ಮೈ ಝುಮ್ ಎನ್ನಿಸುವಂತಹ ಸ್ಟಂಟ್. ಕಣ್‌ರೆಪ್ಪೆ ಮುಚ್ಚಿ ತೆರೆಯುವಷ್ಟರಲ್ಲೇ ಜಿಗಿ ಜಿಗಿದು ಹೊಡೆಯೋ ತಾಕತ್ತು. ಗಿರ ಗಿರನೆ ತಿರುಗುವ ಕಣ್ಣು. ಪಟ ಪಟ ಉದುರುವ ಮಾತು. ಆಗಾಗ ಹೊರಚೆಲ್ಲುವ ತುಟಿಯಂಚಿನ ನಗು. ಎಂಥಾ ಸಾಹಸಕ್ಕೂ ರೆಡಿ ಎನ್ನುವ ಧೈರ್ಯ. ಎಲ್ಲವನ್ನೂ ಮೆಟ್ಟಿ ನಿಲ್ಲುತ್ತೇನೆಂಬ ಆತ್ಮವಿಶ್ವಾಸ. ಇದು ಆಯೇಷಾ ಎಂಬ ಲೇಡಿ ಬ್ರೂಸ್ಲಿಯ ಒನ್‌ಲೈನ್.
ಪಕ್ಕಾ ಆ್ಯಕ್ಷನ್ ನಟಿ ಎಂದೇ ಗುರುತಿಸಿಕೊಂಡ ಆಯೇಷಾ, ಎಲ್ಲೋ ಮಾಯವಾಗಿಬಿಟ್ಟರು ಎನ್ನುತ್ತಿದ್ದವರಿಗೆ ಅವರೀಗ “ವಿಜಯ ಶಾಂತಿ’ ಮೂಲಕ ಉತ್ತರ ಕೊಟ್ಟಿದ್ದಾರೆ. ಹೌದು, ಆಯೇಷಾ ಈಗ “ವಿಜಯ ಶಾಂತಿ’ ಎಂಬ ಹೊಸ ಚಿತ್ರದ ಮೂಲಕ ರೀ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಸಾರಥಿ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಶ್ರೀ ಮುರಳಿ ಅವರ “ಸಿಹಿಗಾಳಿ’ ನಿರ್ದೇಶಿಸಿದ್ದ ಸಾರಥಿ ನಂತರದ ದಿನಗಳಲ್ಲಿ “ಅಪ್ಸರೆ’ ಚಿತ್ರ ಮಾಡಿದ್ದರು.
ಈಗ “ಆತಂಕ’ ಚಿತ್ರ ನಿರ್ದೇಶಿಸಿ ಬಿಡುಗಡೆಯ ತಯಾರಿಯಲ್ಲಿರುವಾಗಲೇ, “ವಿಜಯ ಶಾಂತಿ’ಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಕೇಳಿದಾಕ್ಷಣ, ಹಾಗೊಮ್ಮೆ ತೆಲುಗಿನ ಖ್ಯಾತ ನಟಿ ಆ್ಯಕ್ಷನ್ ಕ್ವೀನ್ ವಿಜಯಶಾಂತಿ ಅವರ ನೆನಪಾಗುತ್ತೆ. ಇಲ್ಲಿ ಟೈಟಲ್‌ನಂತೆಯೇ ಪಕ್ಕಾ ಆ್ಯಕ್ಷನ್ ಫೋರ್ಸ್ ಕೂಡ ಇದೆ. ಚಿತ್ರದಲ್ಲಿ ಅಶೋಕ್ ಚೌದರಿ ನಾಯಕರಾಗಿ ಕಾಣಿಸಿಕೊಂಡರೆ, ರಾಹುಲ್ ದೇವ್ ಖಳನಟರಾಗಿ ನಟಿಸುತ್ತಿದ್ದಾರೆ.
ತಾಯಿಯಾಗಿ ರೇಣು, ರಾಕ್‌ಲೈನ್ ಸುಧಾಕರ್, ನಾಗೇಶ್ ಮಯ್ಯ, ಮನಮೋಹನ್ ರೈ ಇತರರು ಅಭಿನಯಿಸುತ್ತಿದ್ದಾರೆ. ಆಯೇಷಾ ಮೇಲೆಯೇ ಸಾಗುವ ಚಿತ್ರವಾದ್ದರಿಂದ ಇಲ್ಲಿ ಭರ್ಜರಿ ಆ್ಯಕ್ಷನ್‌ಗಳಿಗೇನೂ ಕಮ್ಮಿ ಇಲ್ಲ. ಅವರಿಲ್ಲಿ ಐಪಿಎಸ್ ಅಧಿಕಾರಿ ಪಾತ್ರ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ದಕ್ಷ ಪೊಲೀಸ್ ಅಧಿಕಾರಿ, ಭ್ರಷ್ಟರ ವಿರುದ್ಧ ಹೋರಾಡುವುದು ಸಹಜ.
ಆದರೆ, ಆಯೇಷಾ ತಮ್ಮ ಕುಟುಂಬದವರ ಜೊತೆ ಹೋರಾಟ ನಡೆಸುತ್ತಾರೆ. ಯಾಕೆ, ಹೇಗೆ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು ಎಂಬುದು ನಿರ್ದೇಶಕರ ಮಾತು. ಅಕ್ಟೋಬರ್ 10 ರಿಂದ ಚಿತ್ರೀಕರಣ ಶುರುವಾಗಲಿದೆ. ಸುಮಾರು 30 ದಿನಗಳ ಕಾಲ ಬೆಂಗಳೂರು, ಮಂಗಳೂರು, ವೈಜಾಕ್ ಮತ್ತು ಗೋವಾ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ವಲ್ಲಿ ಚಿತ್ರದ ನಿರ್ಮಾಪಕರು.
ಇವರಿಗೆ ರವೀಂದ್ರ ರೆಡ್ಡಿ ಮತ್ತು ಕಮಲ್ ನಿರ್ಮಾಣದಲ್ಲಿ ಸಾಥ್ ನೀಡುತ್ತಿದ್ದಾರೆ. ಕೃಪಾಕರ್ ನಾಲ್ಕು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ನಾಗೇಶ್ವರರಾವ್ ಛಾಯಾಗ್ರಹಣವಿದೆ. ವೆಂಕಿ ಸಂಕಲನ ಮಾಡಿದರೆ, ಕೌರವ ವೆಂಕಟೇಶ್ ಸಾಹಸವಿದೆ.