Advertisement
ಇಂತಹ ಲೋಕವಿಶ್ರುತ ಅಯೋಧ್ಯಾ ನಗರಿಯು ಹನ್ನೆರಡು ಯೋಜನ ಉದ್ದ, ಮೂರು ಯೋಜನ ಅಗಲದ ನಗರ ರಚನೆಯಂತೆ. ಮಾನವೇಂದ್ರ ವೈವಸ್ವತ ಮನುವಿನಿಂದ ನಿರ್ಮಿತ ನಗರವಿದು. ಅಗಲ ಮತ್ತು ಸಮತಟ್ಟಾದ ಹೆದ್ದಾರಿ. ಹೆದ್ದಾರಿಯ ಅಕ್ಕಪಕ್ಕ ಸುಗಂಧಭರಿತ ಸಾಲು ಮರಗಳು.
Related Articles
Advertisement
ಅಯೋಧ್ಯೆಯನ್ನು ಆಳಿದ ಇ ಕ್ಷ್ವಾಕು ವಂಶದ ರಾಜರುಗಳಿಂದಾಗಿ ಜನರು ನಿತ್ಯ ಸಂತೋಷಿಗಳು, ಧರ್ಮಾತ್ಮರು, ಸ್ವಕರ್ಮಶೂರರು, ಕಷ್ಟಸಹಿಷ್ಣುಗಳು, ದಾನಶೀಲರಾಗಿಯೂ ಮತ್ತು ಜಿತೇಂದ್ರಿಯರೂ ಆಗಿದ್ದರು. ಕರ್ಣಾಭರಣ, ಶಿರಸ್ತ್ರಾಣ, ರತ್ನಮಾಲೆಗಳನ್ನೆಲ್ಲಾ ಪ್ರಜೆಗಳು ಧರಿಸುತ್ತಿದ್ದರು. ಜನರು ದೀರ್ಘಾಯುಷ್ಯವುಳ್ಳವರಾಗಿದ್ದರು. ವಿಶೇಷವಾಗಿ ಕಟ್ಟಿದ ವಿಮಾನವೆಂಬ ರಾಜಗೃಹಗಳು, ಬೀದಿಗೆ ನೆರಳು ಬೀರುವ ಮಹಡಿ ಮನೆಯ ಸಾಲು, ಧನಧಾನ್ಯಾದಿ ಸಮಸ್ತ ವಸ್ತು ಸಂಗ್ರಹದಿಂದ ಅಯೋಧ್ಯೆ ಸಮೃದ್ಧವಾಗಿತ್ತು.
ಅಯೋಧ್ಯೆಯ ಸುತ್ತ ದುರ್ಗಗಳು, ಅಭೇದ್ಯವಾದ ಕೋಟೆ, ಕೆಳಗೆ ಕೊತ್ತಲು ಮತ್ತು ಕೋಟೆಯೊಳಗೆ ಶತ್ರು ವಿನಾಶಕ್ಕೆ ಶತಘ್ನಿಗಳೆಂಬ ಯಂತ್ರಗಳೂ ಸಿದ್ಧವಾಗಿರುತ್ತಿದ್ದವು. ಕೋಸಲದ ಅಶ್ವಸೇನೆ ಮತ್ತು ಗಜಪಡೆಗೆ ಸಮನಾದ ಸ್ಫರ್ಧೆ ಯಾರಿಂದಲೂ ಸಾಧ್ಯವಿರಲಿಲ್ಲ. ಹೇಗೆ ಸಿಂಹವಿರುವ ಗುಹೆಯನ್ನು ಹೊರಗಡೆ ನಿಂತು ಯಾರೂ ಕಾವಲುಕಾಯಬೇಕಾಗಿಲ್ಲವೋ, ಹಾಗೆಯೇ ಮಹಾಪರಾಕ್ರಮಿಗಳಾದ ಯೋಧರಿರುವರೆಂದು ಅಯೋಧ್ಯಾನಗರದ ಸಮೀಪಕ್ಕೂ ಶತ್ರುಗಳು ಧಾವಿಸುತ್ತಿರಲಿಲ್ಲ. ಹಾಗಾಗಿ ಅಯೋಧ್ಯೆಯು ಅಭೇದ್ಯ ನಗರ. ಅಯೋಧ್ಯೆ ಎಂಬ ಹೆಸರಿಗೂ ಇದೇ ಕಾರಣ. ಮತಾಂಧರ ದಾಳಿಗೆ ಸಿಕ್ಕಿ ಕಗ್ಗಂಟಾಗುವ ಮೊದಲು ಅಯೋಧ್ಯೆಯ ನೆಲವು ಯಾವ ಯುದ್ಧಕ್ಕೂ ಸಾಕ್ಷಿಯಾಗಿಲ್ಲ. ವಾಲ್ಮೀಕಿ ರಾಮಾಯಣದ ಅಯೋಧ್ಯೆಯ ವಿವರಣೆ ಕಣ್ಣಿಗೆ ಕಟ್ಟುವಷ್ಟು ಸುಲಲಿತ ಮತ್ತು ಅವರ್ಣನೀಯ.
ಅಯೋಧ್ಯೆಯು ಸಪ್ತ ಮೋಕ್ಷಪುರಿಗಳಲ್ಲೂ ಹೆಸರಿಸಲ್ಪಟ್ಟ ಪುಣ್ಯನಗರಿ, ರಘುವಂಶದ ರಾಜಧಾನಿ. ರಾಮಚರಿತ ಮಾನಸದ ಬಾಲಕಾಂಡದಲ್ಲಿ, ಗೋಸ್ವಾಮಿ ತುಳಸೀದಾಸರು ರಾಮನ ಅಯೋಧ್ಯೆಯು ಭೂಮಂಡಲದ ಸರ್ವೋಚ್ಚ ವಾಸಸ್ಥಾನ ಮತ್ತು ಮೋಕ್ಷವನ್ನು ನೀಡುತ್ತದೆ ಎಂದು ಬರೆಯುತ್ತಾರೆ. ಸರಯೂ ನದಿಯಲ್ಲಿ ಸ್ನಾನ ಮಾಡುವುದರಿಂದ ಮಾತ್ರವಲ್ಲ, ಅದನ್ನು ಸ್ಪರ್ಶಿಸುವ ಮತ್ತು ನೋಡುವ ಮೂಲಕವೂ ವ್ಯಕ್ತಿಯ ಎಲ್ಲಾ ಪಾಪಗಳು ನಾಶವಾಗುತ್ತವೆ. ಉತ್ತರ ಕಾಂಡದಲ್ಲಿ ರಾಮಚಂದ್ರನು ವನವಾಸದಿಂದ ಹಿಂದಿರುಗಿದ ಅನಂತರವೂ ಅಯೋಧ್ಯೆಯನ್ನು ವಿವರಿಸಲಾಗಿದೆ. ಅಯೋಧ್ಯೆಯ ಜನರ ಮನೆಗಳು ಚಿನ್ನ ಮತ್ತು ರತ್ನಗಳಿಂದ ಅಲಂಕರಿಸಲ್ಪಟ್ಟಿತ್ತು. ಮನೆಗಳ ಅಟ್ಟಣಿಗೆಯ ಕಂಬಗಳು ಮತ್ತು ಮಹಡಿಗಳವರೆಗೆ ವರ್ಣರಂಜಿತ ರತ್ನಗಳಿಂದ ರೂಪುಗೊಂಡಿವೆ. ತುಳಸಿಯ ಜತೆಗೆ, ಸಾಧುಗಳು ಸರಯೂ ನದಿಯ ದಡದಲ್ಲಿ ತುಳಸಿಯೊಂದಿಗೆ ಅನೇಕ ಮರಗಳನ್ನು ನೆಟ್ಟಿದ್ದಾರೆ ಎನ್ನುವ ಅಯೋಧ್ಯೆಯ ಬಣ್ಣನೆಯಿದೆ. ರಾಮರಾಜ್ಯದ ಅಯೋಧ್ಯೆ, ಅವಧ್ ಪ್ರಾಂತ್ಯದ ಮತ್ತು ಈಗಿನ ಜಿಲ್ಲೆಯೂ ಹೌದು. ಅಯೋಧ್ಯೆಯು ಕೊಸಲೇಂದ್ರ ಶ್ರೀರಾಮಚಂದ್ರನ ನಗರಿ. ಪ್ರಾಣಪ್ರತಿಷ್ಠೆಯ ಮೂಲಕ ಸ್ಥಿತವಾಗುವ ಸೀತಾರಾಮನು ಎಲ್ಲರನ್ನೂ ಅನುಗ್ರಹಿಸಲಿ. ಅಯೋಧ್ಯೆಯ ಗತ ವೈಭವ ಪುನಃ ಮೇಳೈಸಲಿ.
-ವಿಶ್ವನಾಥ ಭಟ್
ಧಾರವಾಡ