Advertisement

Ayodhya ನಮ್ಮ ಜೇಬಿನ ಒಂದು ರೂಪಾಯಿಯ ವಿಶ್ವರೂಪ

04:40 PM Jan 28, 2024 | Team Udayavani |

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಲೋಕಾರ್ಪಣೆ ಗೊಂಡಿದೆ. ನಿತ್ಯವೂ ಲಕ್ಷಾಂತರ ಮಂದಿ ಭಕ್ತರು ಮಂದಿರಕ್ಕೆ ಭೇಟಿ ನೀಡುತ್ತಿದ್ದಾರೆ. ಶೀರಾಮನನ್ನು ಪೂಜಿಸಿ ಭಾವಪರವಶರಾಗಿ ಬರುತ್ತಿದ್ದಾರೆ. ಇಂದು ಎಲ್ಲರ ಕೇಂದ್ರ ಬಿಂದು ಅಯೋಧ್ಯೆ. ಕೇಂದ್ರ ಹಾಗೂ ಉತ್ತರ ಪ್ರದೇಶ ಸರಕಾರಗಳೂ ವರ್ಷವಿಡೀ ಬರುವ ಭಕ್ತರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಶ್ರಮಿಸ ತೊಡಗಿವೆ. ಸುಮಾರು 85 ಸಾವಿರ ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳು ಜಾರಿಗೊಳ್ಳತೊಡಗಿವೆ. ಉತ್ತರ ಪ್ರದೇಶ ಸರಕಾರದ ಮಾಸ್ಟರ್‌ ಪ್ಲಾನ್‌ ಪ್ರಕಾರ 2031ರೊಳಗೆ ಅಯೋಧ್ಯೆ ಅತ್ಯಾಕರ್ಷಕ ಹಾಗೂ ಅತೀ ಸುಸಜ್ಜಿತ ಪ್ರವಾಸಿ ತಾಣವಾಗಿ ರೂಪುಗೊಳ್ಳಲಿದೆ. ಈ ಮೂಲಕ ಆರ್ಥಿಕ ಹಾಗೂ ಪ್ರವಾಸಿ ಶಕ್ತಿ ಕೇಂದ್ರಗಳನ್ನಾಗಿ ರೂಪಿಸುವುದು ಸ್ಥಳೀಯ ಸರಕಾರದ ಆಲೋಚನೆ.

