Advertisement
ಮಹರ್ಷಿ ವಾಲ್ಮೀಕಿಗಳು ರಚಿಸಿರುವ ರಾಮಾಯಣ ಮಹಾಕಾವ್ಯದಲ್ಲಿ, ಅವರು ತಿಳಿಸಿರುವ ಹಲವಾರು ಪ್ರದೇಶಗಳು, ನದಿ, ಪರ್ವತಗಳನ್ನು ಭಾರತದ ಉದ್ದಗಲದಲ್ಲಿ ಹಾಗೂ ಶ್ರೀಲಂಕೆಯಲ್ಲಿ ಇಂದಿಗೂ ಗುರುತಿಸಬಹುದು. ರಾಮಾಯಣ ಎಂದರೆ ರಾಮನ ಅಯನ ಅಂದರೆ ಪಯಣ. ಹಲವು ಶತಮಾನಗಳ ಹಿಂದಿನಿಂದಲೂ ಭಾರತೀಯ ವ್ಯಾಪಾರಿಗಳೊಂದಿಗೆ ಸಮುದ್ರಯಾನಗಳಲ್ಲಿ ಪಯಣಿಸಿದ ಸಾಹಸಿ ಯುವಕರು ವಿದ್ವಾಂಸರು, ಋಷಿಗಳು ದೂರ ದೂರದ ನಾಡುಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಿದರು.
ರಾಮಾಯಣ ಮಹಾಕಾವ್ಯ – ಕವಿಗಳಿಗೆ/ ಲೇಖಕರಿಗೆ ಅರ್ಘ್ಯು ಗಣಿ – ಅಕ್ಷಯ ಆಕರ. ಇದು ಎಲ್ಲಾ ಭಾರತೀಯ ಭಾಷೆಗಳಿಗೆ ಹಾಗೂ ಅನೇಕ ಸಾಗರೋತ್ತರ ದೇಶಗಳ ಭಾಷೆಗಳಿಗೆ ಅನುವಾದಿತವಾಗಿದೆ. ಆಗ್ನೇಯ ಏಷಿಯಾ ದೇಶಗಳಲ್ಲಿ ರಾಮಾಯಣದ ಪ್ರಭಾವ ಪ್ರಾಚೀನ ವಾಸ್ತು ಶಿಲ್ಪಗಳಲ್ಲಿ ಹಾಗೂ ಅಲ್ಲಿನ ಕಲೆ, ಸಂಗೀತ, ನೃತ್ಯ ಮತ್ತು ಸಾಹಿತ್ಯಗಳಲ್ಲಿ ಕಾಣುತ್ತದೆ. ರಾಮೋ ವಿಗ್ರಹವಾನ್ ಧರ್ಮ – ಧರ್ಮವೇ ಮೂರ್ತಿವೆತ್ತಂತಿರುವ ರಾಮನ ಕೊಟ್ಟ ಮಾತಿಗೆ ತಪ್ಪದ ಆದರ್ಶ, ಪತಿಯೊಂದಿಗೆ ಧರ್ಮಪಥದಲ್ಲಿ ನಡೆದ ಸೀತಾದೇವಿ, ಅಣ್ಣ – ತಮ್ಮಂದಿರ ನಡುವಿನ ಆತ್ಮೀಯ ಬಾಂಧವ್ಯ, ಮಾರುತಿಯ ಅಸೀಮ ಭಕ್ತಿಗಳ ಪ್ರಭಾವ ರಾಮಾಯಣ ಪಯಣಿಸಿದ ಹಾದಿಯಲ್ಲಿ, ಎಲ್ಲೆ ಡೆ, ಅಲ್ಲಿನ ಸಂಸ್ಕೃತಿಯೊಂದಿಗೆ ಭಾವನಾತ್ಮಕವಾಗಿ ಮಿಳಿತಗೊಂಡಿದೆ. ರಾವಣನ ಮೇಲೆ ರಾಮ ಸಾಧಿಸಿದ ವಿಜಯದಂತೆಯೇ, ಎಲ್ಲೆಡೆಯೂ ಎಲ್ಲರೂ ಕೆಡುಕಿನ ಮೇಲೆ ಒಳಿತಿನ ಜಯವನ್ನು ಬಯಸುತ್ತಾರೆ.
