ಹೊಸದಿಲ್ಲಿ : ಅಯೋಧ್ಯೆ ಭೂವಿವಾದ ಪ್ರಕರಣಕ್ಕೆ ಸಂಬಂಧಿಸಿ ಪರಿಹಾರ ಕಾಣಲು ಮೂವರು ಸದಸ್ಯರ ಸಂಧಾನ ಸಮಿತಿಗೆ ಸರ್ವೋಚ್ಚ ನ್ಯಾಯಾಲಯ ಆಗಸ್ಟ್ 15 ವರೆಗೆ ಕಾಲಾವಕಾಶ ನೀಡಿದೆ.
ಅಯೋಧೆಯ ರಾಮ ಮಂದಿರ-ಬಾಬರಿ ಮಸೀದಿ ಕೇಸಿನಲ್ಲಿ ಸಮಿತಿಯು ಇಂದು ಶುಕ್ರವಾರ ಮುಚ್ಚಿದ ಲಕೋಟೆಯಲ್ಲಿ ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಿತು ಮತ್ತು ವಿವಾದಕ್ಕೆ ಪರಿಹಾರ ಕಾಣಲು ಹೆಚ್ಚುವರಿ ಕಾಲಾವಕಾಶ ಕೋರಿತು.
ವರಿಷ್ಠ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠದಲ್ಲಿ ಜಸ್ಟಿಸ್ ಎಸ್ ಎ ಬೋಬಡೆ, ಡಿವೈ ಚಂದ್ರಚೂಡ್, ಅಶೋಕ್ ಭೂಷಣ್ ಮತುತ ಎಸ್ ಅಬ್ದುಲ ನಜೀರ್ ಅವರೂ ಇದ್ದಾರೆ.
ಈ ವರ್ಷ ಮಾರ್ಚ್ 8ರಂದು ಸುಪ್ರೀಂ ಕೋರ್ಟ್ ಮೂವರು ಸದಸ್ಯರ ಸಂಧಾನ ಸಮಿತಿಯನ್ನು ರಚಿಸಿ ಅಯೋಧ್ಯೆ ಭೂವಿವಾದಕ್ಕೆ ಪರಿಹಾರ ಶೋಧಿಸುವಂತೆ ಕೇಳಿಕೊಂಡಿತ್ತು.
ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಫಕ್ಕಿರ್ ಮೊಹಮ್ಮದ್ ಇಬ್ರಾಹಿಂ ಕಲೀಫುಲ್ಲಾ ಸಮಿತಿಯ ನೇತೃತ್ವ ವಹಿಸಿದ್ದು ಸದ್ಯಸರಾಗಿ ಶ್ರೀ ಶ್ರೀ ರವಿ ಶಂಕರ್ ಮತ್ತು ಹಿರಿಯ ಮದ್ರಾಸ್ ಹೈಕೋರ್ಟ್ ವಕೀಲರ ಶ್ರೀರಾಮ್ ಪಂಚು ಇದ್ದಾರೆ.
ಎಂಟು ವಾರಗಳ ಒಳಗೆ ಸಂಧಾನ ಪ್ರಕ್ರಿಯೆ ಪೂರೈಸಲು ಸಮಿತಿಯನ್ನು ಕೇಳಿಕೊಳ್ಳಲಾಗಿತ್ತು. ಮೇ 7ರಂದು ಸಮಿತಿಯು ತನ್ನ ವರದಿಯನ್ನು ಸಲ್ಲಿಸಿತ್ತು.