Advertisement

ಅದೀಗ ಆರಂಭವಾಗಿದೆ. ಹೊಟೇಲ್‌ಗ‌ಳು, ವಸತಿಗೃಹಗಳಿಂದ ಹಿಡಿದು ಸಂಪರ್ಕ ವ್ಯವಸ್ಥೆ, ಸಾರಿಗೆ ಸೌಲಭ್ಯಗಳು ಹೀಗೆ-ಎಲ್ಲದಕ್ಕೂ ಹೂಡಿಕೆ ಆಗತೊಡಗಿದೆ. ದೊಡ್ಡ ಕಂಪೆನಿಗಳು ಅದರಲ್ಲೂ ವಿಶೇಷವಾಗಿ ಆತಿಥೊÂà ದ್ಯಮ ಕ್ಷೇತ್ರದಲ್ಲಿರುವ ಕಂಪೆನಿಗಳೆಲ್ಲ ಅಯೋಧ್ಯೆಯತ್ತ ಹೊರಟಿವೆ. ಒಂದು ಅಂದಾಜಿನ ಸಮೀಕ್ಷೆ ಪ್ರಕಾರ ಪ್ರವಾಸಗಳ ಪೈಕಿ ಧಾರ್ಮಿಕ ತಾಣಗಳ ಪ್ರವಾಸ ಅಥವಾ ತೀರ್ಥ ಯಾತ್ರೆಯನ್ನು ಕೈಗೊಳ್ಳುವವರ ಸಂಖ್ಯೆ ಉಳಿದ ಪ್ರವಾಸಗಳ (ವೃತ್ತಿ, ಶಿಕ್ಷಣ, ಮನೋರಂಜನೆ ಇತ್ಯಾದಿ ಕಾರಣಗಳಿಗೆ) ಲೆಕ್ಕಾಚಾರಕ್ಕಿಂತ ಹೆಚ್ಚಿದೆಯಂತೆ. ಅಂದರೆ ದೇಶದ, ರಾಜ್ಯದ ಹಾಗೂ ನಮ್ಮ ಊರಿನ ಆರ್ಥಿ ಕತೆಯನ್ನು ಕಾಪಾಡುವ ಶಕ್ತಿ ಹಾಗೂ ಸಾಮರ್ಥ್ಯ  ನಮ್ಮ ದೇವಸ್ಥಾನ, ಮಸೀದಿ, ಚರ್ಚ್‌ಗಳಿಗೆ ಸೇರಿದಂತೆ ಎಲ್ಲ ಬಗೆಯ ಪ್ರಾರ್ಥನಾ, ಆರಾಧನಾ ತಾಣಗಳಿಗಿವೆ ಎಂಬುದು ಸಾಬೀತಾಗಿರುವ ಅಂಶ. ಸೌದಿ ಅರೇಬಿಯಾದ ಮೆಕ್ಕಾ ಮದೀನಕ್ಕೆ ತೆರಳುವ ಶ್ರದ್ಧಾಳುಗಳಿಂದ ಸ್ಥಳೀಯ ಸರಕಾರಕ್ಕೆ ಬರುವ ಆದಾಯ ಆ ದೇಶದ ರಾಷ್ಟ್ರೀಯ ವರಮಾನ (ಜಿಡಿಪಿ)ದ ಶೇ. 7 ರಷ್ಟು. ಅಂದರೆ ತೈಲೇತರ ಮೂಲಗಳ ಒಟ್ಟು ಆದಾಯದ ಶೇ. 20 ರಷ್ಟು. ಅಂದರೆ ಧಾರ್ಮಿಕ ಸ್ಥಳಗಳಲ್ಲಿನ ಆರ್ಥಿಕತೆಯನ್ನು ಲೆಕ್ಕ ಹಾಕಿ. ಇದಕ್ಕೆ ಬೇರೆ ಯಾವುದ್ಯಾವುದೋ ಕನ್ನಡಕಗಳಿಂದ ನೋಡುವ ಅಗತ್ಯವಿಲ್ಲ. ಅದರ ಬದಲಾಗಿ ಈ ಎಲ್ಲ ಆರಾಧನಾ ಅಥವಾ ಪ್ರಾರ್ಥನಾ ತಾಣ ಗಳನ್ನು ಸ್ಥಳೀಯ ಆರ್ಥಿಕತೆಯ ಪುನರುಜ್ಜೀವನಕ್ಕೆ ಶಕ್ತಿ ಕೇಂದ್ರಗಳನ್ನಾಗಿ ಬಳಸಿಕೊಳ್ಳ ಬಾರದು ಎಂಬುದನ್ನು ಗಮನಿಸಬೇಕು. ಯಾಕೆಂದರೆ, ಮುಂದಿನ ಜಗತ್ತು ಇರುವುದೇ “ಸ್ಥಳೀಯತೆಯೇ ಸರ್ವಸ್ವ’ ಎನ್ನುವುದರಲ್ಲಿ. ನಿರುದ್ಯೋಗ, ನಗರ ವಲಸೆ, ನಿರ್ವಸತಿಯಂಥ ಆಧುನಿಕ ಸಮಸ್ಯೆಗಳಿಗೆ-ಸವಾಲುಗಳಿಗೆ ಪರಿಹಾರ ಇರುವುದು ಸ್ಥಳೀಯ ಆರ್ಥಿಕತೆಯ ಪುನರುಜ್ಜೀವನದಲ್ಲಿ. ನಮ್ಮ ಧಾರ್ಮಿಕ, ಆರಾಧನಾ ತಾಣಗಳು ಅಂಥದೊಂದು ಬಿಂದು ಗಳಲ್ಲಿ ಒಂದು. ಇದು ಸತ್ಯವೂ ಹೌದು, ವಾಸ್ತವವೂ ಸಹ.
***
ಈಗ ನಮ್ಮ ಊರಿನ ದೇವಸ್ಥಾನಗಳಿಗೆ ಬರೋಣ. ಉಡುಪಿಯನ್ನೇ ಉದಾಹರಣೆಯಾಗಿ ತೆಗೆದುಕೊ ಳ್ಳೋಣ. ಅದರ ರಥಬೀದಿಯಲ್ಲಿ ಅಷ್ಟಮಠಗಳಲ್ಲದೇ ಇನ್ನಷ್ಟು ದೇವಸ್ಥಾನಗಳಿವೆ. ಸುತ್ತಲೂ ನೂರಾರು ಅಂಗಡಿ ಮಳಿಗೆಗಳಿವೆ. ಅದಕ್ಕೆ ಹೊಂದಿಕೊಂಡ ರಸ್ತೆಗಳಲ್ಲಿ ಇನ್ನಷ್ಟು ವ್ಯಾಪಾರಸ್ಥರಿದ್ದಾರೆ. ಹಾಗೆಯೇ ಅರಳಿಕೊಳ್ಳುತ್ತಾ ಅರಳಿಕೊಳ್ಳುತ್ತಾ ಒಂದು ನಗರವಾಗಿ ಬೆಳೆದಿದೆ. ಇಲ್ಲಿ ನಿತ್ಯವೂ ಸಾವಿರಾರು ಮಂದಿ ಪ್ರವಾಸಿಗರು ಬರುತ್ತಾರೆ. ಅವರೆಲ್ಲರೂ ದೇವಸ್ಥಾನಗಳಿಗೆ ಭೇಟಿ ನೀಡಿ ವಸತಿ, ಊಟ ಇತ್ಯಾದಿ ಮೂಲ ಅಗತ್ಯಗಳಿಗೆ ಈ ಅಂಗಡಿ, ವ್ಯಾಪಾರಸ್ಥರನ್ನೇ ಆಶ್ರಯಿ ಸುತ್ತಾರೆ. ಅದಕ್ಕಾಗಿ ಹಣ ವೆಚ್ಚ ಮಾಡುತ್ತಾರೆ. ಸ್ಥಳೀಯ ವ್ಯಾಪಾರಿಗಳು ಆ ಹಣವನ್ನು ಉಳಿತಾಯ ಹಾಗೂ ಹೂಡಿಕೆಯ ಕ್ರಮಗಳಿಗೆ ಬಳಸುತ್ತಾರೆ. ಊರು ಬೆಳೆಯ ತೊಡಗುತ್ತದೆ. ಜತೆಗೆ ಆರ್ಥಿಕತೆಯೂ ಸಹ. ಹೂವು ಹಣ್ಣಿನಿಂದ ಹಿಡಿದು ಊದಿನಕಡ್ಡಿವರೆಗೂ, ಫೋಟೋ, ಪೂಜಾ ಸಾಮಗ್ರಿಗಳಿಂದ ಆರಂಭಿಸಿ ಸ್ಥಳೀಯ ಕರಕುಶಲ ವಸ್ತುಗಳವರೆಗೂ ಎಲ್ಲದಕ್ಕೂ ಅಲ್ಲಿ ಆರ್ಥಿಕ ಮೌಲ್ಯವಿದೆ. ಜತೆಗೆ ಔದ್ಯೋಗಿಕ ಮೌಲ್ಯವಿದೆ. ಬರೀ ಅಯೋಧ್ಯೆ ಪ್ರಸ್ತುತ ಸುಮಾರು 20 ಸಾವಿರ ಮಂದಿಗೆ ಪ್ರತ್ಯಕ್ಷವಾಗಿ ಉದ್ಯೋಗ ಒದಗಿಸಿದೆಯಂತೆ. ಪರೋಕ್ಷ ಹಾಗೂ ಪೂರಕ ಉದ್ಯೋಗಗಳು ಇನ್ನೂ ಲಕ್ಷಾಂತರ.