Related Articles
‘ಕಾಕವಿನ್ ರಾಮಾಯಣ’ಗಳು ಪ್ರಖ್ಯಾತವಾಗಿವೆ. ವಾಲ್ಮೀಕಿರಾಮಾಯಣವನ್ನು ಪ್ರಧಾನವಾಗಿ ಅನುಸರಿಸಿರುವ ಈ ಮರುಕಥನಗಳಲ್ಲಿ ಹಲವು ಮಾರ್ಪಾಡುಗಳು ಹಾಗೂ ಸೇರ್ಪಡೆಗಳು ಕಾಣುತ್ತವೆ.
Advertisement
ಇಂಡೋನೇಷಿಯಾದ “ಕಾಕವಿನ್ ರಾಮಾಯಣ’: ಬಹು ಹಿಂದಿನ ಕಾಲದಲ್ಲಿಯೇ ಭಾರತದಲ್ಲಿ ಸಾಗರೋತ್ತರ ನಾಡುಗಳ ಪರಿಚಯವಿದ್ದ ಸಂಗತಿ ವಾಲ್ಮೀಕಿ ರಾಮಾಯಣದಲ್ಲಿ ಕಾಣುತ್ತದೆ. ದೇವಿ ಸೀತೆಯ ಅನ್ವೇಷಣೆಗಾಗಿ ಹೊರಟ ತನ್ನ ಸೇನೆಗೆ ವಾನರ ರಾಜ ಸುಗ್ರೀವ, ಸಪ್ತ ರಾಜ್ಯಗಳಿಂದ ಶೋಭಿತವಾಗಿರುವ ಅಂದು; ಯವ ದ್ವೀಪವೆಂದು ಕರೆಯುತ್ತಿದ್ದ ಇಂಡೋನೇಷಿಯಾದ ಜಾವಾ ದ್ವೀಪ ಹಾಗೂ ಸುತ್ತಲ ಪ್ರದೇಶಗಳ ವಿವರ ಕೊಡುತ್ತಾನೆ
ಯತ್ನವಂತೋ ಯವದ್ವೀಪಂ ಸಪ್ತರಾಜ್ಯೋಪಶೋಭಿತಂ |ಸುವರ್ಣ ರೂಪ್ಯಕಂ ದ್ವೀಪಂ
ಸುವರ್ಣಾಕರಮಂಡಿತಂ ||
ಕಿಷ್ಕಿಂದಾ ಕಾಂಡ :4.40.31
ಇಂಡೋನೇಷಿಯಾದಲ್ಲಿ ಕವಿ ಯೋಗೀಶ್ವರನಿಂದ ರಚಿತವಾದ ಕಾಕವಿನ್ ರಾಮಾಯಣ ಅಲ್ಲಿನ ರಾಷ್ಟ್ರೀಯ ಮಹಾಕಾವ್ಯ. ಇದು ಕೆಲವು ಮಾರ್ಪಾಡುಗಳೊಂದಿಗೆ ಸಂಸ್ಕೃತ ಭಾಷೆಯ ಭಟ್ಟಿ ಕಾವ್ಯವನ್ನು ಅನುಸರಿಸುತ್ತದೆ. ಜಾವಾದಲ್ಲಿರುವ ಪ್ರಸಿದ್ಧ ಪ್ರಾಂಬಣನ್ – ಪರಬ್ರಹ್ಮ ದೇವಾಲಯದ ಹಿನ್ನೆಲೆಯಲ್ಲಿ ಹೊರಾಂಗಣ ರಂಗಮಂದಿರದಲ್ಲಿ ರಾತ್ರಿವೇಳೆಯಲ್ಲಿ ಪ್ರದರ್ಶನ ವಾಗುವ ರಾಮಾಯಣ ಬ್ಯಾಲೆಯಲ್ಲಿ ಸಂಗೀತ, ಅಭಿನಯ ಹಾಗೂ ನೃತ್ಯಗಳ ಸುಂದರ ಸಂಯೋಜನೆ ಕಾಣುತ್ತದೆ.