Advertisement
ಅಯೋಧ್ಯೆಯ ರಾಮ ಕಾರಸೇವಕಪುರಂನಲ್ಲಿ 7 ತಿಂಗಳಲ್ಲಿ ಮೂಡಿದ ರಾಮಲಲ್ಲಾಅದು ಅಯೋಧ್ಯೆಯಲ್ಲಿ ರಾಮಮಂದಿರದ ಕನಸು ಇನ್ನೇನು ನನಸು ಆಗುವ ಹಂತ. ಆಗಷ್ಟೇ ರಚನೆಯಾಗಿದ್ದ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನವದೆಹಲಿಯಲ್ಲಿ 2ನೇ ಸಭೆ ಆಯೋಜಿಸಿತ್ತು. ಅದರಲ್ಲಿ ರಾಮನ ವಿಗ್ರಹ ಹೇಗಿರಬೇಕು ಎಂದು ಚರ್ಚಿಸಲಾಗಿತ್ತು. ಬಾಲರಾಮನ ವಿಗ್ರಹ ಪ್ರತಿಷ್ಠಾಪಿಸುವ ಸಂಬಂಧ ನಿರ್ಧಾರ ಕೈಗೊಂಡ ಸಭೆ, ಕಲಾವಿದ ವಾಸುದೇವ್ ಕಾಮತ್ ಅವರಿಂದ ರಾಮನ ಚಿತ್ರವೊಂದನ್ನು ಬರೆಸಲು ತೀರ್ಮಾನಿಸಿತು.
ಮೂರ್ತಿ ಕೆತ್ತುವುದೋ, ಜೈಪುರದಿಂದ ಅಮೃತಶಿಲೆಯನ್ನು ತಂದು ಕೆತ್ತುವುದೋ ಎಂಬ ಜಿಜ್ಞಾಸೆ ಶುರುವಾಯಿತು. ಒರಿಸ್ಸಾ ಹಾಗೂ ಕರ್ನಾಟಕದ ಕಲ್ಲುಗಳನ್ನೂ ಪರಿಗಣಿಸುವ ಕುರಿತು ಚರ್ಚೆ ನಡೆಯಿತು. ಆಗ ಶಿಲ್ಪಿ ಯಾರು ಎಂಬ ಪ್ರಶ್ನೆ ಎದುರಾಯಿತು. ಈ ಹಂತದಲ್ಲಿ ದೇಶದ ವಿವಿಧ ಭಾಗಗಳಲ್ಲಿನ ಪ್ರಮುಖ ಶಿಲ್ಪಿಗಳ ಹುಡುಕಾಟ ನಡೆಯಿತು. ಕರ್ನಾಟಕದ ಮೈಸೂರಿನ ಅರುಣ್ ಯೋಗಿರಾಜ್, ಹೊನ್ನಾವರದ ಗಣೇಶ್ ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಅವರನ್ನು ಟ್ರಸ್ಟ್ ಆಯ್ಕೆ ಮಾಡಿತು. ಈ ಮೂವರನ್ನು ಕರೆಯಿಸಿ ಬಾಲರಾಮನ ಪರಿಕಲ್ಪನೆಯನ್ನು ವಿವರಿಸುವ ಟ್ರಸ್ಟ್ ಸದಸ್ಯರು, ಅಯೋಧ್ಯೆಯಲ್ಲಿ ವಿಎಚ್‌ಪಿ ವಶದಲ್ಲಿರುವ ಕಾರಸೇವಕಪುರಂನಲ್ಲಿವ್ಯವಸ್ಥೆ ಮಾಡಿಕೊಟ್ಟಿತು. ಅರುಣ್ ಯೋಗಿರಾಜ್ ಮತ್ತು ಗಣೇಶ್ ಭಟ್ ಕರ್ನಾಟಕದ ಕೃಷ್ಣಶಿಲೆ ಆಯ್ಕೆ ಮಾಡಿ ವಿಗ್ರಹ ರೂಪಿಸಿದರೆ, ಪಾಂಡೆ ರಾಜಸ್ಥಾನದ ಮಕರಾನಾ ಶಿಲೆಯಲ್ಲಿ ವಿಗ್ರಹ ಕೆತ್ತಿದರು ಸತತ 7 ತಿಂಗಳು 3 ಶಿಲ್ಪಿಗಳ ಪ್ರತ್ಯೇಕ ತಂಡಗಳು ಕೆತ್ತನೆ ನಡೆಸಿತು. ಈ ಜಾಗಕ್ಕೆ ಉ.ಪ್ರ. ಪೊಲೀಸರು ಭದ್ರತೆ ಒದಗಿಸಿದ್ದರು. ಶಿಲ್ಪಿಗಳ ತಂಡಕ್ಕೆ ಪ್ರತ್ಯೇಕ, ಆಯತಾಕಾರದ ಕಟ್ಟಡ ನೀಡಲಾಗಿತ್ತು. ಪ್ರತೀ ಕಟ್ಟಡ ಒಂದೇ ಆಕಾರದಲ್ಲಿದ್ದು, ಪ್ರತಿಯೊಂದರಲ್ಲೂ 15 ಅಡಿ ಎತ್ತರದ ಗೋಡೆಗಳಿದ್ದವು. ಗಾಳಿ, ಬೆಳಕಿಗಾಗಿ ಕಿಟಕಿಗಳಿದ್ದವು. ಕೆತ್ತನೆಯ ಗುಪ್ತಸಂಗತಿಯೂ ಹೊರಬರದಂತೆ ಶಿಲ್ಪಿಗಳು ಎಚ್ಚರಿಕೆ ವಹಿಸಿದ್ದರು. ಬೇಡಿಕೊಂಡರೂ ಆ ಜಾಗಕ್ಕೆ ಯಾರನ್ನೂ ಪ್ರವೇಶಿಸಲು ಬಿಟ್ಟಿರಲಿಲ್ಲ.
