Advertisement

ಅಯೋಧ್ಯೆಯಲ್ಲಿ ನೀಲಿಮಿಶ್ರಿತ ಶ್ವೇತಶಿಲೆಯ ರಾಮನ ವಿಗ್ರಹ

12:37 AM Sep 12, 2022 | Team Udayavani |

ಉಡುಪಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರದಲ್ಲಿ ನೀಲಿ ಮಿಶ್ರಿತ ಶ್ವೇತ ಶಿಲೆಯಲ್ಲಿ ಶಿಲ್ಪಶಾಸ್ತ್ರೋಕ್ತ ರೀತಿಯಲ್ಲಿ ಶ್ರೀರಾಮನ ವಿಗ್ರಹ ನಿರ್ಮಿಸಿ ಪ್ರತಿಷ್ಠಾಪಿಸಲಾಗುವುದೆಂದು ಭಾನುವಾರ ಅಯೋಧ್ಯೆಯ ಪ್ರವಾಸಿ ಮಂದಿರದಲ್ಲಿ ನಡೆದ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಸಭೆಯಲ್ಲಿ ನಿರ್ಣಯಿಸಲಾಗಿದೆ.

Advertisement

ಟ್ರಸ್ಟ್‌ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ್‌ ದಾಸ್‌ಜೀ ಅಧ್ಯಕ್ಷತೆಯಲ್ಲಿ ಹಾಗೂ ಕಾರ್ಯದರ್ಶಿಗಳಾದ ಚಂಪತ್‌ ರಾಯ್‌ , ಕೋಶಾಧಿಕಾರಿ ಶ್ರೀಗೋವಿಂದಗಿರಿ ಸ್ವಾಮೀಜಿ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮೊದಲಾದವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ನಿರ್ಮಾಣವೆಚ್ಚ, ದೇಣಿಗೆ ಹೆಚ್ಚಳ:
ಆರಂಭದಲ್ಲಿ ಮಂದಿರ ನಿರ್ಮಾಣಕ್ಕೆ ಸುಮಾರು 400 ಕೋಟಿ ರೂ. ವೆಚ್ಚ ತಗುಲಬಹುದೆಂದು ಅಂದಾಜಿಸಲಾಗಿತ್ತು. ಆದರೆ ಜಿಎಸ್‌ಟಿ ವೆಚ್ಚ, ರಾಯಲ್ಟಿ ಮೊದಲಾದ ಅನೇಕ ಕಾರಣಗಳಿಂದ ನಿರ್ಮಾಣ ವೆಚ್ಚ 1,300 ಕೋಟಿ ತಗುಲಬಹುದೆಂದು ಅಂದಾಜಿಸಲಾಗಿದೆ. ತಿಂಗಳೊಂದಕ್ಕೆ ಸುಮಾರು 50 ಲಕ್ಷಕ್ಕಿಂತಲೂ ಅಧಿಕ ದೇಣಿಗೆ ಬರುತ್ತಿದ್ದು ಕೆಲವೊಮ್ಮೆ ಈ ಮೊತ್ತ ಕೋಟಿಗೂ ಮೀರಿದೆ ಎಂದು ಸಭೆಗೆ ತಿಳಿಸಲಾಯಿತು.

ಮಹಾರಾಷ್ಟ್ರದ ಸಾಗುವಾನಿ ಮರ
ಮಂದಿರಕ್ಕೆ ಬೇಕಾಗುವ ಸಾಗುವಾನಿ ಮರವನ್ನು ಮಹಾರಾಷ್ಟ್ರದಿಂದ ತರಿಸಿಕೊಳ್ಳಲಾಗುವುದು. ಈ ಖರ್ಚು ವೆಚ್ಚಗಳ ವಿವರಗಳನ್ನು ಸಭೆಗೆ ಸಲ್ಲಿಸಿ ಅನುಮೋದನೆ ಪಡೆಯಲಾಯಿತು.

ಕರ್ನಾಟಕದಿಂದ ಸ್ವರ್ಣ
ಶಿಖರ: ಬೇಡಿಕೆ ಮಂಡನೆ
ಭವ್ಯ ರಾಮಮಂದಿರದ ಪ್ರಧಾನ ಗರ್ಭಗುಡಿಯ ಶಿಖರಕ್ಕೆ ರಾಮಭಕ್ತ ಹನುಮನ ಪವಿತ್ರ ನೆಲವಾಗಿರುವ ಕರ್ನಾಟಕದಿಂದ ಸ್ವರ್ಣ ಶಿಖರವನ್ನು ಅರ್ಪಿಸಬೇಕೆನ್ನುವ ನಾಡಿನ ಅಸಂಖ್ಯ ಭಕ್ತರ ಇಂಗಿತವನ್ನು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಭೆಯಲ್ಲಿ ಮಂಡಿಸಿದರು.

Advertisement

ವಿಶ್ವ ಹಿಂದೂ ಪರಿಷತ್‌ ನೇತೃತ್ವದಲ್ಲಿ ಕರ್ನಾಟಕದ ಹಂಪಿಯಿಂದ ಸ್ವರ್ಣ ಶಿಖರ ಯಾತ್ರೆಯನ್ನು ರಾಜ್ಯಾದ್ಯಂತ ಸಂಚರಿಸಿ ಅಯೋಧ್ಯೆಗೆ ತಲುಪಿಸುವ ಇರಾದೆಯನ್ನು ಭಕ್ತರು ಹೊಂದಿರುವುದನ್ನು ಶ್ರೀಗಳು ತಿಳಿಸಿದರು.
ಅದರ ಜತೆಗೆ ಮುಂದಿನ ವರ್ಷಾಂತ್ಯಕ್ಕೆ ನಡೆಯುವ ನೂತನ ಮಂದಿರ ಸಮರ್ಪಣೆ ಮತ್ತು ಶ್ರೀರಾಮನ ಪ್ರತಿಷ್ಠಾ ಮಹೋತ್ಸವಕ್ಕೆ ದಿನಾಂಕ ನಿಗದಿ ಪಡಿಸಿದ ಬಳಿಕ ದೇಶದ ಭಕ್ತರನ್ನು ಈ ಉತ್ಸವಕ್ಕೆ ಆಹ್ವಾನಿಸುವ ಸಲುವಾಗಿಯೂ ಒಂದು ಯಾತ್ರೆಯನ್ನು ಕೈಗೊಳ್ಳಬಹುದೆಂಬ ಅಭಿಪ್ರಾಯವನ್ನು ಶ್ರೀಗಳು ವ್ಯಕ್ತಪಡಿಸಿದರು. ವಿಶ್ವಸ್ತರಾದ ಹಿರಿಯ ನ್ಯಾಯವಾದಿ ಪರಾಶರನ್‌ ಆನ್‌ ಲೈನ್‌ ಮೂಲಕ ಸಭೆಯಲ್ಲಿ ಪಾಲ್ಗೊಂಡರು.

ಹೈದರಾಬಾದ್‌ನಲ್ಲಿ ಚಾತುರ್ಮಾಸ ವ್ರತ ಮುಗಿಸಿ ರವಿವಾರ ಬೆಳಗ್ಗೆ ಅಯೋಧ್ಯೆ ತಲುಪಿದ ಪೇಜಾವರ ಶ್ರೀಗಳು ತಾತ್ಕಾಲಿಕ ಮಂದಿರದಲ್ಲಿರುವ ರಾಮಲಲ್ಲಾನ ದರ್ಶನ ಪಡೆದು ಪೂಜೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next