ಮಧ್ಯಾಹ್ನ: 12.44 : ಮೊದಲ ಇಟ್ಟಿಗೆ ಇರಿಸಲಿರುವ ಪ್ರಧಾನಿ ಮೋದಿ
Advertisement
ಮುಹೂರ್ತ ಹೇಗಿದೆ?– ಮಧ್ಯಾಹ್ನ 12.30, ತುಲಾ ಲಗ್ನ, ಶತಭಿಷ ನಕ್ಷತ್ರ, ಶ್ರಾವಣ ಮಾಸ
– ಶ್ರಾವಣ ಮಾಸದ ಅಧಿದೇವತೆ ವಿಷ್ಣು ರಾಮನ ಮೂಲ ಅವತಾರ
– ಶತಭಿಷ ನಕ್ಷತ್ರ ವಿಷ್ಣು ದೇವರ ಪ್ರತಿಷ್ಠೆಗೆ ಅತ್ಯಂತ ಸೂಕ್ತ ನಕ್ಷತ್ರಗಳಲ್ಲೊಂದು.
– ಬಿದಿಗೆ ತಿಥಿಯಲ್ಲಿ ಚಂದ್ರ ವೃದ್ಧಿಯಲ್ಲಿರುತ್ತಾನೆ.
– ದಶಮದಲ್ಲಿರುವ ರವಿ ಸರ್ವ ಕರ್ಮಗಳಿಗೆ ಸಿದ್ಧಿ, ಸರ್ವತಃ ಜಯ ತರುವನು.
– ಶ್ರೀ ರಾಮ ಸೂರ್ಯವಂಶದ ಮಹಾರಾಜನೂ ಆಗಿರುವುದರಿಂದ ಮಧ್ಯಾಹ್ನದ ಹೊತ್ತಿನಲ್ಲಿ ನೆತ್ತಿ ಮೇಲಿರುವ ರವಿಯಿಂದಲೇ ಆಶೀರ್ವಾದ ಸಿಗುವುದು.
Related Articles
ಪ್ರಧಾನಿ ಮೋದಿ ಬುಧವಾರ 40 ಕಿಲೋ ತೂಕದ ಮೊದಲ ಬೆಳ್ಳಿ ಇಟ್ಟಿಗೆ ಪ್ರತಿಷ್ಠಾಪಿಸಲಿದ್ದಾರೆ. ವಿಹಿಂಪ ಮುಖಂಡ ದಿ| ಅಶೋಕ್ ಸಿಂಘಲ್ ಅವರ ಸೋದರಳಿಯ ಸಲಿಲ್ ಸಿಂಘಲ್ ‘ಯಜಮಾನ’ನಾಗಿ ಭೂಮಿಪೂಜೆ ಮುನ್ನಡೆಸಲಿದ್ದಾರೆ. ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಜೀ ಭಾಗವತ್, ಸಿಎಂ ಯೋಗಿ ಆದಿತ್ಯನಾಥ್, ನ್ಯಾಸ ಮುಖ್ಯಸ್ಥ ಮಹಾಂತ ನೃತ್ಯ ಗೋಪಾಲದಾಸ್ ವೇದಿಕೆ ಅಲಂಕರಿಸಲಿದ್ದಾರೆ.
