ಜೇವರ್ಗಿ: ಈ ಭಾಗದ ಜನರ ಆರಾಧ್ಯ ದೇವತೆ ಶ್ರೀ ಮಹಾಲಕ್ಷ್ಮೀ(ಆಯಿ) ಜಾತ್ರೆಗೆ ಬರುವ ಸಾವಿರಾರು ಭಕ್ತರಿಗಾಗಿ ಹುಳಿಬಾನಾ ಪ್ರಸಾದ ಸಿದ್ಧಪಡಿಸಲಾಗುತ್ತಿದೆ. ಮಹಾಲಕ್ಷ್ಮೀ ದೇವಿ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಕುರುಬ ಸಮಾಜದವರು ಪ್ರತಿ ವರ್ಷ ಜಾತ್ರೆ ಸಂದರ್ಭದಲ್ಲಿ ತಯಾರಿಸುವ ಹುಳಿಬಾನು ಭಕ್ತರಿಗೆ ಬಹಳ ಇಷ್ಟ ಹಾಗೂ ಪ್ರೀತಿ.
ಪ್ರತಿ ವರ್ಷದಂತೆ ಈ ವರ್ಷವೂ ಅದ್ಧೂರಿಯಾಗಿ ಮಹಾಲಕ್ಷ್ಮೀ ಜಾತ್ರೆ ಆಯೋಜಿಸಲಾಗಿದ್ದು, ಶನಿವಾರ ಅದ್ಧೂರಿ ರಥೋತ್ಸವ ನಡೆಯಲಿದೆ. ರಥೋತ್ಸವಕ್ಕೆ ಬರುವ ಡೊಳ್ಳು ಸೇರಿದಂತೆ ವಿವಿಧ ಕಲಾ ತಂಡದವರಿಗೆ ಹಾಗೂ ಜಾತ್ರೆಗೆ ಬರುವ ಭಕ್ತಾಗಳಿಗಾಗಿ ವಿಶೇಷವಾಗಿ ಹುಳಿಬಾನಾ ಪ್ರಸಾದ ಸಿದ್ಧಪಡಿಸಲಾಗುತ್ತಿದೆ. ಇದು ದೇಹಕ್ಕೆ ಪೌಷ್ಟಿಕಾಂಶ ಒದಗಿಸುವುದರ ಜತೆಗೆ ತಂಪು ನೀಡುತ್ತದೆ.
ಮಹಾಲಕ್ಷ್ಮೀ ದೇವಸ್ಥಾನದ ಸಮಿತಿ ವತಿಯಿಂದ ನೀಡುವ ಜೋಳ ತೆಗೆದುಕೊಂಡು ಕುರುಬ ಸಮಾಜದವರು ಪ್ರತಿವರ್ಷ ಹುಳಿಬಾನ ತಯಾರಿಸಿ ಭಕ್ತರಿಗೆ ವಿತರಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಜೋಳದಿಂದ ತಯಾರಿಸುವ ಈ ಹುಳಿಬಾನವನ್ನು ಜಾತ್ರೆ ಸಂದರ್ಭದಲ್ಲಿ 10ರಿಂದ 15 ದಿನಗಳ ಕಾಲ ನಿರಂತರ ಮಾಡಿ, ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತಿದೆ.
ಜೋಳ ನೆನೆಸಿ, ನಂತರ ಒಣಗಿಸಿ ಅದನ್ನು ಒಳ್ಳಿನಲ್ಲಿ ಕುಟ್ಟಿ ಜೋಳದ ಮೇಲಿನ ಪದರು ಬೇರೆ ಮಾಡಿ ಹುಳಿಬಾನಾ ತಯಾರಿಸಲಾಗುತ್ತದೆ. ಹುಳಿಬಾನಾ ಜತೆಗೆ ಹಸಿ ಮೆಣಸಿನ ಕಾಯಿ ಚಟ್ನಿಯನ್ನು ಕೊಡಲಾಗುತ್ತದೆ. ಕುರುಬ ಸಮುದಾಯದವರು ಪ್ರತಿವರ್ಷ 16 ಕ್ವಿಂಟಲ್ ಜೋಳ ತರುತ್ತಾರೆ. ಕುರುಬ ಸಮುದಾಯದ ಮಹಿಳೆಯರು ಈ ಅಡುಗೆ ಮಾಡಿಸುತ್ತಾರೆ. ಇವರು ಮಾಡುವ ಈ ಬಾನ ಬಹಳ ರುಚಿಯಾಗಿರುತ್ತದೆ. ಪಟ್ಟಣದ ಮಾಳಿಂಗರಾಯನ ದೇವಸ್ಥಾನದಲ್ಲಿ ಶನಿವಾರ ಬೆಳಗ್ಗೆ 8 ಗಂಟೆಯಿಂದ ಹುಳಿಬಾನ ಪ್ರಸಾದ ವಿತರಣೆ ಮಾಡಲಾಗುತ್ತದೆ.
ಹುಳಿಬಾನಾ ತಯಾರಿಸುವ ಸಂದರ್ಭದಲ್ಲಿ ಕುರುಬ ಸಮಾಜದ ರಾಮಣ್ಣ ಪೂಜಾರಿ, ನಿಂಗಪ್ಪ ಪೂಜಾರಿ, ಚಂದ್ರಶೇಖರ ಕುನ್ನೂರ, ಶರಣಗೌಡ ಸರಡಗಿ, ಕಾಮಣ್ಣ ಹಿರಿಪೂಜಾರಿ, ಮಂಗಣ್ಣ ಹಿರಿಪೂಜಾರಿ, ಶರಣಬಸ್ಸು ಯಡ್ರಾಮಿ, ರಾಜು ರದ್ದೇವಾಡಗಿ, ಬಸಣ್ಣ ಪೂಜಾರಿ, ಮರೆಪ್ಪ ಸರಡಗಿ ಮತ್ತಿತರರು ಇದ್ದರು.