ನೀವು ಒಮ್ಮೆ ಬೆಂಗಳೂರಿನ ಕೃಷ್ಣರಾಜೇಂದ್ರ ಮಾರು ಕಟ್ಟೆಗೋ, ಮೈಸೂರಿನ ಮಾರುಕಟ್ಟೆಗೋ ಭೇಟಿ ಕೊಡಿ. ಅಲ್ಲಿ ತರಕಾರಿ, ದಿನಸಿ ಸಾಮಗ್ರಿ ಬಿಡಿ. ಬರೀ ಹೂವಿನ ಮಾರುಕಟ್ಟೆ ನೋಡಿಕೊಂಡು ಬಂದರೆ ಅಚ್ಚರಿಯಾಗು ತ್ತದೆ. ಸಾವಿರಾರು ಮಂದಿ ಈ ವ್ಯಾಪಾರದಲ್ಲಿ ತೊಡಗಿ ಕೊಂಡಿರುವುದು ಒಂದು ಎಳೆಯಾದರೆ, ನಿತ್ಯವೂ ಸಾವಿರಾರು ಕೋಟಿ ರೂ.ಗಳ ವಹಿವಾಟು ನಡೆಯುತ್ತದೆ ಎಂದರೆ ಒಪ್ಪಲೇಬೇಕು. ಅಂದರೆ ಈ ಹೂವುಗಳೆಲ್ಲ ಎಲ್ಲಿಂದ ಬಂದಿವೆ? ನಮ್ಮ ಊರುಗಳಿಂದಲೇ, ನಮ್ಮ ಹಳ್ಳಿಗಳಿಂದಲೇ. ಇದು ಹೂವಿನ ಕಥೆಯಷ್ಟೇ.

