪಾವಳಿ ಆಚರಿಸುತ್ತಾರೆ ಎಂಬ ನಂಬಿಕೆ. ದೀಪಾವಳಿ ಅನಂತರ ಸರಿಯಾಗಿ 15 ದಿನಗಳ ಬಳಿಕ ಅದು ಬರುತ್ತದೆ.

ತೀರ್ಪು ಅತ್ಯಂತ ದೋಷಪೂರಿತವಾಗಿದೆ. ಅದು ರಚನಾತ್ಮಕ ತೀರ್ಪು ಅಲ್ಲದೇ ಇರುವುದರಿಂದ ಅದನ್ನು ಪರಿಶೀಲನೆ ಮಾಡುವ ಬಗ್ಗೆ ಮೇಲ್ಮನವಿ ಅರ್ಜಿ ಸಲ್ಲಿಸುವ ಅಗತ್ಯವಿದೆ.
– ವಜಾಹತ್‌ ಹಬೀಬುಲ್ಲಾ, ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ನಿವೃತ್ತ ಆಯುಕ್ತ

ಸುಪ್ರೀಂಕೋರ್ಟ್‌ ತೀರ್ಪನ್ನು ಎಲ್ಲರೂ ಮುಕ್ತ ಮನಸ್ಸಿನಿಂದ ಸ್ವಾಗತಿಸಿದ್ದಾರೆ. ತೀರ್ಪಿನ ಬಳಿಕ ಎಲ್ಲರೂ ಪ್ರೌಢಿಮೆಯಿಂದ ವರ್ತಿಸಿದ್ದಾರೆ. ದೀರ್ಘ‌ಕಾಲಿಕವಾಗಿ ಇದ್ದ ವ್ಯಾಜ್ಯವನ್ನು ಬಗೆಹರಿಸಿದ್ದಾರೆ.
– ಶ್ರೀ ರವಿಶಂಕರ ಗುರೂಜಿ, ಆರ್ಟ್‌ ಆಫ್ ಲಿವಿಂಗ್‌ ಸಂಸ್ಥಾಪಕ

Advertisement

Udayavani is now on Telegram. Click here to join our channel and stay updated with the latest news.

Next