ಪಣಜಿ : ‘ಗೋವಾದಲ್ಲಿ ಆಮ್ ಆದ್ಮಿ ಪಕ್ಷದ ಸರಕಾರ ರಚಿಸಿದರೆ, ಹಿಂದೂಗಳಿಗೆ ಅಯೋಧ್ಯೆಗೆ ಮತ್ತು ಕ್ರಿಶ್ಚಿಯನ್ನರಿಗೆ ವೆಲಂಕಣಿಗೆ, ಮುಸ್ಲಿಮರಿಗೆ ಅಜ್ಮೀರ್ ಷರೀಫ್ ಮತ್ತು ಸಾಯಿಬಾಬಾರನ್ನು ಪೂಜಿಸುವವರಿಗೆ ಶಿರಡಿ ದೇವಸ್ಥಾನಕ್ಕೆ ಉಚಿತ ಉಚಿತ ಯಾತ್ರೆಯನ್ನು ಏರ್ಪಡಿಸುತ್ತೇವೆ’ ಎಂದು ದೆಹಲಿ ಸಿಎಂ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸೋಮವಾರ ಭರವಸೆ ನೀಡಿದ್ದಾರೆ.
ಕೇಜ್ರಿವಾಲ್ ಅವರು ಗೋವಾದಲ್ಲಿ ಭರ್ಜರಿ ಚುನಾವಣಾ ಸಿದ್ಧತೆಗಳನ್ನು ನಡೆಸುತ್ತಿದ್ದು, ಹಲವು ಭರವಸೆಗಳನ್ನು ನೀಡುತ್ತಿದ್ದಾರೆ.
‘ನಮ್ಮ ಜೀವನದಲ್ಲಿ ಧಾರ್ಮಿಕ ಕ್ಷೇತ್ರ ಹಾಗೂ ತೀರ್ಥ ಕ್ಷೇತ್ರಗಳಿಗೆ ಮಹತ್ವದ ಸ್ಥಾನವಿದೆ. ಕೇವಲ ದೇವರ ಆಶೀರ್ವಾದದಿಂದಲೇ ನಮಗೆ ಹೊಸ ಬೆಳಕು ಮತ್ತು ಹೊಸ ಮಾರ್ಗ ಲಭಿಸುತ್ತದೆ. ನಾನು ಗೋವಾದ ನನ್ನ ಬಾಂಧವರೊಂದಿಗೆ ಮಾತನಾಡಲು ಆಗಮಿಸುತ್ತಿದ್ದೇನೆ’ ಎಂದು ಟ್ವೀಟ್ ಮಾಡಿದ್ದರು.
ಗೋವಾದ ಮಾಜಿ ರಾಜ್ಯಪಾಲರು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರ ವಿರುದ್ಧ ಭ್ರಷ್ಠಾಚಾರ ಆರೋಪ ಹೋರಿಸಿದ್ದರೂ ಬಿಜೆಪಿ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿಯ ತಪ್ಪು ನೀತಿಯಿಂದಾಗಿ ಗೋವಾದಲ್ಲಿ ನಿರುದ್ಯೋಗ ಸಮಸ್ಯೆಯಿದೆ. ಈ ಎರಡೂ ಪಕ್ಷಗಳು ರಾಜ್ಯದಲ್ಲಿ ಜನತೆಗೆ ಉದ್ಯೋಗ ಕಲ್ಪಿಸಿಕೊಡುವ ಕೆಲಸ ಮಾಡಿಲ್ಲ. ಎಎಪಿ ಆರಂಭಿಸಿರುವ ಉದ್ಯೋಗ ಖಾತ್ರಿ ಕಾರ್ಯಕ್ರಮದಲ್ಲಿ 1.12 ಲಕ್ಷ ಕುಟುಂಬಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದರು.
ಕಳೆದ ಕೆಲ ದಿನಗಳ ಹಿಂದಷ್ಟೇ ಗೋವಾಕ್ಕೆ ಆಗಮಿಸಿದ್ದ ಕೇಜ್ರಿವಾಲ್ ತಮ್ಮ ಪಕ್ಷ ಗೋವಾದಲ್ಲಿ ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್ ಪೂರೈಕೆ ಮಾಡುವುದಾಗಿ ಭರವಸೆ ನೀಡಿದ್ದರು.