ನವದೆಹಲಿ: ಅಯೋಧ್ಯೆಯ ಜಮೀನು ಮಾಲೀಕತ್ವ ಯಾರಿಗೆ ಸೇರಬೇಕು ಎಂಬುದರ ಬಗ್ಗೆ ಮಧ್ಯಸ್ಥಿಕೆ ಪ್ರಕ್ರಿಯೆಯನ್ನು ಮಾಸಾಂತ್ಯದ ವರೆಗೆ ಮುಂದುವರಿಸಲು ಸುಪ್ರೀಂಕೋರ್ಟ್ ಗುರುವಾರ ಅನುಮತಿ ನೀಡಿದೆ. ಜತೆಗೆ ಆ.1ರಂದು ವರದಿ ಸಲ್ಲಿಸುವಂತೆ ಸೂಚಿಸಿದೆ. ಅಗತ್ಯ ಬಿದ್ದರೆ ಆ.2ರಿಂದ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಸಾಂವಿಧಾನಿಕ ಪೀಠ ಹೇಳಿದೆ. ನಿವೃತ್ತ ನ್ಯಾಯಮೂರ್ತಿ ಎಫ್.ಎಂ.ಐ.ಖಲೀಫುಲ್ಲಾ ನೇತೃತ್ವದ ಸಂಧಾನ ಸಮಿತಿ ವರದಿ ಸಲ್ಲಿಸಬೇಕು ಎಂದು ಜು.11ರಂದು ಸುಪ್ರೀಂಕೋರ್ಟ್ ಹೇಳಿತ್ತು. ಆ ದಿನ ವಿಚಾರಣೆ ನಡೆಸಿದ್ದ ನ್ಯಾಯಪೀಠ 18ರಂದು ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿತ್ತು. ಜತೆಗೆ ಜು.25ರಿಂದ ಅಗತ್ಯ ಬಿದ್ದರೆ ವಿಚಾರಣೆ ನಡೆಸುವುದಾಗಿ ಹೇಳಿತ್ತು. ‘ಜು.31ರ ವರೆಗೆ ಮಧ್ಯಸ್ಥಿಕೆ ಸಮಿತಿ ಸೌಹಾರ್ದಯುತವಾಗಿ ವಿವಾದ ಬಗೆಹರಿಸುವ ಪ್ರಯತ್ನ ಮಾಡಲಿ. ಆ.1ರಂದು ಈ ಕುರಿತ ವರದಿ ಸಲ್ಲಿಸಬೇಕು. ಅಗತ್ಯ ಬಿದ್ದರೆ ಆ.2ರಿಂದ ವಿಚಾರಣೆ ನಡೆಸೋಣ’ ಎಂದು ನ್ಯಾಯಪೀಠ ಹೇಳಿತು.