Advertisement
9 ಶಿಲೆಗಳಿಗೆ ಪೂಜೆ
1989-90ರಲ್ಲಿ ರಾಮ ಮಂದಿರ ನಿರ್ಮಾಣ ಆಂದೋಲನಕ್ಕೆ ಬಳಸಿದ್ದ 9 ಶಿಲೆಗಳಿಗೆ ಪ್ರಧಾನಿ ಮೋದಿ ಪೂಜೆ ಸಲ್ಲಿಸಲಿದ್ದಾರೆ. ಈ ಶಿಲೆಗಳಲ್ಲಿ ಒಂದು ಗರ್ಭ ಗೃಹದಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ. ರಾಮಮಂದಿರ ಕೆಲಸ ಆರಂಭ ಐತಿಹಾಸಿಕ, ಭಾವನಾತ್ಮಕ ಕ್ಷಣ. ಇದು ನವಭಾರತಕ್ಕೆ ಹಾಕುವ ಅಡಿಪಾಯವೂ ಹೌದು ಎಂದು ಉ.ಪ್ರ. ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಹೇಳಿದ್ದಾರೆ. ದೂರದರ್ಶನದಲ್ಲಿ ಭೂಮಿಪೂಜೆಯ ನೇರಪ್ರಸಾರ ಮೂಡಿಬರಲಿದೆ. ಆಡ್ವಾಣಿ, ಜೋಶಿ ಜತೆ ಚರ್ಚಿಸಿ ಆಹ್ವಾನ
ಇಡೀ ಸಮಾರಂಭಕ್ಕೆ 175 ಮಂದಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಯಾರನ್ನು ಕರೆಯಬೇಕು ಎಂಬ ಬಗ್ಗೆ ಬಿಜೆಪಿ ನಾಯಕರಾದ ಎಲ್. ಕೆ. ಆಡ್ವಾಣಿ, ಮುರಳಿ ಮನೋಹರ ಜೋಶಿ ಮತ್ತು ಹಿರಿಯ ವಕೀಲ ಕೆ. ಪರಾಶರನ್ ಅವರೊಂದಿಗೆ ಚರ್ಚಿಸಲಾಗಿದೆ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ. ವೀರ ಹನುಮಗೆ ನಿಶಾನ್ ಪೂಜೆ
ಮಂಗಳವಾರ ಬೆಳಗ್ಗೆ 9ರಿಂದಲೇ ‘ನಿಶಾನ್ ಪೂಜೆ’ ನೆರವೇರಿತು. 1700 ವರ್ಷಗಳಷ್ಟು ಪುರಾತನವಿರುವ ಅಯೋಧ್ಯೆಯ ಹನುಮಾನ್‌ಗಢಿಯಲ್ಲಿ ವಿಧಿ ವಿಧಾನಗಳು ನಡೆದವು. ಅಯೋಧ್ಯೆಯ ಶ್ರೀರಾಮನ ಸನ್ನಿಧಾನಕ್ಕೆ ಕಿಷ್ಕಿಂಧೆಯ ವೀರ ಹನುಮನೇ ಕಾವಲುಗಾರ ಎಂಬ ನಂಬಿಕೆಯಿದೆ. ಭಗವಾನ್ ಹನುಮನ ಅನುಮತಿ ಇಲ್ಲದೆ ಯಾರೂ ರಾಮಲಲ್ಲಾನ ಸನ್ನಿಧಿಗೆ ಪ್ರವೇಶಿಸುವಂತಿಲ್ಲ. ಈ ಕಾರಣಕ್ಕಾಗಿ ರಾಮನಿಗೆ ಮಂದಿರ ನಿರ್ಮಿಸುವಾಗ ಹನುಮನ ಪ್ರೀತ್ಯರ್ಥ ನಿಶಾನ್ ಪೂಜೆ ಜರಗಿತು.
6-7 ನಿಮಿಷ ಪ್ರಾರ್ಥನೆ
ಇಲ್ಲಿರುವ ಆಂಜನೇಯ ಬಾಲಹನುಮಾನ್ ಆಗಿದ್ದು ತಾಯಿ ಅಂಜನಿಯ ಮಡಿಲಿನಲ್ಲಿ ಆಸೀನನಾಗಿದ್ದಾನೆ. ಪ್ರಧಾನಿ ಅವರು ಇಲ್ಲಿ 6-7 ನಿಮಿಷ ಪ್ರಾರ್ಥನೆಯಲ್ಲಿ ಕಳೆಯುವರು. ರಾಮಜನ್ಮಭೂಮಿ ಸಂಕೀರ್ಣದಲ್ಲಿ ಮಂಗಳವಾರ ರಾಮಚರಣ ಪೂಜೆಯೂ ನೆರವೇರಿತು. ರಾವಣನೊಂದಿಗೆ ಯುದ್ಧದಲ್ಲಿ ಶ್ರೀರಾಮನಿಗೆ ನೆರವಾದ ಹನುಮಾನ್, ನಳ ಮತ್ತು ನೀಲ, ಸುಗ್ರೀವ, ಜಾಂಬವಂತ, ವಿಭೀಷಣರಿಗೆ ವಿಶೇಷ ಅರ್ಚನೆಗಳು ನಡೆದವು. 32 ಸೆಕೆಂಡುಗಳ ಶುಭ ಮುಹೂರ್ತ
