ಬೆಂಗಳೂರು: ಈಗಾಗಲೇ ಘೋಷಿಸಿಕೊಂಡಂತೆ ಮಾಜಿ ಸಂಸದ, ಜೆಡಿಎಸ್ ನಲ್ಲಿದ್ದ ಆಯನೂರು ಮಂಜುನಾಥ್ ಅವರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಅವರ ಜೊತೆಗೆ ಶಿಕಾರಿಪುರದ ನಾಗರಾಜ್ ಗೌಡ ಅವರು ಕಾಂಗ್ರೆಸ್ ಕೈ ಹಿಡಿದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಮ್ ಅಹ್ಮದ್, ಚಂದ್ರಪ್ಪ, ಸಚಿವ ಮಧು ಬಂಗಾರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಆಯನೂರು ಮಂಜುನಾಥ್ ಅವರು, ವಿಧಾನಸಭಾ ಚುನಾವಣೆ ವೇಳೆಯೇ ಕಾಂಗ್ರೆಸ್ ಸೇರಬೇಕಿತ್ತು. ಆಗ ಜೆಡಿಎಸ್ ನಿಂದ ನಾನು ಸ್ಪರ್ಧೆಗಿಳಿಯಬೇಕಾಯ್ತು. ಮುಂಬರುವ ಚುನಾವಣೆಯಲ್ಲಿ ಸಮಯ, ಶಕ್ತಿ ನೀಡಿ ದುಡಿಯುವ ನಿಲುವನ್ನು ಹೊಂದಿದ್ದೇನೆ. ಮುಂಬರುವ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತೇನೆ ಎಂದಿದ್ದರು.
ಕಾಂಗ್ರೆಸ್ ಗೆ ಈಗ ಸೇರಿಕೊಳ್ಳುತ್ತಿದ್ದೇನೆ. ಆಗ ಅನಿವಾರ್ಯವಾಗಿ ಜೆಡಿಎಸ್ ಸೇರ್ಪಡೆಗೊಂಡಿದ್ದೆ. ಇದು ನನ್ನ ಕೊನೆಯ ಬಸ್ ಸ್ಟಾಪ್ ಆಗಿದೆ. ಆತಂಕಕ್ಕೆ ಒಳಗಾಗಿರುವ ಕೆಲ ನಾಲ್ಕು ಜನರು ನನಗೆ ವಿರೋಧಿಸುತ್ತಿದ್ದಾರೆ. ಕೆಲವರ ವಿರೋಧ ಇದ್ದರೂ ಶೇ. 99 ರಷ್ಟು ಜನರು ನನ್ನನ್ನು ಒಪ್ಪಿದ್ದಾರೆ. ನನಗೆ ವಿರೋಧಿಸುವವರಿಗೆ ನಾನು ಯಾವುದೇ ಅಡ್ಡಿಯಾಗಲ್ಲ. ನಿರಾಶೆಯಾದವರು ಯಾಕೋ ಆತಂಕಕ್ಕೊಳಗಾಗಿದ್ದಾರೆ. ನಾನು ಮತ್ತಷ್ಟು ಬಲ ತುಂಬಲು ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳುತ್ತಿದ್ದೇನೆ. ವಿರೋಧ ಮಾಡುವವರಿಗೆ ನಾನು ಅಡ್ಡಿಯಾಗಲ್ಲ ಎಂದು ಆಯನೂರು ಮಂಜುನಾಥ್ ಹೇಳಿದ್ದರು.