ಈ ಮಾತು ಉಳಿದ ಧಾರ್ಮಿಕ ತಾಣಗಳಿಗೂ ಅನ್ವ ಯ ವಾಗುತ್ತದೆ. ಪ್ರವಾಸಿ ತಾಣಗಳಿಗೂ ಸಹ. ಮೈಸೂ ರಿನ ಅರಮನೆಯನ್ನು ನೋಡಲು ಕಳೆದ ವರ್ಷ ಸುಮಾ ರು 33 ಲಕ್ಷ ಮಂದಿ ಭೇಟಿ ನೀಡಿದ್ದರು. ವಾರಾಣಸಿಗೆ 2022 ರಲ್ಲಿ ಭೇಟಿ ಕೊಟ್ಟವರ ಸಂಖ್ಯೆ ಸುಮಾರು 7.2 ಕೋಟಿ. ವೈಷ್ಣೋದೇವಿಗೆ ಸುಮಾರು 91 ಲಕ್ಷ. ತಿರು ಪತಿಗೆ ನಿತ್ಯವೂ ಭೇಟಿ ನೀಡುವ ಸರಾಸರಿ ಸಂಖ್ಯೆ ಒಂ ದು ಲಕ್ಷ. ಅಯೋಧ್ಯೆಯಲ್ಲೂ ಇರುವ ನಿರೀಕ್ಷೆ ಎಷ್ಟು? ಮುಂದಿನ ದಿನಗಳಲ್ಲಿ ನಿತ್ಯ 3 ರಿಂದ 4 ಲಕ್ಷ ಮಂದಿ.
***
ಸ್ಥಳೀಯ ಆರ್ಥಿಕತೆ ಎನ್ನುವುದು ಯಾವಾಗಲೂ ಗುಪ್ತಗಾಮಿನಿ. ನಮಗೆ ಮೇಲ್ನೋಟಕ್ಕೆ ತೋರುವುದಿಲ್ಲ. ಆದರೆ ಅದರ ಹರಿವಿನ ಅಗಾಧತೆ ಹೇಳಲಸಾಧ್ಯ. ಶ್ರೀ ರಾಮ ಮಂದಿರದ ಪ್ರಾಣಪ್ರತಿಷ್ಠೆಯ ಸಮಾರಂಭ ಹಾಗೂ ಅದಕ್ಕೆ ಪೂರಕವಾದ ಒಂದು ವಾರದ ಚಟು ವಟಿಕೆಗಳ ಆರ್ಥಿಕ ವಹಿವಾಟಿನ ಲೆಕ್ಕಾಚಾರ ಈಗಾಗಲೇ ಎಲ್ಲರಿಗೂ ತಿಳಿದೇ ಇದೆ. ಸುಮಾರು ಒಂದು ಲಕ್ಷ ಕೋಟಿ ರೂ. ಗಳು. ನಮ್ಮ ಊರಿನಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯೆಂದರೆ ನಮ್ಮ ಊರಿನಲ್ಲಿ ಹತ್ತಾರು ಲಕ್ಷ ರೂ. ಗಳ ವಹಿವಾಟು.