Related Articles
*ಬರೀ ವಿಗ್ರಹದ ಅಳತೆ 51 ಇಂಚು ಅಥವಾ 4.25 ಅಡಿಗಳು.
*ಕಮಲಪೀಠದ ಮೇಲೆ ಬಾಲರಾಮನ ನಿಂತಿರುವ ವಿಗ್ರಹವಿದೆ. ಕಮಲಪೀಠದ ಕೆಳಗೆ ಇನ್ನೊಂದು ಪೀಠವಿದೆ.
* ಎರಡೂ ಕಾಲುಗಳಿಗೆ ವಸ್ತ್ರಾಲಂಕಾರವಿದೆ. ಸೊಂಟಕ್ಕೆ ಆಭರಣಗಳನ್ನು ತೊಡಿಸಿದ ಅಲಂಕಾರವಿದೆ.
* ಕೊರಳಲ್ಲಿ ವಿವಿಧ ಹಾರಗಳಿವೆ. ಕೈಗಳಲ್ಲಿ ಅಂಗವಸ್ತ್ರವಿದೆ.
*ಬಲಗೈಯಲ್ಲಿ ಜ್ಞಾನಮುದ್ರೆಯನ್ನು ತೋರಿಸಲಾಗಿದೆ. ಇದು ಯೋಗಿಗಳ ಲಕ್ಷಣ. ಅದೇ ಕೈಗೆ ಬಾಣವನ್ನು ಇಡಲಾಗುತ್ತದೆ.
*ಎಡಗೈಯಲ್ಲಿ ಧ್ಯಾನಮುದ್ರೆಯಿದೆ, ಇದೂ ಕೂಡ ಯೋಗಿಗಳ ಲಕ್ಷಣ. ಅಲ್ಲಿ ಬಿಲ್ಲನ್ನು ಇಡಲಾಗುತ್ತದೆ.
* ಮುಖ ಅತ್ಯಂತ ಸುಂದರವಾಗಿದೆ, ಪೂರ್ಣವಾಗಿ ಬಾಲಕಳೆಯನ್ನು ಹೊಮ್ಮಿಸುವ ನಗುವಿದೆ.
* ಕಣ್ಣುಗಳು ಅರಳಿಕೊಂಡಿವೆ, ಹಣೆ ವಿಶಾಲವಾಗಿದೆ. ಕೂದಲಿಗೆ ಜಟೆಯ ವಿನ್ಯಾಸವಿದೆ.
*ನೆತ್ತಿಯ ಮೇಲೆ ದೇವಿಯ ಸಣ್ಣ ವಿಗ್ರಹವನ್ನು ಕೆತ್ತಲಾಗಿದೆ.
* ಪ್ರಭಾವಳಿಯಲ್ಲಿ ಅದ್ಭುತ ಕೆತ್ತನೆಗಳಿವೆ. ಪ್ರದಕ್ಷಿಣಾಕಾರವಾಗಿ ಅಂದರೆ ಎಡದಿಂದ ಬಲಭಾಗಕ್ಕೆ ಗಮನಿಸುತ್ತ ಹೋದರೆ ಸ್ಪಷ್ಟವಾಗಿ ಶಿಲ್ಪದ ಕೆತ್ತನೆಗಳು ಅರ್ಥವಾಗುತ್ತವೆ.