ಬುಧವಾರದ ಭೂಮಿಪೂಜೆ ಸಮಾರಂಭ 12.30ಕ್ಕೆ ಆರಂಭಗೊಳ್ಳುತ್ತದೆ. ಪ್ರಧಾನಿ ಮೋದಿ ಅವರು ಮೊದಲ ಇಟ್ಟಿಗೆ ಪ್ರತಿಷ್ಠಾಪಿಸಲಿರುವ 12.44:08ರಿಂದ 12.44:40ರ 32 ಸೆಕೆಂಡುಗಳ ಅವಧಿ ಅತ್ಯಂತ ಶುಭ ಮುಹೂರ್ತ. ಆಹ್ವಾನಿತರಿಗೆ ರಾಮ ಮುದ್ರೆಯ ಬೆಳ್ಳಿ ನಾಣ್ಯ
ಸಮಾರಂಭದ ಸವಿನೆನಪಿಗಾಗಿ ಅತಿಥಿಗಳಿಗೆ ಒಂದು ಬದಿ ರಾಮ, ಲಕ್ಷ್ಮಣ ಮತ್ತು ಸೀತೆಯ ಚಿತ್ರ, ಮತ್ತೂಂದು ಬದಿಯಲ್ಲಿ ಕಾರ್ಯಕ್ರಮದ ದಿನಾಂಕ ಟಂಕಿಸಿದ ಬೆಳ್ಳಿ ನಾಣ್ಯ ನೀಡಲಾಗುತ್ತದೆ.
ಪ್ರಧಾನಿ ವೇಳಾಪಟ್ಟಿ
– ಸಾಕೇತ್ ಕಾಲೇಜಿನ ಮೈದಾನದಲ್ಲಿ ಪಿಎಂ ಹೆಲಿಕಾಪ್ಟರ್ ಭೂಸ್ಪರ್ಶ.
– ಯೋಗಿ ಆದಿತ್ಯನಾಥ್ ಜತೆಗೂಡಿ ಹನುಮಾನ್ ಗಢಿಯಲ್ಲಿ
– 6-7 ನಿಮಿಷ ವಿಶೇಷ ಪೂಜೆ.
– ರಾಮಜನ್ಮಭೂಮಿ ಸಂಕೀರ್ಣಕ್ಕೆ ಆಗಮನ.
– ರಾಮಲಲ್ಲಾ ಮುಂದೆ 10 ನಿಮಿಷ ಪ್ರಾರ್ಥನೆ.
– ಭೂಮಿಪೂಜೆ ಸ್ಮರಣಾರ್ಥ ಪಾರಿಜಾತ ಗಿಡ ನೆಡಲಿದ್ದಾರೆ.
– ಭೂಮಿಪೂಜೆಯಲ್ಲಿ ಭಾಗಿ.
– ಮೊದಲ ಬೆಳ್ಳಿ ಇಟ್ಟಿಗೆ ಪ್ರತಿಷ್ಠಾಪನೆ.
– ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ಭೇಟಿ
– ಅಯೋಧ್ಯೆಯಿಂದ ನಿರ್ಗಮನ ದೀಪ ಹಚ್ಚಿ, ದೇಗುಲಗಳಲ್ಲಿ ಪೂಜೆ: ಸಿಎಂ ಮನವಿ
ಅಯೋಧ್ಯೆಯಲ್ಲಿ ಬುಧವಾರ ಭೂಮಿಪೂಜೆ ನಡೆಯಲಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ದೇವಾಲಯಗಳು ಮತ್ತು ಪ್ರತೀ ಮನೆಯಲ್ಲಿ ಇಷ್ಟ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮುಂದಿನ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನಡೆಯಲಿ ಎಂದು ಪ್ರಾರ್ಥಿಸಬೇಕು ಎಂದು ಸಿಎಂ ಯಡಿಯೂರಪ್ಪ ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ. ಎಲ್ಲರಿಗೂ ಪ್ರಭು ಶ್ರೀರಾಮಚಂದ್ರ ಶಾಂತಿ, ನೆಮ್ಮದಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.