ಇಂಥದೊಂದು ಸಾಧ್ಯತೆಯನ್ನು ನಾವು ಉಳಿಸಿಕೊಳ್ಳುವ ಬಗೆ ಹೇಗೆ? ಸ್ಥಳೀಯ ಸಂಪನ್ಮೂಲಗಳು ಹಾಗೂ ಕೌಶಲಗಳನ್ನು ಪರಸ್ಪರ ಸಂಯೋಜಿಸುವುದು ಹೇಗೆ? ಆ ಮೂಲಕ ಉದ್ಯೋಗಕ್ಕಾಗಿ ಊರು ಬಿಟ್ಟು ನಗರಗಳಿಗೆ ವಲಸೆ ಹೋಗುವ ಯುವ ತಲೆಮಾರನ್ನು ತಡೆಯುವುದು ಹೇಗೆ? ಇದರ ಮುಖೇನ ಸ್ಥಳೀಯ ಅಭಿವೃದ್ಧಿಗೆ ನಾವು ಹೆಗಲಾಗುವುದು ಹೇಗೆ? ಸ್ಥಳೀಯ ಪರಿಸರ, ಸಂಸ್ಕೃತಿಯನ್ನು ಸುಸ್ಥಿರವಾಗಿಟ್ಟುಕೊಂಡು ಜೀವಿಸು ವುದು ಹೇಗೆ – ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಹುಡುಕಲು ಹಾಗೂ ಹುಡುಕುವವರ ಜತೆಗೂಡಲು ಇದು ಸಕಾಲ.
***
ನಾವು ಪ್ರವಾಸಿಗರಿಗಾಗಿ, ಶ್ರದ್ಧಾಳುಗಳಾಗಿಯೂ ಈ ಸ್ಥಳೀಯ ಆರ್ಥಿಕತೆಯ ಪುನರುಜ್ಜೀವನಕ್ಕೆ ಕೈ ಜೋಡಿ ಸಲು ಸಾಧ್ಯವಿದೆ. ಅದು ಸರಳ ಹಾಗೂ ಸುಲಭ. ನಾವು ಒಂದು ದೇವಸ್ಥಾನಕ್ಕೆ ಹೋದೆವು ಎಂದುಕೊ ಳ್ಳೋಣ. ಅಲ್ಲಿ ಪುಟ್ಟ ಹುಡುಗಿಯೊಂದು ಬಗಲಲ್ಲಿ ಒಂದು ಬುಟ್ಟಿಯನ್ನು ಹಿಡಿದುಕೊಂಡು, ಕೈಯಲ್ಲಿ ಒಂದು ತಾವರೆ ಹಿಡಿದು ಕೊಂಡು ನಮ್ಮ ಮುಂದೆ ನಿಲ್ಲುತ್ತಾಳೆ, “ಅಣ್ಣಾ, ಒಂದು ಹೂವು ತೆಗೆದುಕೊಳ್ಳಿ ದೇವರಿಗೆ. ದೇವಿಗೆ ತಾವರೆ ಇಷ್ಟ’ ಎನ್ನುತ್ತಾಳೆ. ನಾವು ಬೇಡ ಎಂದುಕೊಂಡು ಮುನ್ನಡೆ ಯುತ್ತೇವೆ. ಅವಳು ನಮ್ಮನ್ನು ಹಿಂಬಾಲಿಸುತ್ತಾಳೆ. ಆಗಲೂ ನಾವು ಬೇಡ ಎನ್ನುತ್ತೇವೆ. ಅವಳು ಮತ್ತೂ ಹಿಂಬಾಲಿ ಸುತ್ತಾಳೆ. ಇವಳ ಕಾಟ ಸಾಕಪ್ಪ ಎಂದು ಹತ್ತು ರೂ. ಕೊಟ್ಟು ತಾವರೆ ಹೂವು ತೆಗೆದುಕೊಳ್ಳುತ್ತೇವೆ. ಆಗ ಆ ಹುಡುಗಿಯ ಮುಖದಲ್ಲಿ ಸಣ್ಣದೊಂದು ನಗೆ ತೇಲಿ ಬರುತ್ತದೆ. ಈ ನಗೆ ಬರೀ ಹೂವು ಕೊಂಡದ್ದಕ್ಕಷ್ಟೇ ಅಲ್ಲ, ಅವಳ ಬಾಳಿನ ಥೈಲಿಯನ್ನು ತುಂಬಿದ್ದಕ್ಕಾಗಿ. ಆ ಮೂಲಕ ಸ್ಥಳೀಯ ಆರ್ಥಿಕತೆಯ ಥೈಲಿಯ ಭಾರವನ್ನು ಹೆಚ್ಚಿಸಿದ್ದಕ್ಕಾಗಿ.

