ರಬಕವಿ-ಬನಹಟ್ಟಿ: ಇದೇ ಜ.22ರಂದು ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮದ ಅಂಗವಾಗಿ ಜನರಲ್ಲಿ ಜಾಗೃತಿಯನ್ನುಂಟು ಮಾಡುವ ನಿಟ್ಟಿನಲ್ಲಿ ಮಕ್ಕಳು ರಾಮ, ಸೀತೆ, ಲಕ್ಷ್ಮಣ ಮತ್ತು ಹನಮಂತರ ವೇಷಧಾರಿಗಳನ್ನಾಗಿ ಮಾಡಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಶನಿವಾರ ನಗರದ ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರ ಮಕ್ಕಳ ಛದ್ಮ ವೇಷದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಹಿಂದೂ ಸಂಘಟನೆಯ ಮುಖಂಡ ಶಿವಾನಂದ ಗಾಯಕವಾಡ ಮಾತನಾಡಿ, ಬನಹಟ್ಟಿಯಲ್ಲಿ ಅಯೋಧ್ಯೆಯ ಶ್ರೀರಾಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಕ್ಕಳಲ್ಲಿ ರಾಮ, ಲಕ್ಷ್ಮಣ, ಸೀತೆ ಮತ್ತ ಹನಮಂತರನ್ನು ಕಾಣುವ ನಿಟ್ಟಿನಲ್ಲಿ ಮತ್ತು ಮಕ್ಕಳಲ್ಲಿ ರಾಮನ ಆದರ್ಶಗಳನ್ನು ಬಿತ್ತುವ ಕಾರ್ಯಕ್ರಮ ಇದಾಗಿದೆ. ರಬಕವಿ ಬನಹಟ್ಟಿಯಲ್ಲಿ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ನಗರದ ವಿವಿಧ ಶಾಲೆಯ ಮಕ್ಕಳು ಛದ್ಮ ವೇಷಧಾರಿಗಳಾಗಿ ಗಮನ ಸೆಳೆದರು.
ವೇಷ ಧರಿಸಿದ ಮಕ್ಕಳ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಮೆರವಣಿಗೆಯ ನಡೆಯುವ ರಸ್ತೆಯ ಇಬ್ಬದಿಗಳಲ್ಲಿ ನಿಂತ ಜನರು ಮಕ್ಕಳಿಗೆ ಹೂಮಳೆಗೈದರು. ಮಂಗಳವಾರ ಪೇಟೆಯ ಬೀದಿಯನ್ನು ರಂಗೋಲಿಯಿಂದ ಶೃಂಗರಿಸಲಾಗಿತ್ತು.
ಹಿರೇಮಠದ ಶರಣಬಸವ ಶಿವಾಚಾರ್ಯರು, ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ, ವಿದ್ಯಾ ಧಬಾಡಿ, ಶ್ರೀಶೈಲ ಯಾದವಾಡ, ಅಶೋಕ ರಾವಳ, ಸುರೇಶ ಚಿಂಡಕ, ಪ್ರಭಾಕರ ಮುಳೆದ, ಶ್ರೀನಿವಾಸ ಹಳ್ಯಾಳ, ಮುರಳಿ ಕಾಬರಾ, ಚಿದಾನಂದ ಹೊರಟ್ಟಿ, ವೀರೂಪಾಕ್ಷಯ್ಯ ಮಠದ, ಕಿರಣಕುಮಾರ ದೇಸಾಯಿ, ಗೋವಿಂದ ಡಾಗಾ, ಶಾಂತಾ ಸೋರಗಾವಿ, ಗೌರಿ ಮಿಳ್ಳಿ, ಶಶಿಕಲಾ ಸಾರವಾಡ, ಡಾ.ಅನಂತಮತಿ ಎಂಡೊಳ್ಳಿ ಸೇರಿದಂತೆ ಅನೇಕರು ಇದ್ದರು.