* ಪ್ರಭಾವಳಿಯ ಎಡಭಾಗದ ಕೆಳಗೆ ರಾಮನ ಪರಮಭಕ್ತ ಹನುಮನ ಕೆತ್ತನೆಯಿದೆ.
* ನಂತರ ದಶಾವತಾರಗಳ ಕೆತ್ತನೆಗಳಿವೆ. ಮೊದಲು ವಿಷ್ಣುವಿನ ಮೊದಲ ಅವತಾರವಾದ ಮತ್ಸ್ಯ ವನ್ನು ಕೆತ್ತಲಾಗಿದೆ.
*ನಂತರ ಕೂರ್ಮಾವತಾರ ಅಂದರೆ ಆಮೆಯ ಚಿತ್ರವಿದೆ.
* ಹಿರಣ್ಯಾಕ್ಷನನ್ನು ಸಂಹರಿಸಿದ ವರಾಹನೂ ಇದ್ದಾನೆ.
*ಅನಂತರ ಹಿರಣ್ಯಕಶ್ಯಪನನ್ನು ಸಂಹರಿಸಿದ ನರಸಿಂಹನಿದ್ದಾನೆ.
* ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತಳ್ಳಿದ ವಾಮನನ ರೂಪವಿದೆ.
* ಬಲಭಾಗದ ಪ್ರಭಾವಳಿಯ ಮೇಲೆ ಪರಶುರಾಮ, ಅನಂತರ ಶ್ರೀರಾಮನ ವಿಗ್ರಹಗಳಿವೆ.
*ನಾಟ್ಯಭಂಗಿಯಲ್ಲಿರುವ ಶ್ರೀಕೃಷ್ಣ, ಧ್ಯಾನಭಂಗಿಯಲ್ಲಿರುವ ಬುದ್ಧ, ದಶಾವತಾರದ ಕಡೆಯ ಕೆತ್ತನೆಯಾಗಿ ಕಲ್ಕಿಯಿದ್ದಾನೆ.
* ಯುದ್ಧದ ವೇಳೆ ರಾಮನ ರಕ್ಷಣೆಗೆ ಬಂದ ಗರುಡನ (ವಿಷ್ಣುವಿನ ವಾಹನವೂ ಹೌದು) ವಿಗ್ರಹ ಬಲಭಾಗದ ಪ್ರಭಾವಳಿಯ ಕೆಳಗಡೆಯಿದೆ.
* ಪ್ರಭಾವಳಿಯಲ್ಲಿ ಓಂಕಾರ, ಆದಿಶೇಷ, ಚಕ್ರ, ಶಂಖ, ಗದೆ, ಸ್ವಸ್ತಿಕದ ಚಿಹ್ನೆಗಳಿವೆ
Advertisement
ಅರುಣ್ ವಿಗ್ರಹವೇ ಆಯ್ಕೆ ಯಾಕಾಯ್ತು?
ವಿಗ್ರಹವನ್ನು ಆಯ್ಕೆ ಮಾಡುವಾಗ ಹಲವು ಕೋನಗಳಿಂದ ವಿಶ್ಲೇಷಣೆ ಮಾಡಲಾಗಿದೆ. ಮುಖದಲ್ಲಿರುವ ಸುಂದರ ಬಾಲಕಳೆ, ಮುಗ್ಧತೆ, ಅಲ್ಲಿ ಕಂಡುಬರುವ ದಿವ್ಯ ನಗು, ಕಣ್ಣುಗಳ ಸೌಂದರ್ಯವನ್ನು ಗಮನಿಸಲಾಗಿದೆ. ಶರೀರದ ಇತರೆ ಅಂಗಗಳಲ್ಲಿರುವ ಬಾಲಕನ ಅಂಗಸೌಷ್ಟವವನ್ನೂ ನೋಡಲಾಗಿದೆ. ಈ ಎಲ್ಲ ಲಕ್ಷಣಗಳನ್ನು ತುಂಬಿಕೊಂಡಿದ್ದ ರಿಂದ ಅರುಣ್ ಕೆತ್ತಿದ ವಿಗ್ರಹ ಅಂತಿಮಗೊಂಡಿದೆ. ಹೊನ್ನಾವರದ ಗಣೇಶ್ ಭಟ್ ಮತ್ತು ರಾಜಸ್ಥಾನದ ಸತ್ಯ ನಾರಾ ಯಣ ಪಾಂಡೆ ನಿರ್ಮಿಸಿರುವ ವಿಗ್ರಹಗಳು ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಗೊಳ್ಳುವುದಿಲ್ಲ. ಆದರೆ ಇವನ್ನು ಮಂದಿರದ ಆವರಣದಲ್ಲೇ ಪ್ರತಿಷ್ಠಾಪಿಸಲಾಗುತ್ತದೆ.