ಈ ಬ್ಯಾಲೆಯಲ್ಲಿರುವ 200 ಕ್ಕೂ ಹೆಚ್ಚಿನ ಮುಸ್ಲಿಂ ಕಲಾವಿದರು ಇಸ್ಲಾಂ ನಮ್ಮ ಧರ್ಮ ಮತ್ತು ರಾಮಾಯಣ ನಮ್ಮ ಸಂಸ್ಕೃತಿ ಎಂದು ಹೇಳುತ್ತಾರೆ. ಥಾಯ್ಲೆಂಡ್‌ನ “ರಾಮ್ ಕೀನ್’ – ರಾಮಕೀರ್ತಿ- ರಾಮಕಥಾ: ರಾಮ ಹಾಗೂ ರಾಮಾಯಣ ಕಥನದೊಂದಿಗೆ ಇಲ್ಲಿ ವಿಶೇಷ ಸಂಬಂಧವಿದೆ. ಥಾಯ್ ಅಂದರೆ ದೇವ; ಹಾಗಾಗಿ ಥಾಯ್ ಲ್ಯಾಂಡ್ ಎಂದರೆ ದೇವಭೂಮಿ. ಅಲ್ಲಿನ ಜನರು ರಾಮಾಯಣದ ಘಟನೆ ಗಳೊಡನೆ ತಮ್ಮ ದೇಶದ ಹಲವಾರು ಪ್ರದೇಶಗಳನ್ನು ಗುರುತಿಸುತ್ತಾರೆ. ಈಗಿನ ರಾಜಧಾನಿ ಬ್ಯಾಂಕಾಕ್ ನಗರದಿಂದ 70 ಕಿಲೋಮೀಟರ್ ದೂರದ ಲ್ಲಿರುವ “ಅಯುಥಾಯ’ (ಅಯೋಧ್ಯಾ) ಎಂಬ ನಗರ “ಸಯಾಂ ದೇಶ’ವೆಂದು ಕರೆಯುತ್ತಿದ್ದ
ಆ ದೇಶದ ರಾಜಧಾನಿಯಾಗಿತ್ತು. ಪ್ರ.ಶ.1350 ರಿಂದ 1767ರವರೆಗೆ ಅಲ್ಲಿ ರಾಜ್ಯವಾಳಿದ ವಿವಿಧ ವಂಶಗಳ ರಾಜರ ಹೆಸರುಗಳು, “ರಾಮಾಧಿಬೋಧಿ, ರಾಮೇಶ್ವರ, ರಾಮರಾಜ, ರಾಮಾಧಿಪತಿ’ ಹೀಗೆ ಎಲ್ಲವೂ ರಾಮಮಯ. ಥಾಯ್‌ಲ್ಯಾಂಡ್‌ನ ಚಕ್ರಿವಂಶದ ರಾಜರ ಅಂಕಿತವೇ “ರಾಮ’. ಈಗಿರುವ ಅಲ್ಲಿನ ರಾಜ, ಮಹಾ ವಾಜಿರಾಲೋಂಕಾನ್ – ವಜ್ರಾಲಂಕಾರ ಚಕ್ರಿವಂಶದ 10ನೇ ರಾಮ. ರಾಮಕಥೆ ಮಹಾಕಾವ್ಯವಾಗಿ ಮೊದಲ ಬಾರಿ ಲಿಖಿತ ರೂಪ ಪಡೆದದ್ದು ಬೌದ್ಧ
ಧರ್ಮಕ್ಕೆ ಸೇರಿದ್ದ ಒಂದನೇ ರಾಮನಿಂದಲೇ. ಶ್ರವ್ಯಕಾವ್ಯ, ದೃಶ್ಯಕಾವ್ಯ, ಮುಖವಾಡಧಾರಿಗಳ ಆಟ (ನಂಜ…), ತೊಗಲು ಗೊಂಬೆ ಆಟ (ಖೋನ…) ಹಾಗೂ ಹಲವಾರು ನೃತ್ಯ ರೂಪಕಗಳು ಅಲ್ಲಿ ಪ್ರಚಾರದಲ್ಲಿವೆ. ದೇವಾಲಯಗಳಲ್ಲಿ ಸೇವಾರ್ಥವಾಗಿ ರಾಮಾಯಣದ ನೃತ್ಯ ನಡೆಯುತ್ತದೆ. ಅಲ್ಲಿನ ಯಾವ ಸಾಂಸ್ಕೃತಿಕ ಕಾರ್ಯಕ್ರಮವೂ ರಾಮಾಯಣ ನೃತ್ಯವಿಲ್ಲದೆ ಕೊನೆಗೊಳ್ಳುವುದಿಲ್ಲ. ಕಾಂಬೋಡಿಯಾದ ರಾಮ್ ಖೇರ್: ರಾಮಾಯಣದ ಘಟನೆಗಳು ಅಲ್ಲಿರುವ ಪ್ರಪಂಚದ ಅತ್ಯಂತ ದೊಡ್ಡ ಹಿಂದೂ ದೇವಾಲಯ – ಅಂಕುರ್ ವಾಟ್ – ವಿಷ್ಣು ದೇವಾಲಯದ ಭಿತ್ತಿಗಳಲ್ಲಿ ವಿಸ್ತೃತವಾಗಿ ಕಾಣುತ್ತದೆ. ಕಾಂಬೋಡಿಯಾದ ಅರಮನೆಯಲ್ಲಿ ಹಾಗೂ ವಿವಿಧ ದೇವಾಲಯಗಳಲ್ಲಿರುವ ಶಿಲ್ಪಗಳಲ್ಲಿ, ಕಲಾಕೃತಿಗಳಲ್ಲಿ, ಗೊಂಬೆಯಾಟದ ಪ್ರದರ್ಶನಗಳಲ್ಲಿ, ನೃತ್ಯ ರೂಪಕ – ಬ್ಯಾಲೆಗಳಲ್ಲಿ ರಾಮಾಯಣದ ವಿವಿಧ ಘಟನೆಗಳ ಸುಂದರ ಚಿತ್ರಣಗಳು ಕಾಣುತ್ತವೆ. ಅಯೋಧ್ಯೆಯಲ್ಲಿ ರಾಜ್ಯವಾಳಿದ ಚಕ್ರವರ್ತಿ ರಾಮನನ್ನು ಚಾರಿತ್ರಿಕ ಮಹಾ ಪುರುಷ ಹಾಗೂ ಸಮಕಾಲೀನ ಮಹರ್ಷಿ ವಾಲ್ಮೀಕಿಗಳು ರಚಿಸಿರುವ ರಾಮಾಯಣ ಒಂದು ಚಾರಿತ್ರಿಕ ಮಹಾಕಾವ್ಯ ಎಂಬ ನಂಬಿಕೆ ರಾಮಾಯಣ ಸಾಗಿದ ಪಥದಲ್ಲಿ ಎಲ್ಲೆಡೆ ಕಾಣುತ್ತದೆ. ರಾಜ ರಾಮನ ಮಹೋನ್ನತ ಚರಿತೆಯ ಮಹಿಮೆ ಯನ್ನು ತಿಳಿಸುವ ಭಾರತದ ಆದಿಕಾವ್ಯ ಹಲವು ಸಮುದ್ರಗಳನ್ನು ದಾಟಿ ಹಲವು ದೇಶಗಳಲ್ಲಿ ಮಹರ್ಷಿಗಳ ಆಶಯದಂತೆ ಇಂದಿಗೂ ಪ್ರಚಾರವಾಗುತ್ತಿದೆ. ಯಾವತ್ ಸ್ಥಾಸ್ಯಂತಿ ಗಿರಯಃ ಸರಿತಶ್ಚ ಮಹೀತಲೇ|
ತಾವದ್ರಾಮಾಯಣಕಥಾ ಲೋಕೇಷು ಪ್ರಚರಿಷ್ಯತಿ||
ಎಲ್ಲಿಯವರೆಗೆ ಪರ್ವತಗಳು ಭೂಮಿಯ ಮೇಲೆ ನಿಂತಿರುವುದೋ ಹಾಗೂ ನದಿಗಳು ಹರಿಯುತ್ತಿರುವುದೋ ಅಲ್ಲಿಯವರೆಗೂ ರಾಮಾಯಣದ ಕಥಾನಕ ಲೋಕಗಳಲ್ಲಿ ಪ್ರಚಾರವಾಗುತ್ತಿರುತ್ತದೆ. ಡಾ.ಜಯಂತಿ ಮನೋಹರ್,
ವೇದಾರ್ಥ ಚಿಂತಕರು ಮತ್ತು ಭಾರತೀಯ
ಸಾಂಸ್ಕೃತಿಕ ಪರಂಪರೆಯ ಸಂಶೋಧಕರು