Advertisement

ನಮ್ಮ ಹತ್ತು ರೂಪಾಯಿ ಮಾಡುವ ಮ್ಯಾಜಿಕ್‌ ಎಷ್ಟು ದೊಡ್ಡದು ಎಂಬುದು ಅರ್ಥವಾಗುವುದೇ ಆಗ. ಹಾಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು “ವೋಕಲ್‌ ಫಾರ್‌ ಲೋಕಲ್‌’ ಎಂದು ಕರೆ ನೀಡಿದ್ದು. ಬರಿದೇ ಹೊರಗಿನ ಆಮದನ್ನು ತಡೆಯುವುದಕ್ಕಷ್ಟೇ ಅಲ್ಲ, ಸ್ಥಳೀಯ ಬಾಹುಗಳಿಗೆ (ಶ್ರಮಕ್ಕೆ) ಶಕ್ತಿ ತುಂಬಲು, ಬಲವರ್ಧನೆಗೊಳಿಸಲು.
ಕೆರೆಯ ಒಂದು ಬದಿಯಲ್ಲಿದ್ದ ಒಬ್ಬ ಚಿಣ್ಣ, ಸಣ್ಣದೊಂದು ಸಪಾಟಿನ ಕಲ್ಲು ತೆಗೆದು ಜೋರಾಗಿ ಒಗೆಯುತ್ತಾನೆ. ಆ ಕಲ್ಲು ಬಿದ್ದ ಜಾಗದಲ್ಲಿ ಒಂದು ಸಣ್ಣ ತರಂಗ ಉತ್ಪತ್ತಿಯಾಗುತ್ತದೆ. ಅದು ವಿಸ್ತಾರಗೊಳ್ಳುತ್ತಾ, ವಿಸ್ತಾರಗೊಳ್ಳುತ್ತಾ ಇಡೀ ಕೆರೆಯನ್ನು ಆವರಿಸಿಕೊಳ್ಳುತ್ತದೆ. ಅವನು ನಿಂತ ದಡದ ಬುಡಕ್ಕೂ ಬಂದು ತಲುಪುತ್ತದೆ.

ಹೀಗೆಯೇ ನಮ್ಮ ಜೇಬಿನಲ್ಲಿರುವ ಒಂದೇ ಒಂದು ರೂಪಾಯಿ ಸಹ. ಸ್ಥಳೀಯ ಉದ್ಯಮಗಳಿಗೆ ಹಾಕಿದರೆ ಅದು ದೇಶದ ಜೇಬಿಗೆ ಹೋಗಿ ಸೇರುತ್ತದೆ. ಸೇರುವಾಗ ಒಂದೇ ರೂಪಾಯಿ ಆಗಿ ಸೇರುವುದಿಲ್ಲ. ಬದಲಾಗಿ ಸಣ್ಣ ಅಲೆ ಬೃಹತ್‌ ರೂಪ ತಳೆದಂತೆಯೇ ನಮ್ಮ ಒಂದು ರೂಪಾ ಯಿ ಸಹ ವಿಶ್ವರೂಪ ತಳೆದಿರುತ್ತದೆ ಲಕ್ಷವಾ ಗಿಯೋ, ಕೋಟಿಗಳಾಗಿಯೋ, ಲಕ್ಷ ಕೋಟಿಗಳಾಗಿಯೋ.

ಹಾಗಾಗಿ ನಮ್ಮ ದೇಗುಲಗಳು, ಪ್ರಾರ್ಥನಾ ಮಂದಿರಗಳೂ ಸಹ ಸ್ಥಳೀಯ ಆರ್ಥಿಕತೆಯ ಬೆನ್ನೆಲುಬು ಎಂಬುದನ್ನು ಮರೆಯದಿರೋಣ.

- ಅರವಿಂದ ನಾವಡ

Advertisement

Udayavani is now on Telegram. Click here to join our channel and stay updated with the latest news.

Next