Advertisement

Ayodhya; ರಾಮ ಮಂದಿರ ಗೋಪುರ ನಿರ್ಮಾಣ ಬಿರುಸು

01:18 AM Oct 14, 2024 | Team Udayavani |

ಅಯೋಧ್ಯೆ: ಜ.22ರ ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠೆ ಬಳಿಕ ಮಂದಿರದ ಉಳಿದ ಭಾಗಗಳ ನಿರ್ಮಾಣ ಕಾರ್ಯ ತ್ವರಿತವಾಗಿ ನಡೆಯುತ್ತಿದೆ. ನವರಾತ್ರಿಯ ಮೊದಲ ದಿನವೇ ಮಂದಿರದ ಗೋಪುರ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, 9 ದಿನಗಳಲ್ಲಿ ಮೊದಲ ಪದರ ಸಿದ್ಧವಾಗಿದೆ. ನೆಲದಿಂದ 161 ಅಡಿ ಎತ್ತರವಿರುವ ಈ ಶಿಖರವನ್ನು 120 ದಿನಗಳಲ್ಲಿ ನಗರ ಶೈಲಿಯಲ್ಲಿ ನಿರ್ಮಿಸಲಾಗುತ್ತದೆ. ವಿಶೇಷವೆಂ­ದರೆ, ಗೋಪುರ ಚೌಕಾಕಾರದ ಬದಲಾಗಿ ಅಷ್ಟಭುಜಾಕೃತಿಯಲ್ಲಿರುತ್ತದೆ. ಅಷ್ಟಭುಜದ ಗೋಪುರ ಹೊಂದಿರುವ ದೇಶದ ಮೊದಲ ರಾಮಮಂದಿರ ಎಂಬ ಹೆಗ್ಗಳಿಕೆಗೂ ಅಯೋಧ್ಯೆ ದೇಗುಲ ಪಾತ್ರವಾಗಲಿದೆ.

Advertisement

ಮಂದಿರದ ವೈಭವೋಪೇತ ಗೋಪುರವನ್ನು 29 ಪದರಗಳಲ್ಲಿ ನಿರ್ಮಿಸಲಾಗುತ್ತದೆ. ರಾಮಮಂದಿರದ ಅಡಿಪಾಯವನ್ನು ಹೇಗೆ ಪದರ ಪದರವಾಗಿ ನಿರ್ಮಿಸಲಾಯಿತೋ ಅದೇ ರೀತಿ ಗೋಪುರ ನಿರ್ಮಾಣವಾಗಲಿದೆ. ಕೆಳಭಾಗದಿಂದ ಮೇಲಕ್ಕೆ ಹೋದಂತೆಲ್ಲ ಗೋಪುರದ ಸುತ್ತಳತೆ ಕಡಿಮೆಯಾಗಲಿದೆ. ಮೇಲ್ಭಾಗದಲ್ಲಿ 45 ಅಡಿ ಎತ್ತರ ಮತ್ತು 5 ಟನ್‌ ತೂಕದ ಧ್ವಜ ಸ್ತಂಭವನ್ನು ಅಳವಡಿಸಲಾಗುತ್ತದೆ. ಈ ಶಿಖರ ಎಷ್ಟು ಬಲಿಷ್ಠವಾಗಿರಲಿದೆ ಎಂದರೆ, ರಿಕ್ಟರ್‌ ಮಾಪಕದಲ್ಲಿ 8-10 ತೀವ್ರತೆ ಭೂಕಂಪವಾದರೂ ಇದು ಸುರಕ್ಷಿತವಾಗಿರಲಿದೆ ಎಂದು ವಾಸ್ತುಶಿಲ್ಪಿ ಆಶಿಷ್‌ ಸೋಂಪುರ ಹೇಳಿದ್ದಾರೆ.

4 ತಿಂಗಳಲ್ಲಿ ಪೂರ್ಣ: ಇದರ ಜತೆಗೆ, ಮಂದಿರದ ಆವರಣದಲ್ಲಿ ಸಪ್ತಮಂದಿರ ನಿರ್ಮಾಣ ಕಾರ್ಯವೂ ತ್ವರಿತಗತಿಯಲ್ಲಿ ನಡೆಯುತ್ತಿದ್ದು, 4 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಒಟ್ಟಾರೆಯಾಗಿ ಇಡೀ ಮಂದಿರದ ಸಂಪೂರ್ಣ ನಿರ್ಮಾಣ ಕಾಮಗಾರಿ ಪ್ರಸಕ್ತ ವರ್ಷದ ಡಿಸೆಂಬರ್‌ ಒಳಗೆ ಮುಗಿಸುವುದು ನಮ್ಮ ಉದ್ದೇಶ ಎಂದು ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹೇಳಿದ್ದಾರೆ.

ಬಾಲಕರಾಮನ ಗರ್ಭಗುಡಿ ನೆಲಮಹಡಿಯಲ್ಲೇ ಇರುತ್ತದೆ. ಮೊದಲ ಮಹಡಿಯಲ್ಲಿ ರಾಮದರ್ಬಾರ್‌ ಇರಲಿದೆ. ಮೊದಲಿಗೆ ಬಾಲಕರಾಮನ ದರ್ಶನ ಪಡೆದು, ಬಳಿಕ ಭಕ್ತರು ಮೆಟ್ಟಿಲು ಹತ್ತಿಕೊಂಡು ಮೊದಲ ಮಹಡಿಗೆ ಹೋಗಿ ರಾಮ್‌ದರ್ಬಾರ್‌ನ ದರ್ಶನ ಪಡೆಯುತ್ತಾರೆ. 2ನೇ ಮಹಡಿಯಲ್ಲಿ ಯಾವುದೇ ವಿಗ್ರಹ ಪ್ರತಿಷ್ಠಾಪನೆ ಬಗ್ಗೆ ಸದ್ಯಕ್ಕೆ ನಿರ್ಧಾರವಾಗಿಲ್ಲ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next