ಶಿವಮೊಗ್ಗ: ವಿಧಾನಸಭೆ ಚುನಾವಣೆ ಟಿಕೆಟ್‌ಗಾಗಿ ಮಾಜಿ ಸಚಿವ ಈಶ್ವರಪ್ಪ ವಿರುದ್ಧ ತೊಡೆ ತೊಟ್ಟಿರುವ ಎಂಎಲ್‌ಸಿ ಆಯನೂರು ಮಂಜುನಾಥ್ ಗುರುವಾರ ನೂತನ ಕಚೇರಿ ಪ್ರವೇಶ ಮಾಡಿದರು. ಬಿಜೆಪಿ ಕಚೇರಿ ಕೂಗಳತೆ ದೂರದಲ್ಲೇ ಇರುವ ಕಚೇರಿಯಲ್ಲಿ ಪೂಜೆ ಸಲ್ಲಿಸಿ, ಸಿಹಿ ಹಂಚುವ ಮೂಲಕ ಚಾಲನೆ ನೀಡಿದರು.
ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಸರಕಾರಿ ಕಟ್ಟಡದಲ್ಲಿದ್ದ ಕಚೇರಿಯನ್ನು ಬಂದ್ ಮಾಡಲಾಗಿತ್ತು. ಹೀಗಾಗಿ ನೂತನ ಕಚೇರಿಗೆ ಅಧಿಕೃತವಾಗಿ ಶಿಫ್ಟ್ ಆದರು. ಸ್ನೇಹಿತರು, ಬಂಧುಗಳು ಶುಭ ಕೋರಿದರು. ವಿಧಾನ ಪರಿಷತ್ ಶಾಸಕರ ಕಾರ್ಯಾಲಯ ಎಂದೇ ಫ್ಲೆಕ್ಸ್ ಹಾಕಿರುವುದು ಮತ್ತೂಂದು ವಿಶೇಷ.
ಈ ವೇಳೆ ಮಾತನಾಡಿದ ಆಯನೂರು, ಸರಕಾರಿ ಕಚೇರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಬಂದ್ ಆಗಿದೆ. ಇದರಿಂದ ನನ್ನನ್ನು ಭೇಟಿ ಮಾಡಲು ಬರುವವರಿಗೆ ತೊಂದರೆ ಆಗುತ್ತಿತ್ತು. ಕಚೇರಿ ಸ್ಥಳಾಂತರಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಚುನಾವಣೆಗೆ ಸ್ಪ ರ್ಧಿಸುವ ತಮ್ಮ ನಿಲುವು ಸರಿಯಿದೆ. ಶಿವಮೊಗ್ಗದಲ್ಲಿ ಶಾಂತಿ ಮಾತ್ರವಲ್ಲ, ನೆಮ್ಮದಿಯ ಅಗತ್ಯವಿದೆ ಎಂದು ಹೇಳಿ ಬೆಂಬಲಿಸಿದ್ದಾರೆ. ಇದು ನನ್ನ ನಿರ್ಧಾರವನ್ನು ಬೆಂಬಲಿಸಿದಂತಾಗಿದೆ. ಇನ್ನೂ 2-3 ದಿನ ಕಾಯುತ್ತೇನೆ. ರಾಷ್ಟ್ರೀಯ ಪಕ್ಷಗಳು ಯಾರನ್ನು ಕಣಕ್ಕಿಳಿಸಲಿವೆ ಎಂಬುದನ್ನು ನೋಡುತ್ತೇನೆ.
ಮುಂದಿನ ಕಾರ್ಯತಂತ್ರ ರೂಪಿಸಲು ಇದರಿಂದ ನೆರವಾಗುತ್ತದೆ. ಯಾರನ್ನು ಎದುರಿಸಬೇಕು ಎಂಬುದು ನನಗೆ ಗೊತ್ತಾಗುತ್ತದೆ. ಮುಂದಿನ ಚುನಾವಣಾ ವ್ಯೂಹ ರಚಿಸಲು ನೆರವಾಗುತ್ತದೆ. ಶಿವಮೊಗ್ಗದ ಪ್ರತಿನಿ ಧಿಯಾಗಬೇಕು ಎಂಬ ನನ್ನ ಉತ್ಕಟ ಇಚ್ಛೆ ಈಡೇರಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು.